ಬುದ್ದನ ಜೀವನ, ಬೋಧನೆ‌ ಯುವ ಪೀಳಿಗೆಗೆ ಆದರ್ಶ

ಬುದ್ದನ ಜೀವನ, ಬೋಧನೆ‌ ಯುವ ಪೀಳಿಗೆಗೆ ಆದರ್ಶ

ನಾಗ್ಪುರ ದೀಕ್ಷಾ ಭೂಮಿಗೆ ತೆರಳುವ  ಯಾತ್ರಾರ್ಥಿಗಳಿಗೆ ಹಸಿರು ನಿಶಾನೆ ತೋರಿದ ಜಗಳೂರು ಶಾಸಕ ದೇವೇಂದ್ರಪ್ಪ

ಜಗಳೂರು, ಅ.22- ಗೌತಮ ಬುದ್ದನ ಜೀವನ ಮತ್ತು ಬೋಧನೆ‌ ಭವ್ಯವಾದವು. ಇಂದಿನ ಯುವ ಪೀಳಿಗೆಗೆ ಆದರ್ಶವಾಗಬೇಕು. ಅಂತಹ ಬೌದ್ಧ ಧರ್ಮದ ದೀಕ್ಷೆ ಸ್ವೀಕರಿಸಿದ ಸಂವಿಧಾನ ಶಿಲ್ಪಿ  ಬಾಬಾಸಾಹೇಬರ ಸಿದ್ಧಾಂತ ಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ  ನಾಗ್ಪುರ ದೀಕ್ಷಾ ಭೂಮಿಗೆ ತೆರಳುವ 25 ಯಾತ್ರಾರ್ಥಿಗಳ ಪ್ರವಾಸಕ್ಕೆ ಹಸಿರು ನಿಶಾನೆ ತೋರಿಸಿ ಶುಭ ಕೋರಿ ಅವರು ಮಾತನಾಡಿದರು.

ಮಹಾರಾಷ್ಟ್ರದ ನಾಗ್ಪುರ ಬೌದ್ಧ ಧರ್ಮದ ಪವಿತ್ರ ಸ್ಮಾರಕ. ಅಂಬೇಡ್ಕರ್ ದೀಕ್ಷೆ ಪಡೆದಿದ್ದು, ಅವರ ಅನುಯಾಯಿಗಳಿಗೆ ಪವಿತ್ರ ಸ್ಥಳವಾಗಿದೆ  ಎಂದು  ಹೇಳಿದರು.

ತಾಲ್ಲೂಕಿನಲ್ಲಿ ಮಾಹಿತಿ ಕೊರತೆಯಿಂದ ಕೆಲವರೇ ತೆರಳುತ್ತಿದ್ದಾರೆ. ಮುಂದಿನ ಬಾರಿ ಪೂರ್ವಭಾವಿ ಸಭೆ ಕರೆದು ಇಲಾಖೆಯವರು ಜಾಗೃತಿ ಮೂಡಿಸಬೇಕು. ಗ್ರಾಮೀಣ ಭಾಗದಿಂದಲೂ‌ ಅಧಿಕ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ಸರ್ಕಾರದ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಇದೀಗ ತೆರಳುತ್ತಿರುವ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಅಲ್ಲದೆ ಅದ್ಧೂರಿಯಾಗಿ  ಸ್ವಾಗತಿಸಲಾಗುವುದು ಎಂದ ಶಾಸಕರು, ಯಾತ್ರಿಗಳು ಅಲ್ಲಿನ ಅನುಭವ, ವಿಚಾರ ವಿನಿಮಯ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಬಾಬಾ ಸಾಹೇಬರು ಹಿಂದೂ ಧರ್ಮದಲ್ಲಿನ ಮತಾಂಧತೆ, ಅಸ್ಪೃಶ್ಯತೆಯಿಂದ ಬೇಸತ್ತು ಬೌದ್ಧ ಧರ್ಮ ದೀಕ್ಷೆ ಸ್ವೀಕರಿಸಿದರು. ಅಂದು 4 ಲಕ್ಷ ಅನುಯಾಯಿಗಳು ಬೌದ್ಧ ಧರ್ಮ ಸ್ವೀಕರಿಸಿದ ಇತಿಹಾಸವಿದೆ. ಸಂವಿಧಾನದ ಆಶಯಗಳನ್ನು ನಾವೆಲ್ಲರೂ ಎತ್ತಿ ಹಿಡಿಯಬೇಕು. ದೇಶದಲ್ಲಿ ಮನುವಾದಿಗಳಿಂದ ಕೋಮುವಾದಕ್ಕೆ ಮುಕ್ತಿ ನೀಡಬೇಕು. ನಾಗ್ಪುರ ದೀಕ್ಷಾ ಭೂಮಿಗೆ ಪ್ರತಿ ವರ್ಷ ಲಕ್ಷಾಂತರ ಅಂಬೇಡ್ಕರ್ ವಾದಿಗಳು ಭಾಗವಹಿಸುತ್ತಿರುವುದು ಶ್ಲ್ಯಾಘನೀಯ ಎಂದರು.

ಈ ಸಂದರ್ಭದಲ್ಲಿ ಹಿರಿಯ ದಲಿತ ಮುಖಂಡ ಶಂಭುಲಿಂಗಪ್ಪ, ಬಿ.ಮಹೇಶ್ವರಪ್ಪ, ಮಹಾಬಲೇಶ್, ಫಯಾಜ್ ಭಾಷಾ, ಎಸ್ಸಿ- ಎಸ್ಟಿ ಪತ್ರಿಕಾ ವರದಿಗಾರರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳಾದ ಸಿ.ಬಸವರಾಜ್, ಎಚ್.ಆರ್.ಬಸವರಾಜ್, ರಾಜಪ್ಪ, ಧನ್ಯಕುಮಾರ್,  ಮಂಜುನಾಥ್, ಮಾರುತಿ,  ಮಾದಿಹಳ್ಳಿ ಮಂಜುನಾಥ್, ಬಸವರಾಜ್, ಮರೇನಹಳ್ಳಿ ಬಾಬು, ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಗೌಸ್ ಪೀರ್, ಓಬಣ್ಣ ಮುಂತಾದವರು ಇದ್ದರು.

error: Content is protected !!