ಮಾದನಬಾವಿ ಗ್ರಾಮದ ಕೃಷಿ ಮೇಳದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ
ಹೊನ್ನಾಳಿ, ಅ.25- ರೈತರಿಗೆ ಬರಗಾಲ ಪರಿಸ್ಥಿತಿ ಹೊಸದಲ್ಲ. ಆದರೆ ಅಂದು ಬರಗಾಲ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಅಥವಾ ಎದುರಿಸುವ ಶಕ್ತಿಯನ್ನು ರೈತರು ಹೊಂದಿದ್ದರು. ಆದರೆ ಇಂದು ರೈತರು ಹೆಚ್ಚು ಬೆಳೆ ಬೆಳೆಯುವ ಭರಾಟೆಯಲ್ಲಿ ಹವಾಮಾನ ವೈಪರೀತ್ಯ ಮತ್ತು ಮಾರುಕಟ್ಟೆ ಏರುಪೇರುಗಳನ್ನು ಸಹಿಸಿಕೊಳ್ಳಲಾಗದೇ ಹತಾಶನಾಗಿ ಆತ್ಮಹತ್ಯೆಗೆ ಶರಣಾಗುವ ಸ್ಥಿತಿಗೆ ಬಂದಿದ್ದಾನೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಎಚ್. ಆರ್. ಬಸವರಾಜಪ್ಪ ಹೇಳಿದರು.
ಅವರು, ಮಾದನಬಾವಿ ಗ್ರಾಮದಲ್ಲಿ ಶ್ರೀ ಗವಿಸಿದ್ದೇಶ್ವರ ಸೇವಾ ಸಮಿತಿ ಟ್ರಸ್ಟ್‌ನ 18 ಹಳ್ಳಿ ಕಟ್ಟೆಮನೆ ದೊಡ್ಡಕಲ್ಲುಕಟ್ಟೆ ಮಾದನಬಾವಿ ಇವರು ಪ್ರಕೃತಿ ವೈಫಲ್ಯದ ಸಮನ್ಯಯ ಸಾಂಗತ್ಯ ಕೃಷಿ ಎಂಬ ಶೀರ್ಷಿಕೆಯಡಿ ಅ. 25ರಿಂದ 27ರವರೆಗೆ ಹಮ್ಮಿಕೊಂಡಿರುವ ರಾಜ್ಯ ದಸರಾ ಬನ್ನಿ ಕೃಷಿ ಮೇಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೆಚ್ಚು ಬೆಳೆದರೆ ಹಣವಂತರಾಗುತ್ತಾರೆ ಎಂಬ ಭ್ರಮೆಯಲ್ಲಿ ರೈತರು ಸಾಲಬಾಧೆಯ ಸುಳಿಗೆ ಸಿಲುಕಿ ಕಷ್ಟ ಅನುಭವಿಸುವಂತಾಗಿದೆ. ಹಿಂದಿನ ಕಾಲದಲ್ಲಿ ಬರಗಾಲದಲ್ಲೂ ಸಾವಯವ ಮತ್ತು ಸ್ವಾವಲಂಬಿ ಕೃಷಿ ಪದ್ದತಿಗಳ ಮೂಲಕ ರೈತರು ಸರ್ಕಾರದಿಂದ ಯಾವುದೇ ಸಹಾಯ ಬೇಡದೆ ಜೀವನ ನಡೆಸುತ್ತಿದ್ದರು.
ಆದರೆ, ಇಂದಿನ ಬರಗಾಲ ಎಂದು ಪ್ರತಿಯೊಂದಕ್ಕೂ ಸರ್ಕಾರದ ಸಹಾಯ ಬೇಡುವ ಪರಿಸ್ಥಿತಿಯಲ್ಲಿ ರೈತರಿದ್ದಾರೆ ಎಂದು ಹೇಳಿದರು.
ಇಂದಿನ ಬರಗಾಲ ಪರಿಸ್ಥಿತಿಗೆ ರೈತರು ಕಾರಣರೋ, ಸರ್ಕಾರ ಮತ್ತು ಜನ ಕಾರಣರೋ ಎಂದು ಗಂಭೀರ ಚಿಂತನೆ ಮಾಡಬೇಕಿದೆ. ಮನುಷ್ಯ ಅತೀ ದುರಾಸೆಗೆ ಬಲಿಯಾಗಿ ಜಲ ಸಂಪನ್ಮೂಲಗಳು, ಕೃಷಿ ಭೂಮಿ, ಪರಿಸರ, ಕಾಡು ಎಲ್ಲವನ್ನೂ ಹಾಳು ಮಾಡುತ್ತಿದ್ದಾನೆ. ಇದರ ಪರಿಣಾಮ ಕೂಡ ಮನುಷ್ಯನೇ ಅನುಭವಿಸಬೇಕಾಗಿದೆ ಎಂದು ಹೇಳಿದರು.
ಈ ಭಾಗದ ಹೊಸಕೊಪ್ಪದ ದಿವಂಗತ ಎಚ್.ಎಸ್. ರುದ್ರಪ್ಪ ಅವರು ಕೃಷಿ ಮತ್ತು ಆಹಾರ ಮಂತ್ರಿಯಾಗಿ, ಸ್ಪೀಕರ್ ಆಗಿ ರೈತರಿಗಾಗಿ ಅನೇಕ ಉತ್ತಮ ಕೆಲಸ ಮಾಡಿದ್ದು, ಪ್ರತಿಯೊಬ್ಬ ರೈತರು ಕೂಡ ಇವರ ಸ್ಮರಣೆ ಮಾಡಬೇಕು ಎಂದರು.
ಶಾಸಕ ಡಿ.ಜಿ.ಶಾಂತನಗೌಡ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು. ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಗದೀಶ್, ಕೃಷಿ ಮತ್ತು ತೋಟಗಾರಿಕೆ ಕುರಿತು ಉಪನ್ಯಾಸ ನೀಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ, ಜಿ.ಪಂ.ಮಾಜಿ ಸದಸ್ಯ ಡಿ.ಜಿ.ವಿಶ್ವನಾಥ್, ಎಚ್.ಬಿ. ಶಿವಯೋಗಿ, ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಬಿ.ಸಿದ್ದಪ್ಪ, ಇನ್‌ಸೈಟ್ಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯ್ ಕುಮಾರ್, ದಿಡಗೂರು ಪಾಲಾಕ್ಷಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಜಯಪ್ಪ, ಹರಳಹಳ್ಳಿ ಎಚ್.ಕೆ.ಶೇಖರಪ್ಪ ಮಾತನಾಡಿದರು.
ಟ್ರಸ್ಟ್ ಕಾರ್ಯದರ್ಶಿ ಕರಿಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ನವುಲೆ ಈಶ್ವರಪ್ಪ, ಮುಖಂಡ ನಾಗಪ್ಪ, ತಾಲ್ಲೂಕು ರೈತ ಸಂಘದ ಕೆ.ಸಿ. ಬಸಪ್ಪ, ಕೃಷಿ ಅಧಿಕಾರಿ ಪ್ರತಿಮಾ ಇತರರು ಇದ್ದರು.