ಬೃಹತ್ ಮೆರವಣಿಗೆಯೊಂದಿಗೆ ರಾಣೇಬೆನ್ನೂರು ಕಾ ರಾಜಾ ವಿಸರ್ಜನೆ

ಬೃಹತ್ ಮೆರವಣಿಗೆಯೊಂದಿಗೆ ರಾಣೇಬೆನ್ನೂರು ಕಾ ರಾಜಾ ವಿಸರ್ಜನೆ

ರಾಣೇಬೆನ್ನೂರು, ಅ.15- ನಗರಸಭೆ ಕ್ರೀಡಾಂಗಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಂದೇಮಾತರಂ ಸ್ವಯಂಸೇವಾ ಸಂಸ್ಥೆಯ ರಾಣೇಬೆನ್ನೂರು ಕಾ ರಾಜಾ ಗಣಪತಿಯ ವಿಸರ್ಜನೆ ಬೃಹತ್ ಮೆರವಣಿಗೆಯೊಂದಿಗೆ ಇಂದು ವಿಸರ್ಜನೆ ಮಾಡಲಾಯಿತು.

ಮಕ್ಕಳಿಗೆ, ಯುವತಿಯರಿಗೆ ಆಕರ್ಷಕ ಸೌಂಡ್ ಬೆಳಗಾವಿಯ ಎರಡು, ಯುವಕರಿಗೆ ಅತ್ಯಾದುನಿಕ ಸೌಂಡ್‌ನ ಮಹಾರಾಷ್ಟ್ರದ ಡಿಸ್ಕ್ ಜಾಕಿ (ಡಿಜೆ), ಮೂಡಲಗಿಯ ವಿಶೇಷ ಆಕರ್ಷಣೆಯ ಶಶಿ ಲೈಟಿಂಗ್ಸ್ ಮೆರವಣಿಗೆಗೆ ಕಳೆಕಟ್ಟಿದ್ದವು. ಚುಟು ಚುಟು ಅಂತೈತೆ ಹಾಡಿಗೆ ಯುವ ಮನಗಳು ಕುಣಿದು ಕುಪ್ಪಳಿಸುತ್ತಿದ್ದವು.

ಜಾನಪದ ಕಲಾತಂಡಗಳಾದ ಸಮ್ಮಾಳ, ಡೊಳ್ಳು, ಕೋಲಾಟ, ದೊಡ್ಡ ಹಲಗೆ, ಚಂಡಿ ಮದ್ದಲೆ, ಅಣುಕು ಗೊಂಬೆಗಳು ಜೊತೆಗೆ ಕೇರಳದ ಕಲಾತಂಡಗಳು ಮೆರವಣಿಗೆಗೆ  ಮೆರಗು ನೀಡಿದ್ದವು.

ಮಾಜಿ ಸಚಿವ ಸಿ.ಟಿ. ರವಿ ಅನುಪಸ್ಥಿತಿಯಿಂದಾಗಿ ಮಧ್ಯಾಹ್ನ 1 ಗಂಟೆಗೆ  ಸಂಘಟನೆಯ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ಚಾಲನೆ ನೀಡಿದ ಮೆರವಣಿಗೆಯು ನಗರಸಭೆ ಕ್ರೀಡಾಂಗಣದಿಂದ ಕುರಬಗೇರಿ ಕ್ರಾಸ್‌ನಿಂದ ಶ್ರೀ ಸಿದ್ದೇಶ್ವರ ಗುಡಿ ಎದುರು ಹಾಯ್ದು ಗುತ್ತಲ ಕ್ರಾಸ್‌ನಿಂದ  ಎಂ.ಜಿ. ರಸ್ತೆ ಮೂಲಕ ದೊಡ್ಡಪೇಟೆ,  ರಂಗನಾಥ ನಗರ, ಸಂಗಮ ಸರ್ಕಲ್, ಬಸ್ ಸ್ಟಾಂಡ್ ಬಳಿ ಸಾಗಿ ಹಳೆ ಪೂನಾ- ಬೆಂಗಳೂರು ರಸ್ತೆ ಮೂಲಕ ಹರಿಹರಕ್ಕೆ ತೆರಳಿ ತುಂಗಭದ್ರಾ  ನದಿಯಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ನಡೆಯಿತು.

ಮೆರವಣಿಗೆ ಹಾಗೂ ವಿಸರ್ಜನೆಗೆ ಯಾವುದೇ ತೊಂದರೆ ಆಗದಂತೆ, ಇನ್ನಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಪಾರ ಸಂಖ್ಯೆಯಲ್ಲಿದ್ದ ಪೊಲೀಸರ ಹದ್ದಿನಕಣ್ಣುಗಳು ಸೂಕ್ತ ರಕ್ಷಣೆ ನೀಡಿದ್ದವು. ಮೆರವಣಿಗೆ ಬರುವ ರಸ್ತೆಗಳಲ್ಲಿನ ಅಂಗಡಿಗಳು ತಮ್ಮ ವ್ಯವಹಾರ ಬಂದ್ ಮಾಡಿದ್ದರು.

error: Content is protected !!