ದಾವಣಗೆರೆ, ಅ. 24 – ನಗರದ ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಗ್ರ್ಯಾಜುಯೇಷನ್ ಡೇ ಸಮಾರಂಭವನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ. ಡಿ. ಕುಂಬಾರ್ ಅವರು 2023ರ ಬ್ಯಾಚ್ ಅನ್ನು ಉದ್ದೇಶಿಸಿ ಪಾಲಕರು ಮತ್ತು ಅಧ್ಯಾಪಕರನ್ನು ಅಭಿನಂದಿಸಿ, ಕಲಿಕೆಯನ್ನು ನಿಲ್ಲಿಸಬೇಡಿ, ಕಲಿಯುವುದನ್ನು ಮುಂದುವರೆಸಿ ಮತ್ತು ಕೆಲಸ ಮಾಡುವ ಮನೋಭಾವ ಮತ್ತು ಕೌಶಲ್ಯವನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು. ಉದ್ಯಮ ಕ್ಷೇತ್ರದ ಅವಕಾಶಗಳು ಮತ್ತು ಅದರ ಸದ್ಬಳಕೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಮತ್ತೊರ್ವ ಮುಖ್ಯ ಅತಿಥಿಯಾಗಿದ್ದ ವಿಶ್ವೇಶ್ವ ರಯ್ಯ ತಾಂತ್ರಿಕ ಮಹಾವಿದ್ಯಾಲಯದ ಕುಲಸಚಿವ ಡಾ. ಬಿ. ಇ. ರಂಗಸ್ವಾಮಿ ಮಾತನಾಡಿ, ಮುಂದಿನ ವರ್ಷಗಳಲ್ಲಿ 4ಡಿ ತಂತ್ರಜ್ಞಾನ ಪ್ರಂಪಚದಲ್ಲಿ ಆಕ್ರಮಿಸುತ್ತದೆ ಎಂದರು. ಭಾರತದ ಆರ್ಥಿಕತೆಯ ಬೆಳವಣಿಗೆ ಬಗ್ಗೆ ಮಾತನಾಡಿದ ಅವರು, 2047 ರಲ್ಲಿ ಭಾರತವು ಜಾಗತಿಕ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತದೆ ಎಂದು ವಿವರಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಮಾತಿನಲ್ಲಿ ಸತ್ಯವಿರಬೇಕು, ಸತ್ಯ ಪಾರದರ್ಶಕವಾಗಿರಬೇಕು ಎಂದು ತಿಳಿಸಿದರು.
ಜೆಐಟಿಯ ಅಧ್ಯಕ್ಷ ಅಚಲ್ಚಂದ್ ಜೈನ್, ಕಾಲೇಜಿನ ಪ್ರಾಂಶುಪಾಲ ಡಾ. ಡಿ.ಬಿ. ಗಣೇಶ್, ಜೈನ್ ಸಮೂಹದ ಸಲಹೆಗಾರರಾದ ಡಾ. ಮಂಜಪ್ಪ ಸಾರಥಿ, ಡೀನ್ ಆಕಾಡೆಮಿಕ್ಸ್ ಡಾ. ಎನ್. ಮಧುಕೇಶ್ವರ, ಕಾರ್ಯಕ್ರಮದ ಸಂಚಾಲಕ ಡಾ. ರಾಹುಲ್ ಪಾಟೀಲ್, ಸಂಯೋಜಕರಾದ ಭರತ್ ಎಚ್. ಎಂ ಮತ್ತು ಕೆ. ಎಸ್. ಹರೀಶ್ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.