ನೀರ್ಥಡಿಯಲ್ಲಿ ಶುದ್ಧೀಕರಿಸದೆ ಕಲುಷಿತ ನೀರು ಪೂರೈಕೆ

ನೀರ್ಥಡಿಯಲ್ಲಿ ಶುದ್ಧೀಕರಿಸದೆ ಕಲುಷಿತ ನೀರು ಪೂರೈಕೆ

ಶುದ್ಧ ಕುಡಿಯುವ ನೀರಿನ ಘಟಕ ಪರಿಶೀಲಿಸಿದ ಶಾಸಕ ಕೆ.ಎಸ್.ಬಸವಂತಪ್ಪ, ಗುತ್ತಿಗೆದಾರರಿಗೆ ತರಾಟೆ

ಕಲುಷಿತ ನೀರು ಸೇವಿಸಿ ಜ್ವರದಿಂದ ಬಳಲುತ್ತಿರುವ 10 ರಿಂದ 20 ಜನ

ದಾವಣಗೆರೆ, ಅ.30- ತಾಲೂಕಿನ ನೀರ್ಥಡಿ ಗ್ರಾಮದ ಶುದ್ಧ ನೀರು ಕುಡಿಯುವ ಘಟಕದ ಅವ್ಯವಸ್ಥೆಯಿಂದ ಕುಡಿಯಲು ಯೋಗ್ಯವಿಲ್ಲ ನೀರು ಕಂಡು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ದಿಗ್ಭ್ರಮೆಗೊಂಡರು.

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ನೀರ್ಥಡಿ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಶುದ್ಧೀಕರಿಸದೆ ನೀರು ಕುಡಿದು ಗ್ರಾಮದ 10 ರಿಂದ 20 ಜನರ ಜ್ವರದಿಂದ ಬಳಲುವಂತಾಗಿದೆ. 

ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ರೈತರು, ಗ್ರಾಮಸ್ಥರು ಶಾಸಕರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದರಿಂದ ಶಾಸಕ ಬಸವಂತಪ್ಪ ಸೋಮವಾರ ಭೇಟಿ ನೀಡಿ ಶುದ್ಧ ಕುಡಿಯುವ ನೀರಿನ ಘಟಕ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಅವ್ಯವಸ್ಥೆ ಕಂಡು ನಿರ್ವಹಣೆ ಮಾಡುತ್ತಿದ್ದ ಗುತ್ತಿಗೆದಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು. 

ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಹಿಂದೆ ಮತ್ತಿ ಗ್ರಾಮದಲ್ಲೂ ಇದೇ ರೀತಿ ಜನರು ಕಲುಷಿತ ನೀರು ಸೇವಿಸಿ ಹಲವು ಜನರು ಅಸ್ವಸ್ಥಗೊಂಡಿದ್ದರು. ಆ ವೇಳೆ ಜಿಪಂ ನೀರು ಸರಬರಾಜು ಎಇಇ ಅವರಿಗೆ ಕ್ಷೇತ್ರದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಸೂಚಿಸಲಾಗಿತ್ತು. ಈಗ ನಿರ್ಥಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಜ್ವರದಿಂದ ಬಳಲುವಂತಾಗಿದೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಇದೇ ವೇಳೆ ಜಿ.ಪಂ ನೀರು ಸರಬರಾಜು ಎಇಇ ಅವರಿಗೆ ದೂರವಾಣಿ ಸಂಪರ್ಕಿಸಿ, ನೀರ್ಥಡಿ ಗ್ರಾಮದ ಕುಡಿವ ನೀರಿನ ಘಟಕದ ಸರಿಯಾದ ನಿರ್ವಹಣೆ ಇಲ್ಲ. 

ಕಲುಷಿತಗೊಂಡ ಸುತ್ತಮುತ್ತಲ ಪರಿಸರ ಸೇರಿದಂತೆ ವಿವಿಧ ಅವ್ಯವಸ್ಥೆ ಕುರಿತು ಮಾಹಿತಿ ನೀಡಿ, ಕೂಡಲೇ ಗುತ್ತಿಗೆದಾರರನ್ನು ಟೆಂಡರ್ ವಜಾಗೊಳಿಸಿ, ಬೇರೆ ಗುತ್ತಿಗೆದಾರರಿಗೆ ಟೆಂಡರ್ ನೀಡಿ ಘಟಕದಿಂದ ಶುದ್ಧ ನೀರು ನೀಡಲು ಕ್ರಮ ತೆಗೆದುಕೊಳ್ಳಬೇಕೆಂದು ಶಾಸಕರು ಸೂಚಿಸಿದರು.

ಜಿಪಂ ನೀರು ಸರಬರಾಜು ಎಇಇ ಅವರು ಗುತ್ತಿಗೆದಾರನ ಟೆಂಡರ್ ಅವಧಿ ಇನ್ನು ಮೂರು ತಿಂಗಳು ಇದೆ ಎಂದು ಹಾರಿಕೆ ಉತ್ತರ ನೀಡಿದಾಗ, ತರಾಟೆಗೆ ತೆಗೆದುಕೊಂಡ ಶಾಸಕರು, ಘಟಕದ ಸರಿಯಾದ ನಿರ್ವಹಣೆ ಇಲ್ಲ, ನೀರು ಶುದ್ಧೀಕರಿಸದೆ ಕಲುಷಿತ ನೀರನ್ನೇ ವಿತರಿಸುತ್ತಾನೆ. ನೀವು ಸರಿಯಾಗಿ ನಿರ್ವಹಣೆ ಮಾಡದ ಗುತ್ತಿಗೆದಾರನ ಪರವಾಗಿ ಮಾತನಾಡುತ್ತೀರಿ. ನೀವು ಅವರೊಂದಿಗೆ ಶಾಮೀಲಾಗಿರುವಂತೆ ಕಾಣುತ್ತದೆ ಎಂದು ಪ್ರಶ್ನಿಸಿದರು.

ಈ ಸಂಬಧ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ನಡೆಸಿ ಬೇಜವಾಬ್ದಾರಿಯಿಂದ  ಮಾಡುವ ಅಧಿಕಾರಿಗಳನ್ನು ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನೀರ್ಥಡಿ ಗ್ರಾ.ಪಂ ಸದಸ್ಯರಾದ ದೇವೇಂದ್ರಪ್ಪ, ರಂಗನಾಥ್, ಮುಖಂಡರಾದ ಶಿವಣ್ಣ,
ಶ್ರೀಸ್ವಾಮಿ, ಬಸಣ್ಣ, ನಾಗರಾಜ್, ಪ್ರಭು ಸೇರಿದಂತೆ ರೈತರು, ಗ್ರಾಮಸ್ಥರು ಹಾಜರಿದ್ದರು.

error: Content is protected !!