ಸಮಾಜವೂ ಕೈ ಜೋಡಿಸಿದಾಗ ಬಾಲ್ಯ ವಿವಾಹ ತಡೆ ಸಾಧ್ಯ

ಸಮಾಜವೂ ಕೈ ಜೋಡಿಸಿದಾಗ ಬಾಲ್ಯ ವಿವಾಹ ತಡೆ ಸಾಧ್ಯ

ಬಾಲ್ಯ ವಿವಾಹ ನಿಷೇಧ ಕುರಿತ ಅರಿವು ಕಾರ್ಯಕ್ರಮದಲ್ಲಿ ನ್ಯಾ.ಪ್ರವೀಣ ಕುಮಾರ್ ಆರ್.ಎನ್.

ದಾವಣಗೆರೆ, ಅ.16- ಬಾಲ್ಯವೆಂಬುದು ಜೀವನದ ಹಲವು ಘಟ್ಟಗಳಲ್ಲಿ ಅತ್ಯಂತ ಅಮೂಲ್ಯವಾದ ಘಟ್ಟ. ಬಾಲ್ಯದಲ್ಲಿ ಆಟ, ಪಾಠ ಮತ್ತು ಮನೋರಂಜನೆ ಜೊತೆ ಜೊತೆಯಾಗಿ ನಡೆಯಬೇಕು. ಮಕ್ಕಳು ಬಾಲ್ಯವನ್ನು ಸಂತೋಷದಿಂದ ಅನುಭವಿಸುವಂತಾಗಲು ಹಲವಾರು ಕಾರ್ಯಕ್ರಮಗಳನ್ನು ಹಾಗೂ ಕಾನೂನುಗಳನ್ನು ಜಾರಿಗೆ ತರಲಾಗಿದೆ ಎಂದು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಎನ್. ಪ್ರವೀಣ್‌ಕುಮಾರ್‌ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಹಯೋಗದೊಂದಿಗೆ  ಸೋಮವಾರ ನಗರದ ಎ.ವಿ.ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ನಡೆದ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಹಾಗೂ ಬಾಲ್ಯ ವಿವಾಹ ನಿಷೇಧ ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯ ವಿವಾಹ ತಡೆಗಟ್ಟಲು ಸರ್ಕಾರ ಹಲವು ರೀತಿಯ ಕಾಯ್ದೆಗಳನ್ನು ಜಾರಿಗೆ ತಂದಿದ್ದು, ಇಲಾಖೆಗಳ ಜೊತೆಯಲ್ಲಿ ಸಮಾಜವು ಕೂಡ ಕೈ ಜೋಡಿಸಿದಾಗ ಬಾಲ್ಯ ವಿವಾಹ ತಡೆಗಟ್ಟಲು ಸಾಧ್ಯ ಎಂದು ಹೇಳಿದರು.

ಬಾಲ್ಯವಿವಾಹ ನಿಷೇಧ ಕಾಯ್ದೆ, ಬಾಲ ಕಾರ್ಮಿಕ ನಿಷೇಧ ಕಾಯ್ದೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕಾಯ್ದೆ ಮುಂತಾದ ಕಾಯ್ದೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಸಂಬಂಧಪಟ್ಟ ಅಧಿಕಾರಿ ಗಳು ಕಾರ್ಯ ನಿರ್ವಹಿಸಬೇಕು. ಆದರೂ ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ಈಗಲೂ ಜೀವಂತವಾಗಿವೆ. ಇವುಗಳನ್ನು ಹೋಗಲಾಡಿಸಲು ಸಮಾಜವು ಸಹ ಕೈಜೋಡಿಸಬೇಕಾಗಿದ್ದು, ವಿದ್ಯಾರ್ಥಿನಿಯರು ಇಂತಹ ಘಟನೆಗಳು ತಮ್ಮ ಗಮನಕ್ಕೆ ಬಂದಲ್ಲಿ ಮಾಹಿತಿಯನ್ನು ಪೊಲೀಸರಿಗೆ ಅಥವಾ ಶಾಲಾ ಮುಖ್ಯೋಪಾಧ್ಯಾಯರಿಗೆ ನೀಡಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್ ಮಾತನಾಡಿ, ಹದಿಹರೆಯದ ವಯಸ್ಸಿನಲ್ಲಿ ದೈಹಿಕ ಆಕರ್ಷಣೆಗೆ ಒಳಗಾಗಿ ಗಂಡು ಮತ್ತು ಹೆಣ್ಣು ಮಕ್ಕಳು ಪ್ರೀತಿ ಪ್ರೇಮದ ಬಲೆಯಲ್ಲಿ ಬೀಳುವುದು ಸಹಜ. ಆದರೆ ಇಂತಹ ಬಾಹ್ಯ ರೂಪದ ಆಕರ್ಷಣೆ ಮೀರಿ ತಾವು ಸಾಧಿಸಬೇಕಾಗಿರುವ ಗುರಿಯತ್ತ ಲಕ್ಷ್ಯವಿಟ್ಟು ಮಕ್ಕಳು ಹೆಜ್ಜೆ ಹಾಕಬೇಕು ಎಂದರು.

ಬಾಲ್ಯ ವಿವಾಹಗಳಾದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆಯನ್ವಯ ನಿಯಮಾನುಸಾರ ಎಲ್ಲರ ವಿರುದ್ಧ ದೂರು ದಾಖಲಿಸಲಾಗುವುದು ಹಾಗೂ ಬಾಲ್ಯ ವಿವಾಹ ಮಾಡಿದವರಿಗೆ 10 ಸಾವಿರ ರೂ.ದಂಡ ಹಾಗೂ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗುವುದು ಎಂದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ
ಮುಖ್ಯ ನ್ಯಾಯಿಕ ದಂಡಾಧಿಕಾರಿ ಎಸ್.ಜಿ.ಸಲಗರೆ ಬಾಲ್ಯ ವಿವಾಹ ನಿಷೇಧ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಕಮಲ ಸೊಪ್ಪಿನ್ ಅವರು ಅಧ್ಯಕ್ಷತೆ ವಹಿಸಿದ್ದರು. 

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಮಹಾವೀರ ಮ ಕರೆಣ್ಣವರ, ಹಿರಿಯ ಕಾನೂನು ಅಧಿಕಾರಿ ಕೆ.ಜಿ.ಕಲ್ಪನಾ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರಾಮಾನಾಯ್ಕ್ ಉಪಸ್ಥಿತರಿದ್ದರು.

error: Content is protected !!