ಲಕ್ಷಾಂತರ ಜನರ ಕಣ್ಮನ ಸೆಳೆದ ದಸರಾ ಜಂಬೂ ಸವಾರಿ

ಲಕ್ಷಾಂತರ ಜನರ ಕಣ್ಮನ ಸೆಳೆದ ದಸರಾ ಜಂಬೂ ಸವಾರಿ

ಮೈಸೂರು, ಅ. 24 –  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯನ್ನು‌ ಮಂಗಳವಾರ ಲಕ್ಷಾಂತರ ಜನರು ಕಣ್ತುಂಬಿಕೊಂಡರು. 

ದಸರಾ ಮಹೋತ್ಸವದ ಅಂತಿಮ ಕ್ಷಣಕ್ಕೆ ಕಾಯುತ್ತಿದ್ದ ಅಸಂಖ್ಯಾತ ಭಕ್ತರು ಅಭಿಮನ್ಯು ಮೇಲಿನ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ಕುಳಿತಿದ್ದ ನಾಡದೇವತೆ ಶ್ರೀ ಚಾಮುಂಡೇಶ್ವರಿಯನ್ನು ಭಕ್ತಿ-ಭಾವದಿಂದ ನಮಿಸುವ ಮೂಲಕ ಪುನೀತರಾದರು.

ಸಂಜೆ 4.40 ರಿಂದ 5 ಗಂಟೆಯ ಶುಭ ಮೀನ ಲಗ್ನದಲ್ಲಿ ದಸರಾ ಜಂಬೂ ಸವಾರಿ ಮೆರವಣಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಅರಮನೆ ಅಂಗಳದಲ್ಲಿ ಅಂಬಾರಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿದರು. ಈ ವೇಳೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಡಿಸಿಎಂ ಡಿ.ಕೆ.ಶಿವಕುಮಾರ್‌ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್‌.ಸಿ.ಮಹದೇವಪ್ಪ, ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ಮೇಯರ್‌ ಶಿವಕುಮಾರ್‌ ಅಂಬಾರಿಗೆ ಪುಷ್ಪಾರ್ಚನೆ ಮಾಡಿ ಸಿಎಂಗೆ ಸಾಥ್‌ ನೀಡಿದರು.

 

ದಸರಾ ವಸ್ತುಪ್ರದರ್ಶನದ ಆವರಣದಲ್ಲಿ 21 ಕುಶಾಲತೋಪುಗಳನ್ನು ಸಿಡಿಸಿ, ರಾಷ್ಟ್ರಗೀತೆ ನುಡಿಸಲಾಯಿತು. ನಂತರ ಅಂಬಾರಿ ಆನೆಯು ಪೊಲೀಸ್ ಅಶ್ವದಳದ ಬೆಂಗಾವಲಿನಲ್ಲಿ ಸಾಗಿತು. ಸಿಬ್ಬಂದಿಯು ರಾಜಪೋಷಾಕು ಧರಿಸಿ, ವಿವಿಧ ಲಾಂಛನಗಳನ್ನು ಹಿಡಿದು ಅಂಬಾರಿಯ ಸುತ್ತ ಮೆರವಣಿಗೆಯಲ್ಲಿ ಸಾಗಿ ರಾಜರ ಕಾಲದ ಗತವೈಭವವನ್ನು ನೆನಪಿಸಿದರು.

ದಸರಾ ಜಂಬೂ ಸವಾರಿಗೆ ಸ್ತಬ್ಧಚಿತ್ರ ಹಾಗೂ ವಿವಿಧ ಕಲಾತಂಡಗಳು ಮೆರುಗು ನೀಡಿದವು. ರಾಜ್ಯದ ವಿವಿಧ ಜಿಲ್ಲೆಗಳ 31 ಹಾಗೂ ವಿವಿಧ ಇಲಾಖೆಗಳ 18 ಸೇರಿದಂತೆ ಒಟ್ಟು 49 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಇಸ್ರೋ ಯಶಸ್ವೀ ಚಂದ್ರಯಾನ-3 ಯೋಜನೆಗೆ ಸಂಬಂಧಿಸಿದ ಸ್ತಬ್ಧಚಿತ್ರ ಗಮನ ಸೆಳೆಯಿತು.

ಈ ಬಾರಿಯ ದಸರಾ ಮಹೋತ್ಸವದಲ್ಲಿ ಮೈಸೂರು ನಗರ ಪಾಲಿಕೆ ಮೇಯರ್ ಶಿವಕುಮಾರ್ ಅವರಿಗೆ ಮತ್ತೆ ಕುದುರೆ ಸವಾರಿ ಭಾಗ್ಯ ಲಭಿಸಿತು. ಶಿವಕುಮಾರ್ ಅವರ ಮೇಯರ್ ಅವಧಿ ಅಂತ್ಯಗೊಂಡಿದ್ದರೂ ಹೊಸದಾಗಿ ಯಾರೂ ಮೇಯರ್ ಆಗಿ ಅಧಿಕಾರ ಸ್ವೀಕರಿಸದೇ ಇರುವುದರಿಂದ ಶಿವಕುಮಾರ್ ಅವರೇ ಈ ಬಾರಿಯೂ ಜಂಬೂ ಸವಾರಿ ಮೆರವಣಿಗೆಯಲ್ಲಿ
ಕುದುರೆ ಸವಾರಿ ಮಾಡಿದರು.

error: Content is protected !!