ಜಗಳೂರು ಚಿತ್ರದುರ್ಗ ಜಿಲ್ಲೆಗೆ ಮರುಸೇರ್ಪಡೆಗೆ ಒತ್ತಾಯಿಸಿ ಪ್ರತಿಭಟನೆ

ಜಗಳೂರು ಚಿತ್ರದುರ್ಗ ಜಿಲ್ಲೆಗೆ ಮರುಸೇರ್ಪಡೆಗೆ ಒತ್ತಾಯಿಸಿ ಪ್ರತಿಭಟನೆ

ಜಗಳೂರು, ಅ.17- ಜಗಳೂರು ತಾಲ್ಲೂಕನ್ನು ಚಿತ್ರದುರ್ಗ ಜಿಲ್ಲೆಗೆ ಮರುಸೇರ್ಪಡೆ  ಮಾಡಬೇಕು ಎಂದು ಒತ್ತಾಯಿಸಿ,   ಜಗಳೂರು  ತಾಲ್ಲೂಕು ಮರುಸೇರ್ಪಡೆ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮತನಾಡಿದ ತಾಲ್ಲೂಕು ಅಧ್ಯಕ್ಷ ಬಿ. ತಿಮ್ಮಾರೆಡ್ಡಿ ಈ ಹಿಂದೆ ಚಿತ್ರದುರ್ಗ ಜಿಲ್ಲೆಯಲ್ಲಿದ್ದ ಜಗಳೂರು ತಾಲ್ಲೂಕನ್ನು ಹೊಸದಾಗಿ ರಚನೆಯಾದ ದಾವಣಗೆರೆ ಜಿಲ್ಲೆಗೆ (1997-98) ಸೇರ್ಪಡೆ ಮಾಡಿಕೊಳ್ಳುವಾಗ ಜನಾಭಿಪ್ರಾಯವನ್ನು ಪಡೆಯದೇ, ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಾಮಾಜಿಕ, ಭೌಗೋಳಿಕ, ಔದ್ಯೋಗಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸಂರಚನೆಗಳನ್ನು ಅಧ್ಯಯನ ಮಾಡದೇ ಹಾಗೂ ಅರ್ಥ ಮಾಡಿಕೊಳ್ಳದೇ ನಮ್ಮ ತಾಲ್ಲೂಕನ್ನು ಸೇರಿಸಿಕೊಳ್ಳಲಾಗಿದೆ. ಇದರಲ್ಲಿ ಯಾವ ಮಾನದಂಡವೂ ಬಳಕೆಯಾಗಿಲ್ಲ ಎಂದು ಆರೋಪಿಸಿದರು.

ತಾಲ್ಲೂಕಿನ ಜನತೆಯ ಅಭಿಪ್ರಾಯಗಳಿಗೂ ಮನ್ನಣೆ ಕೊಡದಂತೆ ಅಂದು ತುರ್ತಾಗಿ ಹೊಸ ದಾವಣಗೆರೆ ಜಿಲ್ಲೆಗೆ ಸೇರ್ಪಡೆಯಾದ ಜಗಳೂರು ತಾಲ್ಲೂಕು ಕಳೆದ ಇಪ್ಪತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ! ಸತತ ಬರಗಾಲ, ಬಡತನ, ಕುಡಿಯುವ ನೀರಿಗೂ ತತ್ವಾರ, ಹಳ್ಳಿ-ಹಳ್ಳಿಗಳಲ್ಲಿ ಹೆಪ್ಪುಗಟ್ಟಿರುವ ಫ್ಲೋರೈಡ್ ನೀರು. ಈ ನೀರನ್ನು ಕುಡಿದ ಜನತೆ ನಿರಂತರವಾಗಿ ಕಾಡುವ ಅಪೌಷ್ಟಿಕತೆ ಮತ್ತು ಅನಾ ರೋಗ್ಯದಿಂದ ತಾಲ್ಲೂಕು ತತ್ತರಿಸಿ ಹೋಗಿದೆ ಎಂದರು.

