ದಾವಣಗೆರೆ, ಅ. 27 – ಇಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಟೆನ್ನಿಸ್ ಪಂದ್ಯಾವಳಿಯಲ್ಲಿ ಶುಕ್ರವಾರ ಉನ್ನತ ಶ್ರೇ ಯಾಂಕಿತ ಆಟಗಾರರು ಮುನ್ನಡೆ ಸಾಧಿಸಿದ್ದಾರೆ. ಶನಿವಾರದಂದು ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ದಿಗ್ಗಜರು ಸೆಣಸಾಟ ನಡೆಸಲಿದ್ದಾರೆ.
ಗುರುವಾರದ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತರು ಪತನಗೊಂಡಿದ್ದರು. ಆದರೆ, ಶುಕ್ರವಾರದಂದು ಉನ್ನತ ಶ್ರೇಯಾಂಕಿತ ಅಮೆರಿಕದ ನಿಕ್ ಚಾಪೆಲ್ ಅವರು ಭಾರತದ ಸಿದ್ದಾರ್ಥ ರಾವತ್ ವಿರುದ್ಧ ಜಯ ದಾಖಲಿಸಿದ್ದಾರೆ. 6-1, 3-6, 6-2 ಅಂತರದಿಂದ ಚಾಪೆಲ್ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.
ಮತ್ತೊಂದು ಪಂದ್ಯದಲ್ಲಿ ಎಂಟನೇ ಶ್ರೇಯಾಂಕಿತ ನಿಕಿ ಕಲಿಯಂಡ ಪೂಣಚ್ಚ ಅವರು ಮನೀಶ್ ಸುರೇಶ್‌ಕುಮಾರ್ ವಿರುದ್ಧ 6-4, 6-3 ಅಂತರದ ಜಯ ಗಳಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಚಾಪೆಲ್ ಹಾಗೂ ಪೂಣಚ್ಚ ಅವರು ಎದುರಾಳಿಗಳಾಗಿದ್ದಾರೆ.
ಎರಡನೇ ಶ್ರೇಯಾಂಕಿತ ಬೋಗ್ಡಾನ್ ಬೊಬ್ರೊವ್ ಅವರು ಕರಮ್ ಸಿಂಗ್ ವಿರುದ್ಧ 7-5, 6-0 ಅಂತರದ ಜಯ ಗಳಿಸಿದ್ದಾರೆ. ಬೊಬ್ರೊವ್ ಅವರು ಸೆಮಿಫೈನಲ್‌ನಲ್ಲಿ ರಾಮಕುಮಾರ್ ರಾಮನಾಥನ್ ಎದುರಿಸಲಿದ್ದಾರೆ. ರಾಮನಾಥನ್ ಅವರು ಈ ಪಂದ್ಯಾವಳಿಯಲ್ಲಿ ತಮ್ಮ ಲಯ ಕಂಡುಕೊಂಡಿದ್ದು, ಉಭಯರ ಸೆಣಸಾಟ ತುರುಸಿನಿಂದ ಕೂಡಿರುವ ನಿರೀಕ್ಷೆ ಇದೆ.
ರಾಮನಾಥನ್ ಅವರು ಮಾಧ್ವಿನ್ ಕಾಮತ್ ವಿರುದ್ಧ ನೇರ ಸೆಟ್‌ಗಳಾದ 6-2, 6-1 ಅಂತರದಿಂದ ಗೆಲುವು ಸಾಧಿಸಿದ್ದರು.
ಡಬಲ್ಸ್ ಸೆಮಿಫೈನಲ್ ಪಂದ್ಯಾವಳಿಯಲ್ಲಿ ನಾಲ್ಕನೇ ಶ್ರೇಯಾಂಕಿತ ಸಿದ್ಧಾಂತ್ ಬಂಥಿಯ – ವಿಷ್ಣುವರ್ಧನ್ ಅವರ ಜೋಡಿಯು, ಎರಡನೇ ಶ್ರೇಯಾಂಕದಲ್ಲಿರುವ ಬೊಗ್ಡನ್ ಬೊಬ್ರೊವ್ – ನಿಕ್ ಚಾಪೆಲ್ ವಿರುದ್ಧ 4-6, 6-3, 10-5 ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಬಂಥಿಯ ಹಾಗೂ ವಿಷ್ಣುವರ್ಧನ್ ಜೋಡಿ ಅಂತಿಮ ಘಟಕ್ಕೆ ಕಾಲಿಟ್ಟಿದೆ. ಮತ್ತೊಂದು ಪಂದ್ಯದಲ್ಲಿ ಸಾಯಿ ಕಾರ್ತಿಕ್ ರೆಡ್ಡಿ – ಮನೀಶ್ ಸುರೇಶ್‌ಕುಮಾರ್ ಅವರ ಜೋಡಿಯು ಅಗ್ರ ಶ್ರೇಯಾಂಕಿತ ಪುರವ್ ರಾಜ – ರಾಮಕುಮಾರ್ ರಾಮನಾಥನ್ ವಿರುದ್ಧ 7-6 (3), 6-4 ಅಂತರದ ಅಚ್ಚರಿಯ ಜಯ ಸಾಧಿಸಿ ಅಂತಿಮ ಹಂತಕ್ಕೆ ದಾಪುಗಾಲಿಟ್ಟಿದ್ದಾರೆ. ಈ ಹಿಂದೆ ಧಾರವಾಡದಲ್ಲಿ ನಡೆದ ಪಂದ್ಯಾವಳಿಯಲ್ಲೂ ಕಾರ್ತಿಕ್ ಹಾಗೂ ಮನೀಶ್ ಜೋಡಿ ಅಂತಿಮ ಹಂತ ತಲುಪಿತ್ತು.