ಹುಕ್ಕಾ, ತಂಬಾಕು ಉತ್ಪನ್ನ ನಿಷೇಧಕ್ಕೆ ಎಬಿವಿಪಿ ಮನವಿ

ಹುಕ್ಕಾ, ತಂಬಾಕು ಉತ್ಪನ್ನ ನಿಷೇಧಕ್ಕೆ ಎಬಿವಿಪಿ ಮನವಿ

ದಾವಣಗೆರೆ, ಅ.15- ಹುಕ್ಕಾ ಹಾಗೂ ತಂಬಾಕು ಉತ್ಪನ್ನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಿ, ನಿಷೇಧ ಆಜ್ಞೆಯನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದಾವಣಗೆರೆ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಯುವಜನಾಂಗಕ್ಕೆ ಹುಕ್ಕಾ, ಧೂಮಪಾನದ ಅಪಾಯಗಳು ಮತ್ತು ಮುಂಬರುವ ನಿಷೇಧದ ಬಗ್ಗೆ ಅರಿವು ಮೂಡಿಸಲು ಸಮಗ್ರ ಜಾಗೃತಿ ಅಭಿಯಾನ ಪ್ರಾರಂಭಿಸಬೇಕು. ನಿಯಮಿತವಾಗಿ ತಪಾಸಣೆ ಮಾಡಿ, ಕಾನೂನು ಉಲ್ಲಂಘಿಸಿದವರಿಗೆ ದಂಡ ಸೇರಿದಂತೆ ನಿಷೇಧದ ಕಟ್ಟುನಿಟ್ಟಾದ ಅನುಸರಣೆಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕಾಲೇಜುಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಹುಕ್ಕಾ ಧೂಮಪಾನ ತ್ಯಜಿಸಲು ಸಹಕಾರಿಯಾಗುವಂತೆ ನುರಿತ ತಜ್ಞರಿಂದ ಸಮಾಲೋಚನೆ ಕಾರ್ಯಕ್ರಮ ರೂಪಿಸಬೇಕು. ಸಾರ್ವಜನಿಕರ ಆರೋಗ್ಯದ ಮೇಲೆ ಅದರ ಪರಿಣಾಮವನ್ನು ಮೇಲ್ವಿಚಾರಣೆ ಮಾಡಲು ವ್ಯವಸ್ಥೆ ಮಾಡಿಕೊಡಬೇಕು. ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ರೂಪಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ವಿಭಾಗದ ಸಂಘಟನಾ ಕಾರ್ಯದರ್ಶಿ ಮಂಜುನಾಥ್‌ ಕೊಳ್ಳೇರ, ಜೆ. ರತನ್‌ದೀಪ, ಮೋಹಿತ್, ಪ್ರಮೋದ್, ರಾಘವೇಂದ್ರ, ಶಶಿಕುಮಾರ್, ದೀಪಕ್, ಸಚಿನ್, ತನುಷಾ ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!