ಜಾಗೃತಿ ಅರಿವು ಸಪ್ತಾಹದ ಉದ್ಘಾಟನೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ
ದಾವಣಗೆರೆ, ಅ. 30- ದೇಶದ ಪ್ರಗತಿಯು ಆಯಾ ದೇಶದ ಕಾರ್ಯರಂಗದ ಪ್ರಾಮಾಣಿಕತೆ, ನಿಷ್ಠೆಯ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಭಾರತದ ಜನರ ಶ್ರಮದ ತೆರಿಗೆ, ಕಂದಾಯ ಮುಂತಾದ ಕೊಡುಗೆಗಳಿಂದಾಗಿ ಸಾರ್ವಜನಿಕ ಆಡಳಿತ ಸಾಧ್ಯವಾಗಿದೆ. ಸಾರ್ವಜನಿಕ ಜೀವನದಲ್ಲಿ ಸರ್ಕಾರಿ ಅಧಿಕಾರಿಗಳು, ನೌಕರರಾದ ನಾವುಗಳು ಜನರಿಗೆ, ಈ ದೇಶಕ್ಕೆ ನಿಷ್ಠರಾಗಿ, ಪ್ರಾಮಾಣಿಕ ಸೇವೆಗೆ ಬದ್ಧರಾಗಿರಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ತಿಳಿಸಿದರು.
ಸೋಮವಾರ ಜಾಗೃತಿ ಅರಿವು ಸಪ್ತಾಹದ ಅಂಗ ವಾಗಿ ಜಿಲ್ಲಾ ನ್ಯಾಯಾಲಯದಲ್ಲಿ ಆಯೋಜಿಸಲಾಗಿದ್ದ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.
ಭ್ರಷ್ಟಾಚಾರವನ್ನು ಮೂಲೋತ್ಪಾಟನೆ ಮಾಡಲು ಮತ್ತು ಸಾರ್ವಜನಿಕ ಸೇವೆಗಳಲ್ಲಿ ಪಾರದ ರ್ಶಕತೆಯನ್ನು ಮೆರೆಯೋಣ. ಈ ದೇಶವೇ ನನ್ನ ಕುಟುಂಬ, ಸೇವೆಯೇ ನಮ್ಮ ಮುಖ್ಯ ಧ್ಯೇಯವಾ ಗಬೇಕು. ನ್ಯಾಯ ಕೋರಿ ಬರುವ ಬಡ ಕಕ್ಷಿದಾರರಿಗೆ ಯಾವುದೇ ವಿಳಂಬ ಮಾಡದೇ ಪಾರದರ್ಶಕವಾದ ಜನಸ್ನೇಹಿ ಆಡಳಿತ ನೀಡೋಣ ಎಂದರು.
`ಭ್ರಷ್ಟಾಚಾರವನ್ನು ವಿರೋಧಿಸೋಣ, ರಾಷ್ಟ್ರ ನಿರ್ಮಾಣಕ್ಕೆ ಬದ್ಧರಾಗಿರೋಣ’ ಎಂಬ ಘೋಷವಾಕ್ಯದಂತೆ ನಾವು ನಮ್ಮ ಜೀವನದಲ್ಲಿ ಪ್ರಾಮಾಣಿಕತೆಯನ್ನು ಅಳವಡಿಸಿಕೊಳ್ಳೋಣ ಎಂದ ಅವರು, ಕೇವಲ ಅಕ್ರಮವಾಗಿ ಹಣ, ವಸ್ತು ರೂಪಗಳಲ್ಲಿ ಅಕ್ರಮ ಸಂಪಾದನೆಯಷ್ಟೇ ಭ್ರಷ್ಟಾಚಾರವಲ್ಲ. ನಾವು ನಮ್ಮ ನಮ್ಮ ಕೆಲಸಗಳನ್ನು ಅನಗತ್ಯವಾಗಿ ವಿಳಂಬ ಮಾಡಿದರೂ ಸಹ ಭ್ರಷ್ಟಾಚಾರವೇ ಆಗುತ್ತದೆ. ಹೀಗಾಗಿ ಭ್ರಷ್ಟಾಚಾರದ ವ್ಯಾಖ್ಯಾನವೂ ಸಹ ಬದಲಾಗಬೇಕಿದೆ. ಇಂತಹ ಬೌದ್ಧಿಕ ಭ್ರಷ್ಟಾಚಾರವು ಅತ್ಯಂತ ಅಪಾಯಕಾರಿ ಅಷ್ಟೇ ಅಲ್ಲ, ದೇಶದ ಏಳಿಗೆಗೂ ಸಹ ಮಾರಕ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಾಜರಿದ್ದ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರುಗಳು, ಮುಖ್ಯ ಆಡಳಿತಾಧಿಕಾರಿ ಹಾಗೂ ಸಿಬ್ಬಂದಿಗಳು ಪ್ರತಿಜ್ಞೆ ಸ್ವೀಕರಿಸಿದರು.
ವಿವಿಧ ಇಲಾಖೆಗಳಲ್ಲಿ ಜಾಗೃತಿ ಅರಿವು ಸಪ್ತಾಹ; ಭ್ರಷ್ಟಾಚಾರದ ವಿರುದ್ದದ ಜಾಗೃತಿ ಅರಿವು ಸಪ್ತಾಹವು ಇಂದಿನಿಂದ ಬರುವ ನವೆಂಬರ್ 5 ರ ವರೆಗೆ ನಡೆಯಲಿದೆ. ಸಪ್ತಾಹದ ಅಂಗವಾಗಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಜಾಗೃತಿ ಅರಿವು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಉಪನಿರ್ದೇಶಕರಾದ ವಾಸಂತಿ ಉಪ್ಪಾರ್, ಖಜಾನೆ ಇಲಾಖೆಯಲ್ಲಿ ಉಪನಿರ್ದೇಶಕರಾದ ಪ್ರತಿಭಾ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.