ಮಲಬಾರ್‌ನಿಂದ `ಅಜ್ಜಿ ಮನೆ’ ನಿರ್ಮಾಣ

ಮಲಬಾರ್‌ನಿಂದ `ಅಜ್ಜಿ ಮನೆ’ ನಿರ್ಮಾಣ

 ಬೆಂಗಳೂರು, ಅ.25-  ದೇಶದ ಅತಿ ದೊಡ್ಡ ಆಭರಣ ಬ್ರಾಂಡ್‌ಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ರಾಜ್ಯದ ನಿರ್ಗತಿಕ ಮಹಿಳೆಯರಿಗೆ ವಸತಿ ಕಲ್ಪಿಸುವ `ಅಜ್ಜಿ ಮನೆ’ಯೋಜನೆ ಆರಂಭಿಸಿದೆ.   ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಲಕ್ಷ್ಮೀ  ಹೆಬ್ಬಾಳ್ಕರ್ ಬನಶಂಕರಿಯಲ್ಲಿ  ನಿರ್ಮಾಣವಾದ  `ಅಜ್ಜಿ ಮನೆ’  ಉದ್ಘಾಟನೆ ಮಾಡಿದರು. 

ಇಲ್ಲಿ ನಿರ್ಗತಿಕರು ಅಥವಾ ಕುಟುಂಬದಿಂದ ಕಡೆಗಣನೆಗೆ ಒಳಗಾದ ವಸತಿಹೀನ ಮಹಿಳೆಯರು ಆಶ್ರಯ ಪಡೆಯಲಿದ್ದು, ಅವರಿಗೆ ಉಚಿತವಾಗಿ ಆಹಾರ ಮತ್ತು ವೈದ್ಯಕೀಯ ನೆರವು, ಮಾನಸಿಕ ಮತ್ತು ದೈಹಿಕ ಆರೋಗ್ಯ ಆರೈಕೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. 

ಕಾರ್ಯಕ್ರಮದಲ್ಲಿ ಮಲಬಾರ್ ಗ್ರೂಪ್‌ನ ಅಧ್ಯಕ್ಷ  ಎಂ. ಪಿ. ಅಹ್ಮದ್‌,  ವ್ಯವಸ್ಥಾಪಕ ನಿರ್ದೇ ಶಕ ಡಾ. ಇದ್ರೀಸ್, ಶಾಸಕರುಗಳಾದ ಆರ್.ಅಶೋಕ್‌, ಎನ್.ಎ.ಹ್ಯಾರಿಸ್  ಉಪಸ್ಥಿತರಿದ್ದರು.

ಮಲಬಾರ್ ಗ್ರೂಪ್‌ನ ಸಿಎಸ್‌ಆರ್ ಸಂಸ್ಥೆಯಾಗಿರುವ ಮಲಬಾರ್ ಚಾರಿಟೇಬಲ್ ಟ್ರಸ್ಟ್  ಅಜ್ಜಿ ಮನೆಗೆ ಬೆಂಬಲವಾಗಿ ನಿಲ್ಲುತ್ತಿದ್ದು, ಸ್ವಯಂಸೇವಾ ಸಂಸ್ಥೆಯಾಗಿರುವ ತಣಲ್ ಸಂಸ್ಥೆಯು ನಿರ್ವಹಣೆ ಮಾಡುತ್ತದೆ. ಸುಮಾರು 14,780 ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಅಜ್ಜಿ ಮನೆಯಲ್ಲಿ ಏಕಕಾಲಕ್ಕೆ 104 ಮಹಿಳೆಯರಿಗೆ ಆಶ್ರಯ ನೀಡಬಹುದಾಗಿದೆ. 

