ಗ್ರಾಮೀಣ ಜನರಿಗೆ `ಅಂಚೆ ಜೀವ ವಿಮೆ’ ಆಕರ್ಷಕ ಯೋಜನೆ

ಗ್ರಾಮೀಣ ಜನರಿಗೆ `ಅಂಚೆ ಜೀವ ವಿಮೆ’ ಆಕರ್ಷಕ ಯೋಜನೆ

ಮಲೇಬೆನ್ನೂರಿನಲ್ಲಿನ ಅಂಚೆ ಜನಸಂಪರ್ಕ ಅಭಿಯಾನದಲ್ಲಿ ನಿರ್ದೇಶಕ ಅಶ್ವತ್ಥ್‌ ನಾರಾಯಣ

ಮಲೇಬೆನ್ನೂರು, ಅ.27- ಅಂಚೆ ಕಛೇರಿಯಲ್ಲಿ ಸಿಗುವಂತಹ ಸೌಲಭ್ಯಗಳ ಬಗ್ಗೆ ಜನರಿಗೆ ತಿಳಿಸುವುದು ಈ ಅಂಚೆ ಜನಸಂಪರ್ಕ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ದಕ್ಷಿಣ ಕರ್ನಾಟಕ ವಲಯದ ಅಂಚೆ ಸೇವೆಗಳ ನಿರ್ದೇಶಕ ಅಶ್ವತ್ಥ್‌ ನಾರಾಯಣ ತಿಳಿಸಿದರು.

ಅವರು ಶುಕ್ರವಾರ ಪಟ್ಟಣದ ಉಪ ಅಂಚೆ ಕಛೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಮಲೇಬೆನ್ನೂರು ಮತ್ತು ಭಾನುವಳ್ಳಿ ಉಪ ಅಂಚೆ ಕಛೇರಿಗಳ ವತಿಯಿಂದ ಹಮ್ಮಿಕೊಂಡಿದ್ದ ಅಂಚೆ ಜನಸಂಪರ್ಕ ಅಭಿಯಾನವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

`ಒಂದೇ ಸೂರಿನಡಿ ನೂರಾರು ಸೇವೆಗಳು’ ಎಂಬ ಕಾರ್ಯಕ್ರಮದ ಮೂಲಕ ಅಂಚೆ ಕಛೇರಿಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಜನರು ಸದುಪಯೋಗಪಡಿಸಿಕೊಳ್ಳ ಬೇಕೆಂದರು. 

ಸಣ್ಣ ಉಳಿತಾಯ ಖಾತೆಗಳಲ್ಲಿ ಎಸ್‌ಬಿ, ಆರ್‌ಡಿ, ಸುಕನ್ಯ ಸಮೃದ್ಧಿ ಖಾತೆ, ಮಹಿಳಾ ಸಮ್ಮಾನ್‌ ಖಾತೆ, ತಿಂಗಳ ಉಳಿತಾಯ ಖಾತೆ, ಹಿರಿಯ ನಾಗರಿಕರ ಖಾತೆ, ಆವರ್ತಕ ಠೇವಣಿ, ರಾಷ್ಟ್ರೀಯ ಉಳಿತಾಯ ಪತ್ರ, ಕಿಸಾನ್‌ ವಿಕಾಸ್‌ ಪತ್ರಗಳ ಸೌಲಭ್ಯ ಇದೆ. 

ವಿಶೇಷವಾಗಿ ಗ್ರಾಮೀಣ ಜನರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರದ `ಗ್ರಾಮೀಣ ಅಂಚೆ ಜೀವ ವಿಮೆ’ ಇದ್ದು, ಇದು ಅತ್ಯಂತ ಕಡಿಮೆ ಪ್ರೀಮಿಯಮ್‌ ಮತ್ತು ಅಧಿಕ ಬೋನಸ್‌ ನೀಡುವ ಆಕರ್ಷಕ ಯೋಜನೆ ಆಗಿದೆ ಎಂದು ಅಶ್ವತ್ಥ್‌ ನಾರಾಯಣ ಮಾಹಿತಿ ನೀಡಿದರು.

ದಾವಣಗೆರೆ ವಿಭಾಗದದ ಅಂಚೆ ಅಧೀಕ್ಷಕ ಚಂದ್ರಶೇಖರ್‌ ಮಾತನಾಡಿ, ಭಾರತೀಯ ಜೀವ ವಿಮೆಯಲ್ಲಿ ಸರ್ಕಾರಿ, ಅರೆ ಸರ್ಕಾರಿ ಮತ್ತು ಪದವೀಧರರಿಗೆ ಉತ್ತಮ ಸೌಲಭ್ಯವಿದೆ ಎಂದರು. 

ದಾವಣಗೆರೆ ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕ ನರೇಂದ್ರ ನಾಯ್ಕ ಮಾತನಾಡಿ, ಅಂಚೆ ಕಛೇರಿಯಲ್ಲಿ ಹೊರ ಆಧಾರ್‌ ಕಾರ್ಡ್‌ ನೋಂದಣಿ ಮತ್ತು ತಿದ್ದುಪಡಿ ಸೌಲಭ್ಯ ಅತ್ಯಂತ ಕಡಿಮೆ ಶುಲ್ಕದಲ್ಲಿ ಸಿಗಲಿದ್ದು, ಜನರು ಪಟ್ಟಣಗಳಿಗೆ ನಿಮ್ಮ ಸಮೀಪದ ಅಂಚೆ ಕಛೇರಿಯಲ್ಲೇ ಆಧಾರ್ ಕಾರ್ಡ್‌ ಪಡೆಯಿರಿ ಎಂದು ಹೇಳಿದರು. 

ದಾವಣಗೆರೆ ಸ್ಥಾನಿಕ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಜೆ.ಎಸ್‌. ಗುರುಪ್ರಸಾದ್‌, ಅಂಚೆ ವಿಮಾ ಅಭಿವೃದ್ಧಿ ಅಧಿಕಾರಿ ಜಾಕೀರ್‌ ಹುಸೇನ್‌, ಐಪಿಪಿಬಿ ವ್ಯವಸ್ಥಾಪಕ ಶ್ರೀನಿವಾಸ್‌, ಅಂಚೆ ನಿರೀಕ್ಷಕ ವೇಣುಗೋಪಾಲ್‌, ಮಲೇಬೆನ್ನೂರು ಉಪ ಅಂಚೆ ಪಾಲಕ ಶ್ರೀಕಾಂತ್‌ ದಿಗಡೂರು, ಭಾನುವಳ್ಳಿ ಉಪ ಅಂಚೆ ಪಾಲಕ ಅಜ್ಜಪ್ಪ, ಪಿಎಸ್‌ಐ ಪ್ರಭು, ಲಯನ್ಸ್‌ ಶಾಲೆ ಮುಖ್ಯ ಶಿಕ್ಷಕ ಕೆ. ಚಂದ್ರಶೇಖರ್‌ ಮತ್ತು ಇತರರು ಈ ವೇಳೆ ಹಾಜರಿದ್ದರು. 

error: Content is protected !!