ಜಗಳೂರಿನ ಕಾರ್ಯಕ್ರಮದಲ್ಲಿ ರಾಯಚೂರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ್ ದಂಡಿನ
ಜಗಳೂರು, ಅ. 24 – ಗ್ರಾಮದಲ್ಲಿ ಸರ್ಕಾರಿ ನೌಕರರ ಸಹಕಾರದಿಂದ ನೌಕರರ ಸಂಘ ರಚಿಸಿ, ಡಿಜಿಟಲ್ ಗ್ರಂಥಾಲಯ ತೆರೆಯಲಾಗಿದೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲಿದೆ ಎಂದು ರಾಯಚೂರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ್ ದಂಡಿನ ತಿಳಿಸಿದರು.
ತಾಲ್ಲೂಕಿನ ತಮಲೇಹಳ್ಳಿ ಗ್ರಾಮದ ಗಿರಿಜಾ ಸಭಾಭವನದಲ್ಲಿ ದಂಡಿನ ರಾಜಪ್ಪ ಪರಿವಾರ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ದಂಡಿನ ರಾಜಪ್ಪ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದ ಸ್ಮರಣಾರ್ಥ ರಂಗಕರ್ಮಿ ಹಾಗೂ ಲೇಖಕ ಶಿವಕುಮಾರ್ ನಾಯಕ ದೊರೆ ವಿರಚಿತ `ಬಲ್ಲಾಳ’ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಳ್ಳಿಯ ಮಕ್ಕಳಿಗೆ ನವೋದಯ, ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳ ಪ್ರವೇಶಾತಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಲೇಖಕ ಶಿವಕುಮಾರ ನಾಯಕ ದೊರೆ ಮಾತನಾಡಿ, ದಂಡಿನ ರಾಜಪ್ಪ ಪರಿವಾರ ಪ್ರತಿಷ್ಠಾನ ಟ್ರಸ್ಟ್ ದವರು ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ನಾನು
ರಚಿಸಿದ ಕಾದಂಬರಿ ಬಿಡುಗಡೆ, ನಾಟಕಾಭಿನಯ ವೇದಿಕೆಗಳು ನನಗೆ ಹರ್ಷ ತಂದಿವೆ ಎಂದರು.
ಮೈಸೂರು ಕೃಷಿ ತಜ್ಞ ಟಿ.ಜಿ.ಎಸ್. ಅವಿನಾಶ್ ಅವರು, ಜಾಗತಿಕ ತಾಪಮಾನ ಮತ್ತು ಕೃಷಿ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಸಂಶೋಧಕ ಹಾಗೂ ಉಪನ್ಯಾಸಕ ಇಮಾಂ ಸಾಬ್ ಹಡಗಲಿ, ಬಲ್ಲಾಳ ಕಾದಂಬರಿಯ ತಿರುಳನ್ನು ಕಥಾ ರೂಪದಲ್ಲಿ ತಿಳಿಸಿದ ಅವರು, ಲೇಖಕ ದಂಡಿನ ಶಿವಕುಮಾರ್ ಅವರು ರಚಿಸಿದ ಸುಂದರ ಬಲ್ಲಾಳ ಕಾದಂಬರಿಯಲ್ಲಿ, ಗೂಳಿ ಕಾಳಗ, ಜಾನಪದ ಸೊಗಡು, ನಾಟಿ ವೈದ್ಯಕೀಯ ಪದ್ದತಿ, ಪ್ರಾಣಿದಯೆ, ಕಾರಹುಣ್ಣಿಮೆ ಹಬ್ಬದಲ್ಲಿ ಕರಿ ಮತ್ತು ಬಿಳಿ ಎತ್ತುಗಳ ಓಟದ ಸ್ಪರ್ಧೆ, ರಂಗನ ಪ್ರೇಮಕಥನ, ಫಸಲಿನ ನಿರೀಕ್ಷೆ ಎಲ್ಲವೂ ಅಡಗಿವೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಟ್ರಸ್ಟ್ ವತಿಯಿಂದ ಉರಿಮೆಯ ಹಿರಿಯ ಕಲಾವಿದರಿಗೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಟ್ರಸ್ಟ್ ನಲ್ಲಿ ಟೈಲರಿಂಗ್ ತರಬೇತಿ ಪಡೆದ ಫಲಾನುಭವಿಗಳಿಗೆ ಪ್ರಶಸ್ತಿ ಪತ್ರ, ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡ ಪೂಜಾರ್ ಅಂಗಡಿ ಬೋರಯ್ಯ, ಸಾಹಿತಿ ಎನ್.ಟಿ.
ಎರಿಸ್ವಾಮಿ, ಮೈಸೂರು ಪ್ರಥಮ ದರ್ಜೆ
ಕಾಲೇಜಿನ ಪ್ರಾಧ್ಯಾಪಕ ಡಾ. ರೇವಣ್ಣಸ್ವಾಮಿ, ಪ್ರಹ್ಲಾದ್, ಲತಾ, ಡಿಪಿ ಹನುಮಂತಪ್ಪ, ಸೇರಿದಂತೆ ಇತರರು ಉಪಸ್ಥಿತರಿದ್ದರು.