ಈ ಅಜ್ಜಿ ಮನೆಯ ಆರಂಭದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಲಬಾರ್ ಗ್ರೂಪ್‌ನ ಅಧ್ಯಕ್ಷ ಎಂ.ಪಿ. ಅಹ್ಮದ್ ಅವರು, `ಸಮಾಜದಲ್ಲಿ ದುರ್ಬಲ ವರ್ಗ ದವರು ಮತ್ತು ವ್ಯಕ್ತಿಗಳಿಗೆ ಅಗತ್ಯ ಮೂಲಸೌಲಭ್ಯ ಗಳನ್ನು ಒದಗಿಸುವ ಮೂಲಕ ಅವರ ಜೀವನವನ್ನು ಗೌರವಯುತವಾಗಿಡುವಂತೆ ಮಾಡುವಲ್ಲಿ ಮಲಬಾರ್ ಚಾರಿಟೇಬಲ್ ಟ್ರಸ್ಟ್ ನಿರಂತರವಾಗಿ ಶ್ರಮಿಸುತ್ತಿದೆ. 1993ರಲ್ಲಿ ಆರಂಭವಾದಾಗಿನಿಂದ ಮಲಬಾರ್ ಗ್ರೂಪ್  ತನ್ನ   ಲಾಭಾಂಶದಲ್ಲಿ ಶೇ.5 ರಷ್ಟನ್ನು ಸಮುದಾಯದ ಆರೋಗ್ಯ, ಶಿಕ್ಷಣ, ಪರಿಸರ, ಮಹಿಳಾ ಸಬಲೀಕರಣ ಮತ್ತು ವಸತಿ ಇತ್ಯಾದಿ ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗ ಮಾಡುತ್ತಿದೆ. ಆರಂಭದ ದಿನದಿಂದ ಮಲಬಾರ್ ಗ್ರೂಪ್ ಇದುವರೆಗೆ 212 ಕೋಟಿ ರೂ.ಗಳನ್ನು ಸಿಎಸ್‌ಆರ್ ಚಟುವಟಿಕೆಗಳಿಗೆ ವೆಚ್ಚ ಮಾಡಿದ್ದು, ಇದರಿಂದ ದೇಶಾದ್ಯಂತ 44.19 ಲಕ್ಷ ಜನರಿಗೆ ಅನುಕೂಲವಾಗಿದೆ  ಎಂದಿದ್ದಾರೆ.

ದಯಾ ಪುನರ್ವಸತಿ ಟ್ರಸ್ಟ್ ಸಹಯೋಗದಲ್ಲಿ ಮಲಬಾರ್ ಚಾರಿಟೇಬಲ್ ಟ್ರಸ್ಟ್ ಇತ್ತೀಚೆಗೆ ‘ಹಸಿವು ಮುಕ್ತ ಜಗತ್ತು’ ನಿರ್ಮಾಣವೆಂಬ ವಿನೂತನವಾದ ಉಪಕ್ರಮದ ಅಭಿಯಾನವನ್ನು ಆರಂಭಿಸಿದೆ. ಅಲ್ಲದೇ, ಮಹಿಳಾ ಸಬಲೀಕರಣ ಉಪಕ್ರಮಗಳಡಿ ಬಡ ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ವಿದ್ಯಾರ್ಥಿ ವೇತನಗಳನ್ನು ನೀಡುವ ಮೂಲಕ ಉನ್ನತ ಶಿಕ್ಷಣಕ್ಕೆ ನೆರವಾಗಿದೆ , ಆರೋಗ್ಯ ರಕ್ಷಣೆ ಉಪಕ್ರಮದ ಭಾಗವಾಗಿ   ದುರ್ಬಲ ವರ್ಗದ ಜನರಿಗೆ ಔಷಧಿಗಳ ಪೂರೈಕೆ ಮತ್ತು ವೈದ್ಯಕೀಯ ಕ್ಲಿನಿಕ್‌ಗಳ ವ್ಯವಸ್ಥೆಯನ್ನು ಕಲ್ಪಿಸುತ್ತಾ ಬರುತ್ತಿದೆ. ಇದಲ್ಲದೇ, ಕೇರಳದ ಕೋಝಿಕೋಡ್‌ನಲ್ಲಿನ  ಇಕ್ರಾ  ಆಸ್ಪತ್ರೆಯಲ್ಲಿ ಬಡಜನರ ಚಿಕಿತ್ಸೆಗೆಂದೇ ಪ್ರತ್ಯೇಕ ಕಿಡ್ನಿ ಕೇರ್ ಸೆಂಟರ್ ಆರಂಭಿಸಿದೆ.

ವಸತಿಹೀನರಿಗೆ ವಸತಿ ಕಲ್ಪಿಸುವ ಯೋಜನೆಯಡಿ ಇದುವರೆಗೆ 5 ರಾಜ್ಯಗಳ 38 ಹಳ್ಳಿಗಳ 20,500 ಜನರಿಗೆ ಮನೆ ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

error: Content is protected !!