ಮಲೇಬೆನ್ನೂರು, ಅ.30- ಭದ್ರಾ ನಾಲೆಯಲ್ಲಿ ನೀರಿನ ಹರಿವು ಕಡಿಮೆ ಆಗಿರುವುದರಿಂದ ಅಚ್ಚುಕಟ್ಟಿನ ರೈತರ ಭತ್ತದ ಗದ್ದೆಗಳಿಗೆ ಇನ್ನೂ ನೀರು ತಲುಪಿಲ್ಲ. ಇದರಿಂದಾಗಿ ರೈತರು ನೀರಿಗಾಗಿ ಗಲಾಟೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸೋಮವಾರ ಹರಳಹಳ್ಳಿ ಸಮೀಪವಿರುವ 9 `ಎ’ ಭದ್ರಾ ಉಪಕಾಲುವೆ ಗೇಟ್ ಬಳಿ ಕುಂಬಳೂರು, ನಿಟ್ಟೂರು, ಕುಣೆಬೆಳಕೆರೆ ಮತ್ತು ಆದಾಪುರ ಗ್ರಾಮಗಳ ರೈತರು ನೀರಿಗಾಗಿ ಪರಿಸ್ಪರ ಮಾತಿನ ಚಕಮಕಿ ಮಾಡಿಕೊಂಡಿರುವ ಘಟನೆ ನಡೆದಿದೆ.
9 `ಎ’ ಉಪಕಾಲುವೆ ಗೇಟ್‌ನಲ್ಲಿ ನೀರು ಹಂಚಿಕೆ ವಿಚಾರವಾಗಿ ಈ ನಾಲ್ಕು ಗ್ರಾಮಗಳ ರೈತರ ನಡುವೆಯೇ ಮಾತಿನ ವಾಗ್ವಾದ ನಡೆದಿದ್ದು, ವಿಷಯ ತಿಳಿದ ತಕ್ಷಣ ಎಇಇ ಧನುಂಜಯ ಅವರು ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿ, ರೈತರನ್ನು ಸಮಾಧಾನ ಪಡಿಸಿದರು. ನಂತರ ನಾಲ್ಕು ಗ್ರಾಮಗಳ ರೈತರಿಗೆ ಹೋಗುವ ಕಾಲುವೆಗಳಿಗೆ ನೀರು ಹರಿಸುವ ಪ್ರಮಾಣವನ್ನು ನಿಗದಿ ಮಾಡುವ ಮೂಲಕ ಸಮಸ್ಯೆಯನ್ನು ಸದ್ಯಕ್ಕೆ ತಿಳಿಗೊಳಿಸಿದರು.
ನೀರಿಲ್ಲದೇ ನಮ್ಮ ಭತ್ತದ ಬೆಳೆ ಒಣಗುತ್ತಿವೆ ಎಂದು ರೈತರು ಈ ವೇಳೆ ಒಣಗಿರುವ ಭತ್ತದ ಬೆಳೆ ಹಾಗೂ ಗದ್ದೆಯ ಫೋಟೋಗಳನ್ನು ಎಇಇ ಧನುಂಜಯ ಅವರಿಗೆ ತೋರಿಸಿದರು. ಇನ್ನೆರಡು ದಿನಗಳಲ್ಲಿ ಎಲ್ಲಾ ರೈತರಿಗೂ ನೀರು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇ ನೆಂದು ಎಇಇ ಧನುಂಜಯ ಭರವಸೆ ನೀಡಿದರು.
ಆದಾಪುರದ ಭೀಮಪ್ಪ, ಹನುಮಂತಪ್ಪ, ಚಂದ್ರು, ಕರಿಯಪ್ಪ, ತಿಮ್ಮಣ್ಣ, ನಿಟ್ಟೂರಿನ ಬಿ.ಜಿ.ಧನುಂಜಯ, ಇಟಿಗೇರ ಶಿವು, ಕುಂಬಾರ ಶಿವಣ್ಣ, ಕೆ.ಎಸ್.ಕುಬೇರ, ಜಗದೀಶ್, ಕುಣೆಬೆಳಕೆರೆಯ ಅಂಜಿನಪ್ಪ, ಹನುಮಂತಪ್ಪ, ರಂಗರಾವ್ ಕ್ಯಾಂಪಿನ ಸಿದ್ದೇಶ್, ಅಜಯ್, ಮಂಜು ಸೇರಿದಂತೆ ನೂರಾರು ರೈತರು ಈ ವೇಳೆ ಹಾಜರಿದ್ದರು.