ಸಮಾಜ ಸ್ಮರಿಸುವಂತಹ ಕಾಯಕವನ್ನು ಮಾಡಬೇಕು

ಸಮಾಜ ಸ್ಮರಿಸುವಂತಹ ಕಾಯಕವನ್ನು ಮಾಡಬೇಕು

ಎ.ಹೆಚ್. ಶಿವಮೂರ್ತಿಸ್ವಾಮಿ ಅವರ ಭಾವನಮನ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ಡಾ. ಗುರುಸಿದ್ಧರಾಜ ಯೋಗೇಂದ್ರ ಸ್ವಾಮೀಜಿ

ದಾವಣಗೆರೆ, ಅ. 29- ಮಣ್ಣಿಗೂ ದೇಹಕ್ಕೂ ಸಾಕಷ್ಟು ಸಂಬಂಧವಿದೆ. ಈ ರೀತಿ ಇದ್ದಾಗಲೇ ಜೀವನ ವೈವಿಧ್ಯಮಯವಾಗಿರುತ್ತದೆ. ಚೈತನ್ಯ ಹಾರಿ ಹೋದ ಮೇಲೆ ಜಡವಸ್ತುವಾಗುತ್ತದೆ. ಈ ಮಧ್ಯೆ ಸಮಾಜ ಸ್ಮರಿಸುವಂತಹ ಕಾಯಕವನ್ನು ಮಾಡಬೇಕು. ಅಂತಹ ಕಾಯಕವನ್ನು ಲಿಂ.ಎ.ಹೆಚ್. ಶಿವಮೂರ್ತಿ ಸ್ವಾಮಿ ಅವರು ಮಾಡಿದ್ದಾರೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜ ಯೋಗೇಂದ್ರ ಮಹಾಸ್ವಾಮೀಜಿ ಶ್ಲ್ಯಾಘಿಸಿದರು.

ನಗರದ ಅಭಿನವ ರೇಣುಕ ಮಂದಿರದಲ್ಲಿ ಇಂದು ಏರ್ಪಾಡಾಗಿದ್ದ ಹಿರಿಯ ನ್ಯಾಯವಾದಿಗಳೂ, ಶ್ರೀ ವೀರೇಶ್ವರ ಪುಣ್ಯಾಶ್ರಮದ ಸಂಸ್ಥಾಪಕ ಕಾರ್ಯದರ್ಶಿಗಳಾಗಿದ್ದ ಎ.ಹೆಚ್. ಶಿವಮೂರ್ತಿಸ್ವಾಮಿ ಅವರ ಭಾವನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಪ್ರಕೃತಿಯಲ್ಲಿ ಕಾಣುವ ವಸ್ತು ಮಾಯವಾಗುತ್ತದೆ. ದೇಹ ದಾರಿ ಈ ಚೈತನ್ಯ ಹೋದ ಮೇಲೆ ಜಡ ವಸ್ತುವಾಗುತ್ತದೆ. ಪಂಚಭೂತಗಳಿಂದ ನಿರ್ಮಾಣವಾದ ಈ ದೇಹ ಅದರೊಂದಿಗೆ ಜೀವಿಸಿ ಕೊನೆಗೆ ಅದರಲ್ಲೇ ಲೀನವಾಗುತ್ತದೆ ಎಂದರು.

ಎರೆಕುಪ್ಪಿ ಮಠದ ತಿಪ್ಪಯ್ಯನವರ ಕುಟುಂಬದವರ ಶಿಸ್ತು, ಆದರ್ಶ ಸಮಾಜಕ್ಕೆ ಮಾದರಿಯಾಗಿದೆ. ಶಿವಮೂರ್ತಿ ಸ್ವಾಮಿ ಅವರು ಸಮಾಜ ಸ್ಮರಿಸುವಂತಹ ಕೆಲಸ ಮಾಡಿರುವುದಕ್ಕೆ ಸಾಕ್ಷಿ ಇಲ್ಲಿ ನೆರೆದಿರುವ ಜನಸ್ತೋಮ ಎಂದ ಶ್ರೀಗಳು, ಭೂಮಿಗೆ ಬರುವ ಮೊದಲೇ ಮನುಷ್ಯನ ಆಯುಷ್ಯದ ದಿನ, ತಾಸು ನಿಗದಿಯಾಗಿರುತ್ತದೆ. ಅಷ್ಟೇ ದಿನಗಳು ವ್ಯಕ್ತಿ ಭೂಮಿ ಮೇಲೆ ಬದುಕಲು ಸಾಧ್ಯ ಎಂದು ಶ್ರೀಗಳು ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ವ್ಯಕ್ತಿ ಶಾಶ್ವತವಲ್ಲ. ಆತ ಮಾಡಿದ ಕೆಲಸ ಶಾಶ್ವತವಾಗಿರಲು ಸಾಧ್ಯ. ಶಿವಮೂರ್ತಿಸ್ವಾಮಿ ಅವರು ಡಾ.ಪುಟ್ಟರಾಜ ಕವಿ ಗವಾಯಿಗಳವರ 150 ತುಲಾಭಾರಗಳನ್ನು ಮಾಡಿಸಿ ದಾಖಲೆ ನಿರ್ಮಿಸಿ, ಅವರಿಗೊಂದು ಆಶ್ರಮ ನಿರ್ಮಾಣ ಮಾಡಿದ ಕಾರ್ಯ ಶಾಶ್ವತ. ಅವರ ಸೇವೆ ಅನನ್ಯವಾದುದು ಎಂದರು.

