ಅಧ್ಯಾತ್ಮದಿಂದ ಆನಂದಮಯ ಜೀವನ ಸಾಧ್ಯ

ಅಧ್ಯಾತ್ಮದಿಂದ ಆನಂದಮಯ ಜೀವನ ಸಾಧ್ಯ

ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸತ್ಸಂಗದಲ್ಲಿ ಪ್ರತಿಭಾದೇವಿ ಅಭಿಮತ

ಮಲೇಬೆನ್ನೂರು, ಅ.19- ಅಧ್ಯಾತ್ಮದಿಂದ ಆನಂದ ಅಷ್ಟೇ ಅಲ್ಲ, ಶಾಂತಿ-ನೆಮ್ಮದಿಯಿಂದ ಬದುಕು ಸಾಗಿಸಲು ಸ್ಫೂರ್ತಿ ನೀಡುತ್ತದೆ ಎಂದು ಶಿವಮೊಗ್ಗದ   ಶ್ರೀ ನಾಗೇಂದ್ರ ಕುಮಾರ್‌ (ಅಪ್ಪಾಜಿ) ಅವರ ಮಾನಸ ಪುತ್ರಿ ಹಾಗೂ ಸಂತಾನ ಸರಸ್ವತಿ ಪ್ರತಿಭಾದೇವಿ ಅಭಿಪ್ರಾಯಪಟ್ಟರು.

ಪಟ್ಟಣದ ಹೊರ ವಲಯದಲ್ಲಿರುವ ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಹಬ್ಬದ ಪ್ರಯುಕ್ತ ಇಂದು ಹಮ್ಮಿಕೊಂಡಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸತ್ಸಂಗದಲ್ಲಿ ಭಾಗವಹಿಸುವುದರಿಂದಲೂ ಮನಸ್ಸು ಪರಿವರ್ತನೆ ಆಗುತ್ತದೆ. ಬರೀ ಪೂಜೆ ಮಾಡಿದರೆ ಫಲ ಸಿಗುವುದಿಲ್ಲ. ಭಕ್ತಿ, ಶ್ರದ್ಧೆಯಿಂದ ಧ್ಯಾನ, ಪ್ರಾರ್ಥನೆ, ಸೇವೆ ಮಾಡಿದಾಗ ಮಾತ್ರ ಫಲ ಸಿಗುತ್ತದೆ. ನವರಾತ್ರಿಯ ವೇಳೆ ಜಗನ್ಮಾತೆಯ ಆರಾಧನೆ ಹೆಚ್ಚು ಶ್ರೇಷ್ಠವಾಗಿರುತ್ತದೆ ಎಂದರು.

ಅಪ್ಪ, ಅಮ್ಮ, ಗುರುಗಳ ಬಗ್ಗೆ ಭಕ್ತಿ, ಪ್ರೀತಿಯನ್ನು ಸದಾ ಹೊಂದಿರಬೇಕು. ನಮ್ಮ ಪಾಲಿನ ಅಪ್ಪಾಜಿ ಅವರು ಪ್ರೀತಿ, ಕರುಣೆ ಹೊಂದಿರುವ ಜಗನ್ಮಾತೆಯಾಗಿದ್ದಾರೆ. ಅವರು ಲಲಿತ ಸಹಸ್ರನಾಮವನ್ನು ಭಾವಪೂರ್ಣವಾಗಿ ನಮಗೆಲ್ಲಾ ಹೇಳಿಕೊಡುವ ಮೂಲಕ ನಮ್ಮ ಮನಸ್ಸನ್ನು ಅಧ್ಯಾತ್ಮವಾಗಿ ಪರಿವರ್ತನೆ ಮಾಡಿದ್ದಾರೆಂದು ಪ್ರತಿಭಾದೇವಿ ತಿಳಿಸಿದರು. 

ದೇವಸ್ಥಾನ ಟ್ರಸ್ಟ್‌ ಕಮಿಟಿಯ ಬಿ. ಪಂಚಪ್ಪ, ಬಿ. ನಾಗೇಶ್‌, ಬಿ.ವಿ. ರುದ್ರೇಶ್‌, ಬಿ. ಉಮಾಶಂಕರ್‌, ಬಿ. ಶಂಭುಲಿಂಗಪ್ಪ, ಬಿ.ಎಂ. ಹರ್ಷ, ಬಿ.ಎನ್‌. ವೀರೇಶ್‌, ಬಿ.ಸಿ. ಸತೀಶ್‌, ಡಾ. ಬಿ. ಚಂದ್ರಶೇಖರ್‌, ಎಸ್‌.ಎನ್‌. ಶಂಭುಲಿಂಗಪ್ಪ, ಎನ್‌.ಕೆ. ಬಸವರಾಜ್‌, ತಾ.ಪಂ. ಮಾಜಿ ಅಧ್ಯಕ್ಷ ಟಿ.ಜೆ. ಮುರುಗೇಶ್‌, ಪಾಲಿಕೆ ಸದಸ್ಯೆ ಶ್ರೀಮತಿ ಸವಿತಾ ಗಣೇಶ್‌ ಹುಲ್ಲುಮನಿ, ದಾವಣಗೆರೆ ಅರ್ಬನ್‌ ಬ್ಯಾಂಕ್‌ ನಿವೃತ್ತ ಮ್ಯಾನೇಜರ್‌ ತಿರುಕಪ್ಪ, ಉಪನ್ಯಾಸಕ ಹೊನ್ನಾಳಿಯ ಹೆಚ್‌.ಆರ್‌. ಗಂಗಾಧರ್‌ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!