ಅನುಭವ ಇಲ್ಲದ ಸಿಬ್ಬಂದಿ, ಕೆಲ ಪುರಪಿತೃಗಳ ಹಿಡಿತದಲ್ಲಿ ಆಡಳಿತ ಚುಕ್ಕಾಣಿ

ಅನುಭವ ಇಲ್ಲದ ಸಿಬ್ಬಂದಿ, ಕೆಲ ಪುರಪಿತೃಗಳ ಹಿಡಿತದಲ್ಲಿ ಆಡಳಿತ ಚುಕ್ಕಾಣಿ

ಹರಿಹರ ನಗರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಬಿ.ಪಿ.ಹರೀಶ್ ಆಕ್ಷೇಪ    

ಹರಿಹರ, ಅ.25-   ಅನುಭವ ಇಲ್ಲದ ಸಿಬ್ಬಂದಿಗಳು ಮತ್ತು ಕೆಲವು ಪುರಪಿತೃಗಳ ಹಿಡಿತದಲ್ಲಿ ನಗರಸಭೆ ಆಡಳಿತದ ಚುಕ್ಕಾಣಿ ಇರುವುದರಿಂದ ನಗರಸಭೆ ಆಡಳಿತ ವೈಖರಿ ಶಕ್ತಿ ಯನ್ನು ಕಳೆದುಕೊಂಡು, ಸಾರ್ವಜನಿಕರಿಗೆ ಹೆಚ್ಚು ತೊಂದರೆ ಗಳು ಆಗುತ್ತಿವೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ನಗರಸಭೆ ಸಭಾಂಗಣದಲ್ಲಿ  ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು,  ಸಾರ್ವಜನಿಕರ ಯಾವುದೇ  ಕೆಲಸ ಕಾರ್ಯಗಳು ಆಗಬೇಕಾದರೆ ಹರ ಸಾಹಸ ಪಡುವಂತಹ ವಾತಾವರಣ ಇದೆ.     ಸದಸ್ಯರಲ್ಲಿ ಮತ್ತು ಅಧಿಕಾರಿಗಳಲ್ಲಿ ಸರಿಯಾದ ಹೊಂದಾಣಿಕೆ ಇಲ್ಲದೇ ಇರುವುದರಿಂದ ಗೆದ್ದಿರುವ ಸದಸ್ಯರು, ನಾವೆಲ್ಲರೂ ಏನು ಮಾಡಬೇಕೆಂದು ಗೊಂದಲಕ್ಕೆ ಸಿಲುಕಿ  ಆಡಳಿತ ಯಂತ್ರವು ಜಿಡ್ಡು ಗಟ್ಟಿದ ವಾತಾವರಣದಲ್ಲಿ ಸಾಗುತ್ತಿದೆ ಎಂದರು.

ಸದಸ್ಯ ಶಂಕರ್ ಖಟಾವ್ಕರ್ ಮಾತನಾಡಿ, ಸ್ವಚ್ಚತೆಗೆ ಆದ್ಯತೆ  ಕೊಡುತ್ತಿಲ್ಲ.  ಅನೇಕ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಯಲ್ಲಿ ಇದ್ದು, ನಿರ್ವಹಣೆ ಸರಿಯಾದ ರೀತಿಯಲ್ಲಿ ಇಲ್ಲದೇ   ಲಕ್ಷಾಂತರ ಹಣ ಬಳಕೆ ಮಾಡಿದ್ದು ವ್ಯರ್ಥವಾಗಿದೆ ಎಂದು ಹೇಳಿದರು.

ಹಿರಿಯ ಸದಸ್ಯ ಎ. ವಾಮನಮೂರ್ತಿ ಮಾತನಾಡಿ, ಮುಂದಿನ ಬೇಸಿಗೆ ದಿನಗಳಲ್ಲಿ ನೀರಿನ ಸಮಸ್ಯೆಗಳು ಹೆಚ್ಚಾಗಿರುತ್ತದೆ. ಅದರ ಕಡೆ ಹೆಚ್ಚು ಗಮನ ಹರಿಸಬೇಕು. ಶಾಸಕರು ಸರ್ಕಾರದ ಗಮನಕ್ಕೆ ತಂದು, ಎರಡು ಎಕರೆ ಜಮೀನನ್ನು ಖರೀದಿಸಿ ಜಾಕ್‌ವೆಲ್ ನಿರ್ಮಾಣ ಮಾಡಬೇಕು. ನಾನು 18 ವರ್ಷದಿಂದ  ಸದಸ್ಯನಾಗಿದ್ದರೂ    ಸಹ ನನ್ನ ವಾರ್ಡಿಗೆ 5 ಲಕ್ಷ ಅನುದಾನ ಹಾಕಿದ್ದಾರೆ. ಹೊಸ ಸದಸ್ಯರಿಗೆ 30 ಲಕ್ಷ ಅನುದಾನ ಹಾಕುತ್ತಾರೆ ಇದೇನಾ ಆಡಳಿತ ವ್ಯವಸ್ಥೆ ಎಂದು ಪ್ರಶ್ನಿಸಿದರು.

