ರೈತರಿಗೆ ಅನುಕೂಲವಾಗುವ ಸಮಯದಲ್ಲಿ 5 ಗಂಟೆ ವಿದ್ಯುತ್ ಸೌಲಭ್ಯ

ರೈತರಿಗೆ ಅನುಕೂಲವಾಗುವ ಸಮಯದಲ್ಲಿ 5 ಗಂಟೆ ವಿದ್ಯುತ್ ಸೌಲಭ್ಯ

ಹೊನ್ನಾಳಿ, ಅ. 15 – ರೈತರಿಗೆ ಅನಾನುಕೂಲವುಂಟಾಗ ಬಾರದೆಂದು ಬರಗಾಲದ ಛಾಯೆಯಲ್ಲೂ 5 ಗಂಟೆ ಸಮರ್ಪಕ ವಿದ್ಯುತ್ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ ಎಂದು ಶಾಸಕ ಡಿ.ಜಿ. ಶಾಂತನಗೌಡ ತಿಳಿಸಿದರು.
ಗೊಲ್ಲರಹಳ್ಳಿಯ ನಿವಾಸದಲ್ಲಿ ಬೆಸ್ಕಾಂ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಮಳೆಯ ಅಭಾವದಿಂದ ಎಲ್ಲಾ ಜಲಾಶಯಗಳಲ್ಲೂ 25 ಕ್ಕಿಂತ ಹೆಚ್ಚಿಗೆ ನೀರಿಲ್ಲ. ಕಳೆದ 2 ತಿಂಗಳಿಂದ ಮೋಡ ಕವಿದ ವಾತಾವರಣದಿಂದ ಸೋಲಾರ್ ಗಳಿಂದಲೂ ವಿದ್ಯುತ್ ಸಂಗ್ರಹವಾಗುತ್ತಿಲ್ಲ.
ವಿಂಡ್ ಪವರ್ ಸ್ಟೇಷನ್‍ಗಳಲ್ಲೂ ಗಾಳಿಯ ಸಮಸ್ಯೆಯಿಂದ ವಿದ್ಯುತ್ ಉತ್ಪಾದನೆಯಾಗದಿರುವುದು ಸರ್ಕಾರವನ್ನು ಆತಂಕಕ್ಕೆ ದೂಡಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸರ್ಕಾರವು ರೈತರ ಹಿತ ಕಾಯಲು ಮುಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿಟ್ಟ ನಿರ್ಧಾರ ತೆಗೆದುಕೊಂಡು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ವಿದ್ಯುತ್ ಪೂರೈಸುವಂತೆ ಆಯಾ ಸಹಾಯಕ ಕಾರ್ಯಪಾಲಕ ಅಭಿಯಂತರರು ನಿರ್ಧಾರ ತೆಗೆದುಕೊಳ್ಳುವಂತೆ ಆದೇಶ ಹೊರಡಿಸಿದ್ದಾರೆ ಎಂದು ವಿವರಿಸಿದರು.
ಭಾನುವಾರ ಮಧ್ಯರಾತ್ರಿ 12 ಗಂಟೆಯಿಂದಲೇ ರೈತ ಸಮು ದಾಯಕ್ಕೆ 5 ಗಂಟೆ ವಿದ್ಯುತ್ ಸಿಗಲಿದ್ದು, ರೈತರಿಗೆ ಅನುಕೂಲ ವಾಗುವ ಸಮಯವನ್ನು ತಿಳಿದುಕೊಂಡು ವಿದ್ಯುತ್ ಒದಗಿಸಬೇ ಕೆಂದು ಹೊನ್ನಾಳಿ-ನ್ಯಾಮ ತಿಯ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರದ ಈ ಆದೇಶವನ್ನು ಅವಳಿ ತಾಲ್ಲೂಕಿನ ಎಲ್ಲಾ ರೈತರಿಗೂ ಸರಿಯಾದ ಮಾಹಿತಿ ನೀಡಬೇಕು. ವಿದ್ಯುತ್‍ಗೆ ಸಂಬಂಧಿಸಿದ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಲೈನ್ ಮೆನ್‍ಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಿದರು.
ನವೆಂಬರ್ ತಿಂಗಳವರೆಗೆ ಈ ಆದೇಶ ಜಾರಿಗೆ ಬರಲಿದ್ದು, ಸೋಲಾರ್, ವಿಂಡ್ ಪವರ್‍ಗಳು ಸೇರಿದಂತೆ ವಿವಿಧ ಮೂಲಗಳಿಂದ ವಿದ್ಯುತ್ ಉತ್ಪಾದನೆಯಾಗುವ ಸಂಭವ ಹೆಚ್ಚಿದ್ದು ಆಗ ಮತ್ತೆ ಹೆಚ್ಚಿಗೆ ಅವಧಿಗೆ ವಿದ್ಯುತ್ ಸಿಗಲಿದೆ ಎಂದು ಆಶಾ ಭಾವನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ಶಾಖೆಗಳ ಎಇಇಗಳಾದ ಜಯಪ್ಪ ಮತ್ತು ಶ್ರೀನಿವಾಸ್ ಮಾತನಾಡಿ, ರೈತರು ಸತತವಾಗಿ 5 ಗಂಟೆ ವಿದ್ಯುತ್ ನೀಡಿದರೆ ಮೋಟಾರ್‍ಗಳು ಸುಡಲಿವೆ. ನಮಗೆ 2 ಶಿಫ್ಟಲ್ಲಿ ವಿದ್ಯುತ್ ನೀಡಿ ಎಂದು ಮನವಿ ಮಾಡುತ್ತಿದ್ದಾರೆ.
ಹಾಗಾಗಿ ಯಾವ ಯಾವ ಭಾಗದ ರೈತರಿಗೆ ಎಷ್ಟು ಗಂಟೆಯ ವಿದ್ಯುತ್ ಅವಶ್ಯಕತೆಯಿದೆ ಎಂಬುದನ್ನು ತಿಳಿದುಕೊಂಡು ರೈತರಿಗೆ ಅನುಕೂಲವಾಗುವ ಹಾಗೆಯೇ ವಿದ್ಯುತ್ ಸೌಲಭ್ಯವನ್ನು ನೀಡಲು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಂತ್ರಿಕ ಶಾಖೆಯ ಎಂಜಿನಿಯರ್ ಸತ್ಯನಾರಾಯಣ್, ಕೆಪಿಟಿಸಿಎಲ್ ನೋಡಲ್ ಅಧಿಕಾರಿ ನೂರ್ ಜಹಾನ್, ವಸಂತ್, ಶ್ವೇತ, ಅಶ್ವಿನಿ, ಅವಿನಾಶ್, ಶಾಖಾಧಿಕಾರಿ ಕಾಂತರಾಜ್, ರಾಜು, ರವಿಪ್ರಕಾಶ್, ಹುತ್ತೇಶ್ ನಾಯ್ಕ್, ನ್ಯಾಮತಿ ತಾಲ್ಲೂಕಿನ ಸಹಾಯಕ ಎಇ ರಮೇಶಾಚಾರ್, ಯೋಗೀಶ್, ವೆಂಕಟೇಶ್, ಅಯಾಜ್ ಖಾನ್, ಉಮಾಮಹೇಶ್ವರಪ್ಪ ಮತ್ತು ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.

error: Content is protected !!