ಯೋಧರು ದೇಶ ಕಾಯುವ ಕೆಲಸ ಮಾಡಿದರೆ, ಸ್ವಾರ್ಥ ರಾಜಕಾರಣಿಗಳು ದೇಶವನ್ನು ಸಾಲದ ಸೂಲದಲ್ಲಿಟ್ಟಿದ್ದಾರೆ.
– ಶ್ರೀ ಯೋಗಾನಂದ ಸ್ವಾಮೀಜಿ
ಮಲೇಬೆನ್ನೂರು, ನ.1- ಭಾರತೀಯ ಭೂ ಸೇನೆಯಲ್ಲಿ 28 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ, ಮಂಗಳವಾರ ಸೇವೆಯಿಂದ ನಿವೃತ್ತರಾಗಿ ಬುಧವಾರ ಸ್ವಗ್ರಾಮ ಯಲವಟ್ಟಿಗೆ ಆಗಮಿಸಿದ ಸುಬೇದಾರ್ ಹೆಚ್.ಶಿವಕುಮಾರ್ ಅವರನ್ನು ಗ್ರಾಮಸ್ಥರು ಅಭೂತ ಪೂರ್ವವಾಗಿ ಬರಮಾಡಿಕೊಂಡರು.
ಹರಿಹರ ರೈಲ್ವೇ ನಿಲ್ದಾಣಕ್ಕೆ ಬಂದಿಳಿದ ಶಿವಕುಮಾರ್ ಅವರನ್ನು ಶಾಸಕ ಬಿ.ಪಿ.ಹರೀಶ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಇನ್ಸೈಟ್ಸ್ ಮುಖ್ಯಸ್ಥ ಜಿ.ಬಿ.ವಿನಯ್ಕುಮಾರ್ ಸೇರಿದಂತೆ ಯಲವಟ್ಟಿಯ ಮುಖಂಡರು ಹಾಗೂ ಯುವಕರು ಸೇರಿ ಸ್ವಾಗತಿಸಿ, ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಿ, ಬೀಳ್ಕೊಟ್ಟರು.
ಅಲ್ಲಿಂದ ಯಲವಟ್ಟಿಗೆ ಪ್ರವೇಶಿಸಿದ ಶಿವಕುಮಾರ್ ಅವರನ್ನು ಗ್ರಾಮಸ್ಥರು ಪೂರ್ಣ ಕುಂಭ ಮೇಳದೊಂದಿಗೆ ಸ್ವಾಗತಿಸಿ, ಅದ್ಧೂರಿ ಮೆರವಣಿಗೆ ಮಾಡಿದರು.
ಶ್ರೀ ಗುರು ಸಿದ್ಧಾಶ್ರಮದಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ದೀಪ ಬೆಳಗಿಸಿ, ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ರೈತ ಮತ್ತು ಯೋಧರಿಗೆ ನಾವ್ಯಾರೂ ಸಮಾನರಲ್ಲ. ರೈತರಿಗೆ ಮತ್ತು ಯೋಧರಿಗೆ ಸಿಗುವ ಗೌರವ ಬೇರೆ ಯಾರಿಗೂ ಸಿಗಲ್ಲ. ಅಂತಹ ಯೋಧರಿಗೆ ಈ ಊರಿನ ಜನ ತೋರಿದ ಗೌರವವನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು ಎಂದರು.
ದಾವಣಗೆರೆ ಲಯನ್ಸ್ ಕ್ಲಬ್ ಅಧ್ಯಕ್ಷ ಹಾಗೂ ಸಂಸದರ ಆಪ್ತ ಸಹಾಯಕ ಸಿ.ಹೆಚ್.ದೇವರಾಜ್ ಮಾತನಾಡಿ, ಯೋಧ ಶಿವಕುಮಾರ್ ಅವರ ಈ ಮೆರವಣಿಗೆ ದೇಶ ಭಕ್ತಿಯ ಮೆರವಣಿಗೆಯಾಗಿದೆ. `ಯೋಧ’ ಎಂಬ ಶಬ್ಧದಲ್ಲೇ ಶಕ್ತಿ-ಭಕ್ತಿ ಇದೆ. ಶಿವಕುಮಾರ್ ಅವರು ಈ ಊರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಯುವಕರು ಸೇನೆ ಸೇರುವಂತೆ ಪ್ರೇರೇಪಿಸಲಿ ಎಂದು ಆಶಿಸಿದರು.