ಸದಸ್ಯೆ ಅಶ್ವಿನಿ ಕೃಷ್ಣ ಮಾತನಾಡಿ, ನಗರದ ಶಿವಮೊಗ್ಗ ರಸ್ತೆಯಲ್ಲಿ ನಡೆಯುವ ವಾರದ ಸಂತೆಯಿಂದಾಗಿ  ಶಾಲಾ-ಕಾಲೇಜು ವಿದ್ಯಾರ್ಥಿ ಗಳಿಗೆ ತೊಂದರೆ  ಆಗುತ್ತದೆ. ವಾಹನ ಪಾರ್ಕಿಂಗ್ ಇಲ್ಲದೇ ಅಪಘಾತ ಸಂಭವಿಸಿ ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿದ್ದು, ಕೂಡಲೇ ಸಂತೆಯ ಸ್ಥಳವನ್ನು ಬದಲಾಯಿಸಬೇಕು  ಎಂದರು. 

ಸದಸ್ಯ ಗುತ್ತೂರು ಜಂಬಣ್ಣ ಮಾತನಾಡಿ, ನಗರದಲ್ಲಿ ಮನೆ ಕಟ್ಟಲು ದಾವಣಗೆರೆ ಪ್ರಾಧಿಕಾರದಿಂದ ಲೈಸೆನ್ಸ್ ಪಡೆಯಬೇಕು. ಪ್ರಾಧಿಕಾರದ ಅಧಿಕಾರಿ ವಾರದಲ್ಲಿ ಎರಡು ಬಾರಿ ಬಂದು ಹೋಗುತ್ತಾರೆ. ಹಾಗಾಗಿ, ನಗರಸಭೆಯಿಂದಲೇ ಲೈಸೆನ್ಸ್ ಕೊಡುವಂತ ವ್ಯವಸ್ಥೆ ಆಗಬೇಕು. ಇದಕ್ಕೆ ಶಾಸಕರೂ ಸಹ ಮುತುವರ್ಜಿ  ವಹಿಸಬೇಕು  ಎಂದು ಹೇಳಿದರು.

ಸದಸ್ಯ ಎಸ್.ಎಂ. ವಸಂತ ಮಾತನಾಡಿ,   ಭಾಗೀರಥಿ ಕಲ್ಯಾಣ ಮಂಟಪದವರು ಕಂದಾಯ ಕಟ್ಟದೇ ಲಕ್ಷಾಂತರ ರೂ. ಬಾಕಿ ಉಳಿಸಿಕೊಂಡಿದ್ದಾರೆ. ಅವರಿಗೆ ನೀರು, ಕಸ ಸಾಗಣೆ ಎಲ್ಲಾ ಸೌಲಭ್ಯ ನೀಡಲಾಗಿದ್ದರೂ ಸಹಿತ ಅಷ್ಟೊಂದು ಬಾಕಿ ಉಳಿಸಿಕೊಂಡಿದ್ದಾರೆ. ಬಡವರು ಸಾವಿರ ರೂಪಾಯಿ ಕಂದಾಯ ಕಟ್ಟದೇ ಇದ್ದರೆ, ವಸೂಲಿಗೆ ದಬ್ಬಾಳಿಕೆ ಮಾಡುತ್ತೀರಿ, ಮೊದಲು ಶ್ರೀಮಂತರ ಕಂದಾಯವನ್ನು ಕಟ್ಟಿಸಿಕೊಳ್ಳಿ ಎಂದು ಹೇಳಿದರು.

ಸದಸ್ಯ ಆರ್.ಸಿ ಜಾವೇದ್ ಮಾತನಾಡಿ, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 2013 ರಿಂದ 2016 ರವರಿಗೆ ಹುಟ್ಟಿದ ಮಕ್ಕಳಿಗೆ ಜನನ ಪ್ರಮಾಣ ಪತ್ರ ಕೊಡುತ್ತಿಲ್ಲ. ಇದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸುವುದು ಕಷ್ಟವಾಗಿದ್ದು, ಈ ಸಮಸ್ಯೆಯನ್ನು ಆದಷ್ಟು ಬೇಗನೆ ಪರಿಹರಿಸಿ ಮೂಲಕ ಮಕ್ಕಳ ಭವಿಷ್ಯವನ್ನು ರೂಪಿಸಿ ಎಂದು ಹೇಳಿದರು.

ಸದಸ್ಯ ಹನುಮಂತಪ್ಪ ಮಾತನಾಡಿ,   ಸಾರ್ವ ಜನಿಕರ ಆಸ್ತಿಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಿರುವ ಅಕ್ರಮ ಮನೆಗಳನ್ನು    ತೆರವುಗೊಳಿಸದೇ ಹೋದರೆ  ಜಿಲ್ಲಾಧಿಕಾರಿಗಳ ಕಚೇರಿ  ಮುಂಭಾಗದಲ್ಲಿ ಧರಣಿ ಮಾಡುವೆ ಎಂದರು.  

