ದಾವಣಗೆರೆ, ಅ. 24- ಪ್ರಸ್ತುತ ಸ್ವಾರ್ಥ ಸಮಾಜಕ್ಕಿಂತ ಸ್ವಾಸ್ಥ್ಯ ಸಮಾಜ ನಿರ್ಮಾಣ ಲೇಸು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಪ್ರಭುಗಳಾಗಿರ ಬೇಕು ಎಂದು ಇನ್‌ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ. ವಿನಯ್ ಕುಮಾರ್ ಅಭಿಪ್ರಾಯಪಟ್ಟರು. ನಗರದ ತಮ್ಮ ಜನಸಂಪರ್ಕ ಕಚೇರಿ ಆವರಣದಲ್ಲಿ ಅವರ ಅಭಿಮಾನಿ ಬಳಗದ ವತಿಯಿಂದ ಮೊನ್ನೆ ಆಯೋಜಿಸಿದ್ದ ವಿಕಲಚೇತನರಿಗೆ ವ್ಹೀಲ್ ಚೇರ್, ವಾಕರ್, ವಾಕಿಂಗ್ ಸ್ಟಿಕ್ ಹಾಗೂ ಶ್ರವಣ ಸಾಧನಗಳ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜಕಾರಣಿಗಳು ಜನಸೇವಕರಾಗಿ ಇರಬೇಕೆಂಬ ಅರಿವು ಹೊಂದಬೇಕಾಗಿದೆ. ಶಿಕ್ಷಣದಿಂದ ಬದಲಾವಣೆ ತರಲು ಸಾಧ್ಯ. ಇಂದಿನ ಶಿಕ್ಷಣ ಪದ್ಧತಿ ಎಲ್ಲರನ್ನು ದಡ್ಡರನ್ನಾಗಿಸುತ್ತಿದೆ. ಹೊಸ ಆಲೋಚನೆಗಳಿರುವ ಶಿಕ್ಷಣದ ಅಗತ್ಯವಿದೆ ಎಂದರು.
ಜನರನ್ನು ವಂಚಿಸುವ ಮೂಲಕ ಅಧಿಕಾರ, ಸಂಪತ್ತು, ಅವಕಾಶಗಳನ್ನು ಪಡೆಯಬೇಕೆಂಬ ಮನೋಭಾವನೆ ಹೆಚ್ಚಾಗಿ ಕಂಡು ಬರುತ್ತಿದೆ. ರಾಜಕಾರಣಿಗಳಲ್ಲಿರುವ ಈ ಧೋರಣೆ ಬದಲಾಗಬೇಕಿದೆ ಎಂದು ಹೇಳಿದರು.
ಸಾಮಾಜಿಕ ಕಳಕಳಿ, ಸೇವಾ ಮನೋಭಾವನೆ, ಜನರ ಆಶೋತ್ತರಗಳಿಗೆ ಸ್ಪಂದಿಸುವ ಗುಣಗಳಿರುವ ಮತ್ತು ಜನರನ್ನು ಪ್ರೀತಿಯಿಂದ ಕಾಣುವ ರಾಜಕಾರಣಿಗಳ ಅಗತ್ಯತೆ ಇದೆ. ಇವುಗಳಿದ್ದಲ್ಲಿ ಜನರ ಕಷ್ಟಗಳಿಗೆ ನೆರವಾಗುವ ಮನೋಭಾವನೆ ಬರುತ್ತದೆ ಎಂದರು.
ಯರಗುಂಟೆ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಗದ್ದುಗೆ ಮಠದ ಶ್ರೀ ಪರಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದಿನ ರಾಜಕೀಯ ಕ್ಷೇತ್ರ ಸಂವಿಧಾನದ ಆಶಯದಂತೆ ಸೇವಾ ಕ್ಷೇತ್ರವಾಗಿ ಉಳಿದಿಲ್ಲ ಎಂದರು.ರಾಜಕೀಯ ಕ್ಷೇತ್ರ ಸೇವಾ ಕ್ಷೇತ್ರವಾಗಿರದೇ ಅದೊಂದು ವ್ಯಾಪಾರೋದ್ಯಮವಾಗಿ ಬದಲಾಗಿದೆ. ಬಂಡವಾಳ ಹೂಡಿ ಬಂಡವಾಳ ಪಡೆಯಬೇಕೆಂಬ ಮನೋ ಧೋರಣೆ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಹೇಳಿದರು.
ಹದಡಿ- ಹೊಸಹಳ್ಳಿ ಚಂದ್ರಗಿರಿ ಮಠದ ಶ್ರೀ ಸದ್ಗುರು ಪರಮಹಂಸ ವಿದ್ಯಾವರೇಣ್ಯ ಮುರುಳೀಧರ ಸ್ವಾಮೀಜಿ ಅವರು ವಿನಯ್ ಅವರ ಸೇವಾ ಕಾರ್ಯಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಬಸವ ಕಲಾ ಲೋಕದ ಕಲಾವಿದ ಆದರ್ಶ ಪ್ರಾರ್ಥಿಸಿದರು. ಪತ್ರಕರ್ತ ಪುರಂದರ್ ಲೋಕಿಕೆರೆ ಸ್ವಾಗತಿಸಿದರು. ಸುಪ್ರಿತಾ ಒಡೆಯರ್ ನಿರೂಪಿಸಿದರು. ಇದೇ ವೇಳೆ ಗೌರವಿಸುವ ಮೂಲಕ 45 ಕ್ಕೂ ಹೆಚ್ಚು ವ್ಹೀಲ್ ಚೇರ್, 40 ಕ್ಕೂ ಹೆಚ್ಚು ವಾಕರ್ ಹಾಗೂ 80 ಕ್ಕೂ ಹೆಚ್ಚು ಶ್ರವಣ ಸಾಧನಗಳನ್ನು ವಿತರಣೆ ಮಾಡಲಾಯಿತು.
ಪತ್ರಕರ್ತ ಮಧುಕರ್, ಶಿವಣ್ಣ, ಶರತ್ ಕುಮಾರ್, ರವಿಕುಮಾರ ಸೇರಿದಂತೆ ವಿನಯ್ ಕುಮಾರ್ ಅಭಿಮಾನಿ ಬಳಗದ ಮುಖಂಡರು ಉಪಸ್ಥಿತರಿದ್ದರು.