ಗ್ರಾಮದ ಹಿರಿಯ ಮುಖಂಡ ಡಿ.ಯೋಮಕೇಶ್ವರಪ್ಪ ಮಾತನಾಡಿ, ಶಿವಕುಮಾರ್ ನಮ್ಮೂರಿನ ಯುವಕರಿಗೆ ಆದರ್ಶವಾಗಿದ್ದು, ಇನ್ನೊಬ್ಬ ಸೈನಿಕ ರಿಯಾಜ್ ಕೂಡಾ ನಮ್ಮೂರಿನ ಹೆಮ್ಮೆ ಎಂದರು.
ಗ್ರಾಮದ ನಿವೃತ್ತ ಶಿಕ್ಷಕ ಜಿ.ಬಸಪ್ಪ ಮೇಷ್ಟ್ರು, ಪ್ರವಚನಕಾರ ಸಿರಿಗೆರೆ ಸಿದ್ದೇಶ್, ಪತ್ರಕರ್ತರಾದ ಜಿಗಳಿ ಪ್ರಕಾಶ್, ಹೆಚ್.ಎಂ.ಸದಾನಂದ್, ನಿವೃತ್ತ ಯೋಧ ವಾಸುದೇವ್, ರಾಜೇಂದ್ರ, ರಾಣೇಬೆನ್ನೂರಿನ ನಿವೃತ್ತ ಪ್ರಿನ್ಸಿಪಾಲ್ ಪ್ರಭುಲಿಂಗಪ್ಪ ಹಲಗೇರಿ, ಗ್ರಾಮದ ಯೋಧ ರಿಯಾಜ್, ಪ್ರಗತಿಪರ ಯುವ ಚಿಂತಕ ಕುಂದೂರು ಮಂಜಪ್ಪ ಮಾತನಾಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸುಬೇದಾರ್ ಹೆಚ್.ಶಿವಕುಮಾರ್, ನಮ್ಮೂರಿನ ಎಲ್ಲಾ ಜನರ ಹಾಗೂ ಬಂಧು-ಮಿತ್ರರ ಈ ಪ್ರೀತಿ-ಗೌರವಕ್ಕೆ ನಾನು ಚಿರಋಣಿಯಾಗಿರುತ್ತೇನೆಂದು ಭಾವುಕರಾದರು.
ಹಳ್ಳಿಗಳಲ್ಲಿ ಯುವಕರು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕಳೆದು ಹೋಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಶಿವಕುಮಾರ್ ಅವರು, ಪಿಯುಸಿ, ಡಿಗ್ರಿ ಓದಿ ಮನೆಯಲ್ಲಿರುವ ಯುವಕರಿಗೆ ಸೇನಾ ತರಬೇತಿ ನೀಡಿ, ಅವರನ್ನು ಸೇನೆಗೆ ಕಳುಹಿಸುವ ಇಚ್ಛೆ ಹೊಂದಿದ್ದೇನೆ ಎಂದು ಹೇಳಿ, ತಮ್ಮ ಸೇವೆಯ ಜರ್ನಿಯನ್ನು ಬಿಚ್ಚಿಟ್ಟರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಗುರು ಸಿದ್ಧಾಶ್ರಮದ ಯೋಗಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಯೋಧರು ಗಡಿಯಲ್ಲಿ ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೇ ದೇಶ ಕಾಯುವ ಕೆಲಸ ಮಾಡುತ್ತಿದ್ದರೆ, ನಮ್ಮ ಸ್ವಾರ್ಥ ರಾಜಕಾರಣಿಗಳು ಸಾಲ ಮಾಡಿ, ದೇಶವನ್ನು ಸಾಲದ ಸೂಲದಲ್ಲಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಲಂಚಕ್ಕಾಗಿ ಹೋರಾಟ ಮಾಡುವವರು ದೇಶ ದ್ರೋಹಿಗಳೆಂದು ದೂರಿದ ಶ್ರೀಗಳು, ಅನ್ನ ಕೊಡುವ ರೈತ ಮತ್ತು ದೇಶ ರಕ್ಷಣೆ ಮಾಡುವ ಯೋಧರೇ ನಮ್ಮ ನಿಜವಾದ ದೇಶ ಪ್ರೇಮಿಗಳಾಗಿದ್ದಾರೆ. ಹಾಗಾಗಿ ಈ ಇಬ್ಬರನ್ನು ಪ್ರತಿನಿತ್ಯ ನೆನೆಯಿರಿ ಎಂದು ಕರೆ ನೀಡಿದರು.
ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಅವರೂ ಶಿವಕುಮಾರ್ ಅವರನ್ನು ಗೌರವಿಸಿದರು.
ತಾ. ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟ ಲಿಂಗರಾಜ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಡಿ.ಹೆಚ್.ಚನ್ನಬಸಪ್ಪ, ಡಿ.ಹೆಚ್.ಮಹೇಂದ್ರಪ್ಪ, ಕೆ.ನರಸಪ್ಪ, ಎ.ಸುರೇಶ್, ಬಿ.ಸಿದ್ದೇಶ್, ಕೆ.ಸಿದ್ದೇಶ್, ಬಿ.ಬಸವರಾಜ್, ಹನಗವಾಡಿ ಶರಣಪ್ಪಯ್ಯ, ಎಂ.ಕೆ.ಸ್ವಾಮಿ, ಕೊಟ್ರೇಶ್ ನಾಯ್ಕ, ಆನಂದನಾಯ್ಕ, ಶಿಕ್ಷಕ ರವೀಂದ್ರ ಚಾರಿ, ಹಲಸಬಾಳು ಶಾಂತವೀರಪ್ಪ, ಡಿ.ರಾಜಪ್ಪ, ಟಿ.ಹನುಮಂತಪ್ಪ, ಕೆ.ಮಂಜಪ್ಪ, ಮಲೇಬೆನ್ನೂರಿನ ಜಿ.ಎನ್.ವಿಜಯಕುಮಾರ್, ಬುಕ್ಸ್ಟಾಲ್ ಓ.ಜಿ.ಧನು, ಜಿಗಳಿಯ ಕೆ.ಎನ್.ರಮೇಶ್, ಸಿ.ಬಿ.ಶಿವು, ರಾಜೇಶ್ ಗೌಡ, ಹೊರಟ್ಟಿ ರಾಜು, ಹೆಚ್.ಬಿ.ಆಂಜನೇಯ, ಶಿಕ್ಷಕ ನಂದಿಗುಡಿ ಬಸಯ್ಯ, ಭೋವಿ ಕೃಷ್ಣಪ್ಪ ಸೇರಿದಂತೆ ಶಿವಕುಮಾರ್ ಪತ್ನಿ ಶ್ವೇತಾ, ಪುತ್ರ ವರುಣ್, ಪುತ್ರಿ ವೈಷ್ಣವಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಸಿರಿಗೆರೆ ಸಿದ್ದೇಶ್ ಪ್ರಾರ್ಥಿಸಿದರು. ಗ್ರಾಮದ ಮುಖಂಡ ಜಿ.ಆಂಜನೇಯ ಸ್ವಾಗತಿಸಿದರು. ಉಪನ್ಯಾಸಕ ಟಿ.ಕರಿಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಎಸಿಎಸ್ ಸಿಇಓ ಎಂ.ಶೇಖರಪ್ಪ ನಿರೂಪಿಸಿದರೆ, ಎ.ಈಶ್ವರ್ ವಂದಿಸಿದರು.