ಸದಸ್ಯ ದಾದಾ ಖಲಂದರ್ ಮಾತನಾಡಿ, ಗುತ್ತೂರು, ಹರ್ಲಾಪುರ, ಬಕ್ಕಪುರ ನಗರಕ್ಕೆ ಸೇರ್ಪಡೆ ಆಗಿದ್ದು, ಅಲ್ಲಿ ಜಾಗವನ್ನು ಗುರುತಿಸಿ ಹದ್ದು ಬಸ್ತು ಮಾಡಿ,  ತದನಂತರ ಡೋರ್ ನಂಬರ್   ಕೊಡಿ ಎಂದು ಒತ್ತಾಯಿಸಿದರು.

ಪೌರಾಯುಕ್ತ ಐಗೂರು ಬಸವರಾಜ್ ಮಾತನಾಡಿ, ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆಗೆ ಹೊಸದಾಗಿ ಒಬ್ಬರಿಗೆ ವಹಿಸಲಾಗಿದೆ. ಇನ್ನು ಮುಂದೆ ಸಮಸ್ಯೆಗಳು ಇರುವುದಿಲ್ಲ.  ನಗರದಲ್ಲಿ ಜಲಸಿರಿ ಮತ್ತು ಯುಜಿಡಿ ಕಾಮಗಾರಿ ಕಳಪೆ ಗುಣಮಟ್ಟದ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪತ್ರವನ್ನು ಬರೆಯಲಾಗಿದೆ ಎಂದು ತಿಳಿಸಿದರು.

ಸದಸ್ಯರಾದ ಉಷಾ ಅಂಗಡಿ ಮಂಜುನಾಥ್, ರಜನಿಕಾಂತ್, ಎಂ.ಎಸ್. ಬಾಬುಲಾಲ್, ಪಿ.ಎನ್. ವಿರುಪಾಕ್ಷಪ್ಪ ಅವರುಗಳು, ಕುಡಿಯುವ ನೀರಿನ ಬಿಲ್ ಬಹಳ ಬರುತ್ತದೆ. ಅದನ್ನು ಇಂತಿಷ್ಟು ಮೊತ್ತ ಎಂದು ನಿಗದಿ ಪಡಿಸಬೇಕು.  ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ ಉಚಿತ ವಾಗಿ ನೀರು ಸರಬರಾಜು ಮಾಡಬೇಕು  ಎಂದು ಹೇಳಿದರು.

ನೀರು ಸರಬರಾಜು ಇಲಾಖೆ ಎಇಇ ನವೀನ್ ಮಾತನಾಡಿ, ನಗರದಲ್ಲಿ ಜಲಸಿರಿ ಯೋಜನೆ ವತಿಯಿಂದ 17 ಸಾವಿರದ 800 ನಲ್ಲಿ ಮೂಲಕ ಗುಣಮಟ್ಟದ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ  ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ನಿಂಬಕ್ಕ ಚಂದಪೂರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕೆ.ಜಿ. ಸಿದ್ದೇಶ್, ಸದಸ್ಯರಾದ ಗುತ್ತೂರು ಜಂಬಣ್ಣ, ವಿಜಯಕುಮಾರ್, ದಿನೇಶ್ ಬಾಬು, ರತ್ನ ಡಿ ಉಜ್ಜೇಶ್, ಪಕ್ಕೀರಮ್ಮ, ನಾಗರತ್ನ, ಲಕ್ಷ್ಮಿ ಮೋಹನ್, ಕವಿತಾ ಮಾರುತಿ, ಶಹಜಾದ್ ಸಮೀವುಲ್ಲಾ, ಶಾಹಿನಾಬಾನು ದಾದಾಪೀರ್, ಮುಜಾಮಿಲ್‌ ಬಿಲ್ಲು, ಅಲಿಂ, ರೇಷ್ಮಾಬಾನು ಜಾಕೀರ್, ಪಾರ್ವತಮ್ಮ ಐರಣಿ, ಬಿ. ಅಲ್ತಾಫ್, ಎಇಇ ತಿಪ್ಪೇಸ್ವಾಮಿ, ಮ್ಯಾನೇಜರ್ ಶಿವಕುಮಾರ್, ಆರೋಗ್ಯ ಇಲಾಖೆ ರವಿಪ್ರಕಾಶ್, ಇಂಜಿನಿಯರ್ ಮಹಾಂತೇಶ್, ಮಂಜುಳಾ, ತಿಪ್ಪೇಸ್ವಾಮಿ, ಆರ್. ಓ. ರಮೇಶ್, ರಮೇಶ್, ನಾಗರಾಜ್  ಇತರರು ಹಾಜರಿದ್ದರು.

error: Content is protected !!