ಮಾಜಿ ಶಾಸಕ ಎಂ. ಬಸವರಾಜನಾಯ್ಕ ಮಾತನಾಡಿ, ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಮಧ್ಯದ ಜೀವಿತಾವಧಿಯಲ್ಲಿ ಮನುಕುಲಕ್ಕೆ  ಉತ್ತಮ ಮಾರ್ಗ ಹಾಕಿ ಕೊಡಬೇಕು. ಈ ನಿಟ್ಟಿನಲ್ಲಿ ಶಿವಮೂರ್ತಿಸ್ವಾಮಿ ಅವರ ಕೊಡುಗೆ ಅಪಾರವಾದುದು ಎಂದು ಹೇಳಿದರು.

ಪ್ರವಚನಕಾರ ಮಹಾಂತೇಶ ಶಾಸ್ತ್ರಿ ಅವರು, ಸಂಸ್ಕೃತಿ, ಸಂಸ್ಕಾರ ಮತ್ತು ಸಂಸ್ಕೃತ ಈ ಮೂರು ನಮ್ಮ ದೇಶದ ಆಸ್ತಿಗಳು. ಇವುಗಳನ್ನು ಜೀವನದಲ್ಲಿ ಚಾಚೂ ತಪ್ಪದೇ ಅಳವಡಿಸಿಕೊಂಡಿದ್ದ ಲಿಂ. ಶಿವಮೂರ್ತಿಸ್ವಾಮಿಯವರ ಶಿಸ್ತುಬದ್ಧ ಜೀವನ. ಇದು ಮನೆತನದಿಂದಲೇ ಬಂದಿದೆ ಎಂದರು.

ಹಿರಿಯ ವ್ಯಂಗ್ಯಚಿತ್ರಕಾರ ಹೆಚ್.ಬಿ.ಮಂಜುನಾಥ ಮಾತನಾಡಿ, ಲಿಂ. ಎ.ಹೆಚ್. ಶಿವಮೂರ್ತಿಸ್ವಾಮಿ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಅವರಿಲ್ಲ ಎಂದು ದು:ಖ ಪಡುವುದಕ್ಕಿಂತ ಅವರು ಸಮಾಜಕ್ಕೆ ಏನು ಕೊಡುಗೆ ನೀಡಿದ್ದಾರೆಂಬುದನ್ನು ಸ್ಮರಿಸಬೇಕು. ಶರಣರು ಮರಣವೇ ಮಹಾನವಮಿ ಎಂದು ಹೇಳಿದ್ದಾರೆ. ಅವರಿಗೆ ಗೌರವ ಸಮರ್ಪಿಸುವ ಸಮಾರಂಭವಾಗಬೇಕೆಂದು ಹಿತ ನುಡಿದರು.

ಸಾಹಿತಿ ಮೃತ್ಯುಂಜಯ ರುಮಾಲೆ ಅವರು  ಮಾತನಾಡಿ, ಶಿವಮೂರ್ತಿ ಸ್ವಾಮಿಯವರು ಗುರು-ವಿರಕ್ತ ಮಠಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಅವರ ಚಿಂತನೆ, ಆದರ್ಶ ಎಲ್ಲರಿಗೂ ಮಾರ್ಗದರ್ಶನವಾಗಿದೆ ಎಂದರು.

ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ವಿಜಯಪುರದ ಕಿರೀಟ ಮಠದ ಶ್ರೀ ಸ್ವಾಮಿನಾಥ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ಶಿವಮೊಗ್ಗದ ಸಂಗಮೇಶ ಗವಾಯಿಗಳು, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ವಿಧಾನಪರಿಷತ್ ಮಾಜಿ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಶಾಸಕ ಬಿ.ಪಿ. ಹರೀಶ್, ಜಾನಪದ ವಿದ್ವಾಂಸ ಡಾ.ಎಂ.ಜಿ. ಈಶ್ವರಪ್ಪ, ನಿವೃತ್ತ ನೌಕರ ಅಬ್ದುಲ್ ಮಜೀದ್ ಮುಂತಾದವರು ಭಾಗವಹಿಸಿದ್ದರು.

ವೀರೇಶ್ವರ ಪುಣ್ಯಾಶ್ರಮದ ಮಕ್ಕಳು ವಚನ ಗಾಯನ ನಡೆಸಿಕೊಟ್ಟರು. ಶ್ರೀಮತಿ ಸುಗ್ಲಾದೇವಿ ಕಾರ್ಯಕ್ರಮ ನಿರೂಪಿಸಿದರು. ಶಿವಮೂರ್ತಿ ಸ್ವಾಮಿಯವರ ಪುತ್ರ ಎ.ಎಸ್. ಸಿದ್ದೇಶ್, ಬಸವರಾಜ್ ಮತ್ತಿತರರಿದ್ದರು.

error: Content is protected !!