ಹರಪನಹಳ್ಳಿ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್
ಹರಪನಹಳ್ಳಿ, ನ.1- ಕನ್ನಡಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಇದ್ದು ಕಲೆ, ಸಾಹಿತ್ಯ, ಭಾಷೆಯಲ್ಲಿಯೂ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ ಎಂದು ಶಾಸಕರಾದ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ 68ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾವೇರಿಯಿಂದ ಗೋದಾವರಿವರೆಗೂ ಕನ್ನಡದ ಕಂಪು ಪಸರಿಸಿದ್ದು ಕನ್ನಡದ ನೆಲ, ಜಲ, ಭಾಷೆಗಾಗಿ ಸಾಕಷ್ಟು ಹೋರಾಟ ನಡೆದಿದ್ದು, ಪ್ರಮುಖವಾಗಿ ಕನ್ನಡಕ್ಕಾಗಿ ಮೊದಲ ಪ್ರಾಣ ತ್ಯಾಗ ಮಾಡಿದ ರಂಜಾನ್ ಸಾಬ್ರವರನ್ನು ನೆನಪಿಸಿಕೊಳ್ಳಬೇಕು. ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರನ್ನು ಪ್ರತಿಯೊಬ್ಬರೂ ಇಂದು ಸ್ಮರಿಸಬೇಕಿದೆ ಎಂದೂ ಅವರು, ಕನ್ನಡದ ಪ್ರೇಮ ಕೇವಲ ಒಂದೇ ದಿನಕ್ಕೆ ಸೀಮಿತವಾಗದೇ ಪ್ರತಿದಿನ ಕನ್ನಡದ ಬಗ್ಗೆ ಅಭಿಮಾನ, ಪ್ರೀತಿ ತೋರಬೇಕೆಂದರು.
ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಮಾತನಾಡಿ ಕನ್ನಡದ ನೆಲ, ಜಲ, ಭಾಷೆ ಉಳಿವಿಗಾಗಿ ಶ್ರಮಿಸಿದ ಹೋರಾಟಗಾರರನ್ನು ಸ್ಮರಿಸಬೇಕು, ಕನ್ನಡದ ಇತಿಹಾಸವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.
ಎಡಿಬಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಕನ್ನಡ ಸಹ ಪ್ರಾಧ್ಯಾಪಕ ಡಾ.ಡಿ.ತಿಪ್ಪೇಸ್ವಾಮಿಯವರು ಕನ್ನಡ ರಾಜೋತ್ಸವ ಕುರಿತು ವಿಶೇಷ ಉಪನ್ಯಾಸ ನೀಡಿ, ಕನ್ನಡ ಇತರೆ ಭಾಷೆಗಳ ಒತ್ತಡದ ನಡುವೆ ನಲುಗಿಹೋಗಿದ್ದು, ಕನ್ನಡ ನಾಡಿನಿಂದ ಬಿಟ್ಟು ಹೋದ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸುವ ಕೆಲಸವಾಗಬೇಕಾಗಿದೆ. ನಾವು ಸೌಮ್ಯ ಸ್ವಭಾವದವರು ಎಲ್ಲಾ ಭಾಷಿಗರನ್ನು ಅಪ್ಪಿಕೊಳ್ಳುತ್ತೇವೆ. ನಮ್ಮ ಭಾಷೆಗೆ ಕುತ್ತು ಬಂದಾಗ ಹೋರಾಟ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ಪ್ರತಿಯೊಬ್ಬರೂ ಕನ್ನಡದ ಬಗ್ಗೆ ಆಸಕ್ತಿ ಹೊಂದಿರಬೇಕು, ಕನ್ನಡ ಭಾಷೆಯನ್ನು ದಿನ ನಿತ್ಯದ ಜೀವನದಲ್ಲಿ ಬಳಿಸಿದಾಗ ಭಾಷೆ ಬೆಳೆಯುತ್ತದೆ ಎಂದ ಅವರು, ಕನ್ನಡ ಸಾಹಿತ್ಯ ಪರಿಷತ್ ಕಛೇರಿ ಶಿಥಿಲಾವಸ್ಥೆಯಲ್ಲಿದ್ದು, ದುರಸ್ತಿಪಡಿಸಿ ಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಎಂ.ವಿ.ಅಂಜಿನಪ್ಪ, ಟಿ.ವೆಂಕಟೇಶ್, ಡಿ.ಅಬ್ದುಲ್ ರೆಹಮಾನ್, ಲಾಟಿ ದಾದಾಪೀರ್, ಜಾಕೀರ್ ಹುಸೇನ್, ಜೋಗಿನರ ಭರತೇಶ್, ಉದ್ದಾರ ಗಣೇಶ್, ಮಂಜುನಾಥ ಇಜಂತ್ಕರ್, ಚಿಕ್ಕೇರಿ ಬಸಪ್ಪ, ಕರವೇ ಅಧ್ಯಕ್ಷ ಗಿರಜ್ಜಿ ನಾಗರಾಜ್, ತಹಶೀಲ್ದಾರ್ ಗಿರೀಶ್ ಬಾಬು, ತಾ.ಪಂ ಇಒ ಪ್ರಕಾಶ್, ಬಿಇಒ ಯು.ಬಸವರಾಜಪ್ಪ, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ಇ.ಸಿ.ಓ ಗಿರಜ್ಜಿ ಮಂಜುನಾಥ ಸೇರಿದಂತೆ, ಇತರರು ಉಪಸ್ಥಿತರಿದ್ದರು.