ಉಪಾಧ್ಯಕ್ಷ ಪುಟ್ಟಣ್ಣ ಮಾತನಾಡಿ ದಾವಣಗೆರೆ, ಹರಿಹರ, ಹೊನ್ನಾಳಿ, ಚನ್ನಗಿರಿ ತಾಲ್ಲೂಕುಗಳು ನೀರಾವರಿ ಪ್ರದೇಶಗಳಾಗಿದ್ದು, ಇಲ್ಲಿಯ ರೈತರು ಅಡಿಕೆ, ತೆಂಗು, ಭತ್ತದಂತಹ ವಾಣಿಜ್ಯ ಬೆಳೆಗಳ ವಾರಸುದಾರರು. ಹಾಗೆಯೇ ವ್ಯವಹಾರಸ್ಥರು ಕೂಡ. ಇಂತಹ ಶ್ರೀಮಂತಿಕೆಯ ಫಲವತ್ತಾದ ಜನರ ಜೊತೆಗೆ ಜಗಳೂರಿನವರಾದ ನಾವುಗಳು ಹೋಲಿಕೆಗೂ ನಿಲುಕುವುದಿಲ್ಲ. ಎಲ್ಲಾ ರೀತಿಯಿಂದಲೂ ದಾವಣಗೆರೆಯೊಂದಿಗೆ ನಮ್ಮದು ಅಜ-ಗಜಾಂತರ ವ್ಯತ್ಯಾಸ. ಹೀಗಾಗಿ ನಮ್ಮನ್ನು ದಾವಣಗೆರೆ ಜಿಲ್ಲೆಯಿಂದ ಕೈ ಬಿಟ್ಟು ಪುನಃ ಚಿತ್ರದುರ್ಗ ಜಿಲ್ಲೆಗೆ ಸೇರ್ಪಡೆ ಮಾಡಿ ಎಂದು ಮನವಿ ಮಾಡಿಕೊಳ್ಳಲು ನಮಗೆ ಹತ್ತಾರು ಕಾರಣಗಳಿವೆ ಎಂದರು.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಹಿರಿಯೂರು, ಮೊಳಕಾಲ್ಕೂರು, ಹೊಸದುರ್ಗ, ಹೊಳಲ್ಕೆರೆಯ ಜನಜೀವನಕ್ಕೂ, ಬದುಕು-ಬವಣೆಗಳಿಗೂ, ಸಮಸ್ಯೆ-ಸವಾಲುಗಳಿಗೂ ಜಗಳೂರು ಹೋಲಿಕೆ ಇದೆ. ನಮ್ಮ ಒಡಲ ಸಂಕಟ- ಅವರ ಒಡಲ ಸಂಕಟ ಎರಡೂ ಒಂದೇ! ಸಾಮಾಜಿಕ ಶೈಕ್ಷಣಿಕ, ಭೌಗೋಳಿಕ ಸಾಂಸ್ಕೃತಿಕ, ಚಹರೆಗಳು ಭಿನ್ನವಾಗಿಲ್ಲ. ದಾವಣಗೆರೆ ಜಿಲ್ಲೆಯೆಂಬ ಶ್ರೀಮಂತರ ಚೌಕಟ್ಟಿನಲ್ಲಿ ನಮ್ಮ ದುಃಖಕ್ಕೆ ಸಾಂತ್ವನ ಹೇಳುವವರು ಇಲ್ಲ ಎಂದರು.

ಈ ಸಂದರ್ಭದಲ್ಲಿ  ಗೌರವಾಧ್ಯಕ್ಷ  ಎನ್. ರಾಜಣ್ಣ, ಡಿ.ಆರ್.ಹನುಮಂತಪ್ಪ, ತಿಪ್ಪೇಸ್ವಾಮಿ, ದಾಸಪ್ಪ, ಶಂಭುಲಿಂಗಪ್ಪ, ಹಟ್ಟಿ ತಿಪ್ಪೇಸ್ವಾಮಿ, ಓಬಯ್ಯ, ಕಾಟಪ್ಪ, ಬಂಗಾರಪ್ಪ,   ಸಣ್ಣ ಓಬಯ್ಯ, ಪ್ರಕಾಶ ರೆಡ್ಡಿ,  ಸಣ್ಣಸೂರಯ್ಯ, ನಾಗಲಿಂಗಪ್ಪ, ನರಸಿಂಹ, ಡಿಎಸ್‌ಎಸ್ ತಾಲ್ಲೂಕು  ಸಂಚಾಲಕ ಸತೀಶ್ ಸೇರಿದಂತೆ ಮತ್ತಿತರರು ಹಾಜರಿದ್ದರು. 

error: Content is protected !!