ಹರಪನಹಳ್ಳಿಯ ಎಸ್.ಯು.ಜೆ.ಎಂ. ಕಾಲೇಜಿನ ಪ್ರಾಂಶುಪಾಲ ಹೆಚ್. ಮಲ್ಲಿಕಾರ್ಜುನ್
ಹರಪನಹಳ್ಳಿ, ಅ. 25 – ಕಲೆ, ಸಾಹಿತ್ಯ, ಸಂಸ್ಕೃತಿ, ಸಂಸ್ಕಾರ ದೇಶದ ದೊಡ್ಡ ಆಸ್ತಿ ಇದ್ದಂತೆ. ಇವುಗಳನ್ನು ಹೆಚ್ಚು ಪ್ರೋತ್ಸಾಹಿಸುವ ಮೂಲಕ ಉಳಿಸಿ, ಬೆಳೆಸುವುದು ಎಲ್ಲರ ಆದ್ಯ ಕರ್ತವ್ಯ, ಭಾವ, ರಾಗ, ತಾಳ, ನೃತ್ಯಗಳ ಸಮಾಗಮವೇ ಭರತ ನಾಟ್ಯ. ಭರತ ನಾಟ್ಯವನ್ನು ಭಾರತೀಯ ಸಂಸ್ಕೃತಿಯ ಕಿರೀಟವನ್ನು ಅಲಂಕರಿಸುವ ಉಜ್ವಲ ರತ್ನ ಎಂದು ಬಣ್ಣಿಸಬಹುದು. ಇದರಿಂದ ಸದೃಢ ಆರೋಗ್ಯವನ್ನು ಪಡೆಯಬಹುದು ಎಂದು ಎಸ್.ಯು.ಜೆ.ಎಂ. ಕಾಲೇಜಿನ ಪ್ರಾಂಶುಪಾಲ ಹೆಚ್. ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಹರಿಹರದ ಸಂಕರ್ಷಣ ನೃತ್ಯಾಲಯ ಏರ್ಪಡಿಸಿದ್ದ ನೃತ್ಯ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಟ್ಯದಿಂದ ಆರೋಗ್ಯ ವೃದ್ಧಿಯಾಗುತ್ತದೆ. ದೈಹಿಕ, ಬೌದ್ಧಿಕ, ಮಾನಸಿಕ ಹಾಗೂ ನೈತಿಕವಾಗಿ ನಡವಳಿಕೆಗಳನ್ನು ತಿದ್ಧಿ ವಿಕಾಸದೆಡೆಗೆ ಪ್ರೇರೇಪಿಸುವ ಶಕ್ತಿ ನೃತ್ಯ ಕಲೆಗಿದೆ. ಭರತನಾಟ್ಯ ನಮ್ಮ ಸಂಸ್ಕೃತಿಯ ಪ್ರತೀಕ. ಇದು ಒಂದು ರೀತಿಯ ವ್ಯಾಯಾಮ, ಕ್ರೀಡೆ, ಶರೀರದ ದೃಢತೆ ಹಾಗೂ ಆಕರ್ಷಕ ರೂಪವನ್ನು ನೀಡುತ್ತದೆ. ಇಂದು ಭರತ ನಾಟ್ಯ ಕಲೆ ಉಳಿಸುವುದು ಅಗತ್ಯವಾಗಿದೆ. ಭರತ ನಾಟ್ಯದಿಂದ ಸೌಂದರ್ಯ ವೃದ್ಧಿಯಾಗುತ್ತದೆ. ಅಂಗ ಸಾಧನೆಯಿಂದ ಆರಂಭವಾಗಿ ತಿಲ್ಲಾನದೊಂದಿಗೆ ಮುಕ್ತಾಯವಾ ಗುತ್ತದೆ. ಪೋಷಕರು ಮಕ್ಕಳ ಅಂಕಗಳಿಗೆ ಆದ್ಯತೆ ನೀಡದೇ ತಮಗಿಷ್ಟವಾದ ಕ್ಷೇತ್ರದಲ್ಲಿ ಬೆಳೆಯಲು ಪ್ರೇರೇಪಿಸಬೇಕು. ಪಠ್ಯದಲ್ಲಿ ಸಂಗೀತ ನೃತ್ಯಕ್ಕೆ ಆದ್ಯತೆ ನೀಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಕರ್ಷಣ ನೃತ್ಯಾಲಯದ ಅಧ್ಯಕ್ಷರಾದ ವಿದುಷಿ ಪಿ.ಎಸ್. ರಾಧಾ ಅವರು ರಾಜ ಮಹಾರಾಜರ ಕಾಲದಲ್ಲೇ ಕಲೆಗೆ ಹೆಚ್ಚು ಪ್ರೋತ್ಸಾಹ ನೀಡಿದ್ದಾರೆ. ಕಲೆ ಒಂದು ರೀತಿಯ ತಪಸ್ಸು ಇದ್ದಂತೆ. ಸಂಕರ್ಷಣ ನೃತ್ಯಾಲಯ ಕಳೆದ 25 ವರ್ಷಗಳಿಂದ ಭಾರತೀಯ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಕಾರ್ಯೋನ್ಮುಖ ವಾಗಿದೆ. ಭರತನಾಟ್ಯ ಕಲೆ ಎಲ್ಲರನ್ನು ಕೈ ಬೀಸಿ ಕರೆಯುತ್ತದೆ. ಆದರೆ, ಕೆಲವ ರನ್ನು ಮಾತ್ರ ಆಯ್ದುಕೊಳ್ಳುತ್ತದೆ. ಹರಪನ ಹಳ್ಳಿಯ ಜನರ ಸಹಕಾರ ಮರೆಯುವಂತಿಲ್ಲ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಡಾ. ಪ್ರಿಯಾಂಕ ಅಧಿಕಾರ್ ಮಾತನಾಡಿ, ಭರತನಾಟ್ಯ ದಿಂದ ಕಣ್ಣುಗಳಿಗೆ, ಕಾಲುಗಳಿಗೆ ಮತ್ತು ಇಡೀ ದೇಹಕ್ಕೆ ಉತ್ತಮ ವ್ಯಾಯಾಮ ನೀಡುತ್ತಿದ್ದು, ಇದರಿಂದ ದೃಷ್ಟಿ ದೋಷ, ಕೀಲು ನೋವು, ಸೊಂಟ ನೋವು ನಿವಾರಣೆಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಕರ್ಷಣ ನೃತ್ಯಾಲಯದ ಪಿ.ಎಸ್. ರಜಿನಿ, ಟಿ.ವ್ಯಾಸರಾಜ್ ಎಂ. ಎಂಬಣ್ಣ, ರವಿ ಅಧಿಕಾರ್ ಇದ್ದರು. ವಿದ್ಯಾರ್ಥಿಗಳಿಂದ ಭರತನಾಟ್ಯ ನೃತ್ಯ ಪ್ರದರ್ಶನ ನಡೆಯಿತು.