ದಾವಣಗೆರೆ, ಅ. 18- ಗಾಜಾ ಮೇಲೆ ಜಿಯೋನಿಸ್ಟ್ ಇಸ್ರೇಲ್ ದಿಗ್ಬಂಧನ ಮತ್ತು ಪ್ಯಾಲೆಸ್ತೇನ್ ಮೇಲಿನ ಯುದ್ಧಾಪರಾಧಗಳನ್ನು ಖಂಡಿಸಿ ಎಸ್‌ಯುಸಿಐ (ಕಮ್ಯುನಿಸ್ಟ್) ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿತು.
ಪಕ್ಷದ ರಾಜ್ಯ ಸಮಿತಿ ಹಿರಿಯ ಸೆಕ್ರೆಟ್ರಿಯೇಟ್ ಸದಸ್ಯ ಸುನೀತ್ ಕುಮಾರ್ ಮಾತನಾಡಿ, ಯುದ್ದ ನೆಪ ಮಾತ್ರವಾಗಿದ್ದರೂ ಅದರ ಹಿಂದಿರುವ ಕಾರಣ, ಮಾರುಕಟ್ಟೆಯ ಲಾಭ, ಪ್ಯಾಲೆಸ್ತೇನ್‌ನಲ್ಲಿರುವ ಯಥೇಚ್ಛವಾದ ನೈಸರ್ಗಿಕ ತೈಲ ಮತ್ತು ನೈಸರ್ಗಿಕ ಅನಿಲ ಸಂಪತ್ತು. ಸಾಮ್ರಾಜ್ಯ ಶಾಹಿಗಳು ಇದನ್ನು ಕಬಳಿಸಲು ಸತತವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ ಪ್ಯಾಲೆಸ್ತೇನಿಗಳು ಇದರ ವಿರುದ್ಧ ಧೀರೋದಾತ್ತವಾಗಿ, ನಿರಂತರವಾಗಿ ಹೋರಾಟಗಳ ಮೂಲಕ ಇಮ್ಮೆಟ್ಟಿಸುತ್ತಿದ್ದಾರೆಂದು ತಿಳಿಸಿದರು.
ಭಾರತ ಇಸ್ರೇಲ್‌ಗೆ ಬೆಂಬಲವಾಗಿ ನಿಂತಿ ರುವುದು, ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಹಾಗೂ ಸ್ವಾತಂತ್ರ್ಯಕ್ಕಾಗಿ ಜೀವ ತೆತ್ತ ಸಾವಿರಾರು ಹೋರಾಟಗಾರರಿಗೆ ಮಾಡಿರುವ ದ್ರೋಹ. ಈ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಹಿಂಪಡೆದು, ತಮ್ಮ ನಿಲುವನ್ನು ಬದಲಾಯಿಸಿ, ಪ್ಯಾಲೆಸ್ತೇನಿ ಜನತೆಯ ಪರವಾಗಿ ನಿಲ್ಲಬೇಕೆಂದು ಮನವಿ ಮಾಡಿದರು.
ರಾಜ್ಯ ಸಮಿತಿ ಸದಸ್ಯರಾದ ಬಿ.ಆರ್. ಅಪರ್ಣ ಮಾತನಾಡಿ, ಈಗಾಗಲೇ ತನ್ನಿಂದ ಮುತ್ತಿಗೆಗೆ ಒಳಗಾಗಿರುವ ಗಾಜಾ ಪ್ರದೇಶದ ಮೇಲೆ ಸಂಪೂರ್ಣ ದಿಗ್ಬಂಧನ ಹಾಕುವ ಜಿಯೋನಿಸ್ಟ್ ಇಸ್ರೇಲ್ ಸರ್ಕಾರದ ಘೋಷಣೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಜು ನಾಥ್ ಕೈದಾಳೆ ಮಾತನಾಡಿ, ಪ್ಯಾಲೆಸ್ತೇನ್ ಮೇಲಿನ ದಾಳಿಯನ್ನು ಈ ಕೂಡಲೇ ಇಸ್ರೇಲ್ ನಿಲ್ಲಿಸಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಟಿ. ಅಸ್ಗರ್ ಅಲಿ, ಮೊಹಮ್ಮದ್ ಅಲಿ, ಟಿ.ವಿ.ಎಸ್ ರಾಜು, ಮಂಜುನಾಥ್ ಕುಕ್ಕುವಾಡ, ಮಧು, ತಿಪ್ಪೇಸ್ವಾಮಿ, ಪರಶುರಾಮ್, ಭಾರತಿ, ಪೂಜಾ, ಮಂಜುನಾಥ ರೆಡ್ಡಿ, ರಾಜು, ಗುರು, ಹರಿಪ್ರಸಾದ್, ಮಹಾಂತೇಶ್, ಕಾವ್ಯ, ಕೌಶಿಕ್, ಶಶಿ, ಚಿರು, ಅನಿಲ್, ಮಮತಾ, ಸುಮನ್, ಸರಸ್ವತಿ, ಬಸವರಾಜು, ರವಿ ಮತ್ತಿತರರಿದ್ದರು.