ಕ್ರಮಕ್ಕೆ ರವೀಂದ್ರಗೌಡ ಪಾಟೀಲ ಒತ್ತಾಯ
ರಾಣೇಬೆನ್ನೂರು, ಅ.16- ಹಿಂದುಳಿದ ಎಸ್.ಸಿ., ಎಸ್.ಟಿ ಜನಾಂಗದವರಿಗೆ ಬದುಕು ಕಟ್ಟಿಕೊಳ್ಳಲೆಂದೇ 1888 ನೇ ಸಾಲಿನಲ್ಲಿ ಆಗಿನ ಮುಂಬೈ ಸರ್ಕಾರ ನೀಡಿದ್ದ ಚಾಕರಿ ಜಮೀನಿನ ಫಲವತ್ತಾದ ಮಣ್ಣನ್ನು ಹಣದ ಆಮಿಷ ತೋರಿಸಿ ಇಟ್ಟಿಗೆ ಭಟ್ಟಿಯವರು ಕಳೆದ 5-6 ವರ್ಷಗಳಿಂದ ಸಂಬಂಧಿಸಿದ ಇಲಾಖೆಗಳ ಯಾವುದೇ ಅನುಮತಿ ಇಲ್ಲದೇ ಅಕ್ರಮ ಮಣ್ಣು ಸಾಗಾಟ ಮಾಡುತ್ತಿದ್ದಾರೆಂದು ರೈತ ಮುಖಂಡ ತಾ.ಪಂ. ಮಾಜಿ ಅಧ್ಯಕ್ಷ ರವೀಂದ್ರಗೌಡ ಎಫ್. ಪಾಟೀಲ ದೂರಿದರು.
ನಗರದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ತಹಶೀಲ್ದಾರ್ ಹನುಮಂತಪ್ಪ ಶಿರಹಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಿದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಪಾಟೀಲರು, ತಾಲ್ಲೂಕಿನ ತುಂಗಭದ್ರಾ ಮತ್ತು ಕುಮದ್ವತಿ ನದಿ ಪಾತ್ರದಲ್ಲಿಯೂ ಕಳೆದ 5-6 ವರ್ಷಗಳಿಂದ ಎಗ್ಗಿಲ್ಲದೆ ಈ ಅಕ್ರಮ ಮಣ್ಣು ಮಾರಾಟ ನಡೆಯುತ್ತಿದೆ ಎಂದರು.
ರೈತರು ಹಣದಾಸೆಗಾಗಿ ತಮ್ಮ ಜಮೀನಿನ ಫಲತ್ತಾದ ಮಣ್ಣನ್ನು ಮಾರಿ ಆ ಭೂಮಿಯನ್ನು ಬರಡು ಭೂಮಿಯನ್ನಾಗಿ ಮಾಡಿಕೊಳ್ಳುತ್ತಿರುವುದರ ಜೊತೆಗೆ, ಮುಂದಿನ ದಿನ ಮಾನಗಳಲ್ಲಿ ಇದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಗಳು ಏಕೆ ಚಿಂತನೆ ಮಾಡುತ್ತಿಲ್ಲ? ಮುಂದಿನ ಅನಾಹುತಗಳನ್ನು ತಪ್ಪಿಸಲು ಈ ಬಗ್ಗೆ ತುರ್ತು ಕ್ರಮ ಜರುಗಿಸಿ, ಅಕ್ರಮ ಮಣ್ಣು ಮಾರಾಟ ತಡೆಹಿಡಿಯಬೇಕು. ಬಡ ರೈತರ ಜಮೀನಿನಲ್ಲಿ ಮಣ್ಣು ಮಾರಾಟವಾದರೆ ಅದಕ್ಕೆ ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳೆ ಹೊಣೆ ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಸಿದರು.
ಅಲ್ಲದೇ ತಾಲ್ಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ದಂಧೆಯ ವ್ಯವಹಾರದಲ್ಲಿ ಕೊಟ್ಟು, ತೆಗೆದುಕೊಳ್ಳುವ ರೂಢಿಯಲ್ಲಿರುವ ಈ ಮೂರು ಇಲಾಖೆಯವರು ಈ ಮಣ್ಣಿನ ವ್ಯವಹಾರದಲ್ಲೂ ಅದೇ ರೀತಿ ತಮ್ಮ ದಂಧೆಯನ್ನು
ಸಾಂಗವಾಗಿ ಮುಂದುವರೆಸಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಇದು ಖಂಡನೀಯ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಹನುಮಂತಪ್ಪ ಶಿರಹಟ್ಟಿ, ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರೊಂದಿಗೆ ಚರ್ಚಿಸಿ, ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ನೀಲಕಂಠಪ್ಪ ಕುಸಗೂರ ಮಾತನಾಡಿ, ಇಟ್ಟಿಗೆ ಭಟ್ಟಿಯವರಿಗೆ ಕೆರೆಯ ಮಣ್ಣನ್ನು ಎತ್ತಲು ಅವಕಾಶ ಕೊಟ್ಟರೆ, ಇತ್ತ ಕೆರೆ ಹೂಳೆ ತ್ತಿದಂತೆಯೂ ಆಗುತ್ತದೆ, ರೈತರ ಫಲವತ್ತಾದ ಭೂಮಿಯೂ ಉಳಿಯುತ್ತದೆ ಎಂದರು.
ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ. ಸುಮಲತಾ, ಶಹರ ಸಿ.ಪಿ.ಐ. ಡಾ. ಎಸ್.ಕೆ.ಶಂಕರ್, ಸಮಾಜ ಕಲ್ಯಾಣ ಇಲಾಖೆಯ ದ್ಯಾವಲಾ ನಾಯಕ, ನಗರಸಭೆ ಕಮೀಷನರ್ ನಿಂಗಪ್ಪ ಕುಮ್ಮಣ್ಣನವರ, ಬಿ.ಇ.ಓ ಎಂ.ಎಚ್. ಪಾಟೀಲ, ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಜರಿದ್ದರು.
ನಗರಸಭೆಯ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಶಶಿಧರ ಬಸೇನಾಯ್ಕ, ಪ್ರಕಾಶ ಪೂಜಾರ, ವಾಲ್ಮೀಕಿ ಸಮಾಜದ ಅಧ್ಯಕ್ಷ ಚಂದ್ರಣ್ಣ ಬೇಡರ, ಭೀಮಣ್ಣ ಯಡಚಿ, ಮಲ್ಲೇಶಪ್ಪ ಮೆಡ್ಲೇರಿ, ಹನುಮಂತಪ್ಪ ಕಬ್ಬಾರ, ನಾಗಪ್ಪ ಸಣ್ಮನಿ, ಪ್ರಕಾಶ ನಾಯಕ, ಸಣ್ಣತಮ್ಮಪ್ಪ ಬಾರ್ಕಿ, ಬಸವರಾಜ ತಳವಾರ, ರಮೇಶ ಗೊಂದ್ಯಾಳಿ ಮುಂತಾದವರು ಭಾಗವಹಿಸಿದ್ದರು.