ಮಲೇಬೆನ್ನೂರು, ಅ.30- ಪ್ರಸಕ್ತ ಮುಂಗಾರು ಹಂಗಾಮಿಗೆ ಕಟ್ಟು ಪದ್ಧತಿ ಅನುಸರಿಸಿ, ಭದ್ರಾ ಕಾಡಾ ಸಮಿತಿ 2ನೇ ಅವಧಿಗೆ ನೀರು ಹರಿಸುತ್ತಿದ್ದರೂ ನಿಗದಿತ ಪ್ರಮಾಣದಲ್ಲಿ ನೀರು ಹರಿದು ಬರುತ್ತಿಲ್ಲ ಎಂದು ಅಚ್ಚುಕಟ್ಟಿನ ಕೊನೆಭಾಗದ ರೈತರು ಭಾನುವಾರ ಮತ್ತು ಸೋಮವಾರ ಮಲೇಬೆನ್ನೂರಿನಲ್ಲಿ ಧರಣಿ ನಡೆಸಿದರು.
ಪಟ್ಟಣದಲ್ಲಿರುವ ಭದ್ರಾ ನಾಲಾ ನಂ -3 ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕಛೇರಿ ಆವರಣದಲ್ಲಿ ಜಮಾವಣೆಗೊಂಡಿದ್ದ ರೈತರು, ಕೊನೆ ಭಾಗಕ್ಕೆ ನೀರು ತಲುಪದೇ ಇರುವುದಕ್ಕೆ ಪ್ರಭಾರ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್ ಹಾಗೂ ಎಇಇ ಧನಂಜಯ ಅವರೊಂದಿಗೆ ವಾಗ್ವಾದ ನಡೆಸಿದರು.
ನಾಲೆಗೆ ನೀರು ಬಿಡುಗಡೆ ಮಾಡಿ 6 ದಿನ ಆಗಿದೆ. ನಿಗದಿತ ಪ್ರಮಾಣದಲ್ಲಿ ಕೊನೆಬಾಗಕ್ಕೆ ನೀರು ಹರಿದು ಬರುತ್ತಿಲ್ಲ. ಭತ್ತದ ಬೆಳೆ ಒಣಗುತ್ತಿವೆ ನೀವು ಏನು ಕೆಲಸ ಮಾಡುತ್ತಿದ್ದೀರಿ ? ಎಂದು ರೈತರು ಇಂಜಿನಿಯರ್ಗಳನ್ನು ಪ್ರಶ್ನಿಸಿದರು.
ಮೇಲ್ಬಾಗದಲ್ಲಿ ಉಪನಾಲೆಗಳಲ್ಲಿ ಹೆಚ್ಚಿನ ನೀರನ್ನು ಹರಿಸಲಾಗುತ್ತಿದ್ದು, ಅದನ್ನು ನಿಯಂತ್ರಿಸಬೇಕು ಎಂದು ಪಟ್ಟು ಹಿಡಿದರು. ನಿಗದಿತ ಪ್ರಮಾಣದಲ್ಲಿ ನೀರು ಬರದಿದ್ದಲ್ಲಿ ಮುಂದೆ ಸಂಭವಿಸುವ ಅನಾಹುತಗಳಿಗೆ ಭದ್ರಾ ಕಾಡಾ ಸಮಿತಿ, ಅಧೀಕ್ಷಕರು, ಮುಖ್ಯ ಇಂಜಿನಿಯರ್, ಇಂಜಿನಿಯರ್ಗಳು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರೇ ನೇರ ಹೊಣೆಗಾರರಾಗುತ್ತಾರೆ ಎಂದು ರೈತರು ಎಚ್ಚರಿಸಿದರು.
ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ನಾಲೆಯಲ್ಲಿ ನೀರಿನ ಹರಿವಿನ ಕುರಿತು ಹೆಚ್ಚು ಜಾಗ್ರತೆ ವಹಿಸಬೇಕು ಮತ್ತು ಉಪಕಾಲುವೆಗಳಲ್ಲಿ ರೈತರಿಗೆ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಭದ್ರಾ ಯೋಜನಾ ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ.ದ್ಯಾವಪ್ಪರೆಡ್ಡಿ ಮಾತನಾಡಿ, ಭತ್ತದ ಬೆಳೆ ಕಾಳು ಕಟ್ಟುವ ಹಂತದಲ್ಲಿರುವುದರಿಂದ ಈಗ ನೀರಿನ ತೊಂದರೆ ಆದರೆ ರೈತರಿಗೆ ಬಹಳ ನಷ್ಟ ಆಗುತ್ತದೆ ಎಂದರು.
ರೈತ ಮುಖಂಡರಾದ ಮುದೇಗೌಡ್ರ ತಿಪ್ಪೇಶ್, ಗಿರೀಶ್, ಜಿಗಳಿ ಚಂದ್ರಪ್ಪ, ಸಿರಿಗೆರೆ ಪ್ರಭು, ವಿನಾಯಕ ನಗರ ಕ್ಯಾಂಪ್ ಪ್ರಸಾದ್, ಶ್ರೀನಿವಾಸ್, ಸುರೇಶ್, ಕಮಲಾಪುರದ ದೊಡ್ಡ ಬಸಣ್ಣ, ಚಂದ್ರಪ್ಪ, ಸಂತೋಷ್, ಯಲವಟ್ಟಿ ಮಹೇಂದ್ರಪ್ಪ, ನಾಗರಾಜ್, ಶಾಂತವೀರಪ್ಪ, ಭರತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ ಸೇರಿದಂತೆ ಕೊನೆಯ ಭಾಗದ ಗ್ರಾಮಗಳಾದ ಯಲವಟ್ಟಿ, ಕಮಲಾಪುರ, ಹೊಳೆಸಿರಿಗೆರೆ, ಕೆ ಎನ್ ಹಳ್ಳಿ, ಕೊಕ್ಕನೂರು, ನ೦ದಿತಾವರೆ, ಕಡರನಾಯ್ಕನಹಳ್ಳಿ, ಜಿಗಳಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.