ಅಸ್ವಚ್ಛತೆ ಕಂಡು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲವಾದ ಶಾಸಕ ಬಸವಂತಪ್ಪ

ಅಸ್ವಚ್ಛತೆ ಕಂಡು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲವಾದ ಶಾಸಕ ಬಸವಂತಪ್ಪ

ದಾವಣಗೆರೆ, ಅ. 15 – ಗ್ರಾಮದ ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ, ಚರಂಡಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್, ಚರಂಡಿಯ ನೀರು ಪೈಪ್ ಒಳಗೆ ಸೇರುವಂತಿರುವ ನಲ್ಲಿಗಳು ಹಾಗೂ ಸ್ವಚ್ಛತೆ ಇಲ್ಲದ ಶುದ್ಧ ಕುಡಿಯುವ ನೀರಿನ ಘಟಕ ಕಂಡು ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಮತ್ತಿ ಗ್ರಾಮದಲ್ಲಿ ವಾಂತಿ, ಭೇದಿಯಿಂದ ಮೃತಪಟ್ಟಿದ್ದ ಸೋಮಶೇಖರಪ್ಪ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಬಳಿಕ ಬಸವಂತಪ್ಪ ಗ್ರಾಮದಲ್ಲಿ ಸುತ್ತಾಡಿದಾಗ ಚರಂಡಿ ಮೇಲೆಯೇ ಸ್ನಾನದ ಮನೆ, ಶೌಚಾಲಯಗಳು, ರಸ್ತೆ ಮೇಲೆ ಹರಿಯುವ ಕೊಳಚೆ ನೀರು, ಚರಂಡಿಗಳಲ್ಲಿ ನಿಂತಿರುವ ಕೊಳಚೆ ನೀರು, ರಸ್ತೆಯಲ್ಲೇ ತಿಪ್ಪೆಗಳನ್ನು ಕಂಡು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ ಸರಿಯಾದ ನಿರ್ವಹಣೆ ಇಲ್ಲ, ಸ್ವಚ್ಛತೆ ಇಲ್ಲ, ನೀರು ಶುದ್ಧೀಕರಿಸದೆ ವಿತರಿಸುವುದರಿಂದ ಗ್ರಾಮಸ್ಥರು ನಲ್ಲಿ ನೀರನ್ನೇ ಕುಡಿಯುತ್ತಿದ್ದಾರೆ. ಶಾಸಕರು ಭೇಟಿ ನೀಡುತ್ತಾರೆ ಎಂಬ ಕಾರಣಕ್ಕೆ ತರಾತುರಿಯಲ್ಲಿ ಘಟಕ ಸ್ವಚ್ಛಗೊಳಿಸಲಾಗಿದೆ ಎಂದು ಸ್ಥಳದಲ್ಲೇ ಅಧಿಕಾರಿಗಳನ್ನು ಬೆಂಡೆತ್ತಿದ್ದರು.
ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮದಲ್ಲಿ ಎಲ್ಲಾ ಮನೆಗಳಿಗೆ ನಲ್ಲಿ ಅಳವಡಿಸಲಾಗಿದೆ. ಆದರೆ ಕೆಲವೆಡೆ ಪೈಪ್‌ಗಳು ಒಡೆದಿವೆ. ಚರಂಡಿ ನೀರು ಸೇರಿದ ಕಾರಣ ನೀರು ಕಲುಷಿತಗೊಂಡಿದೆ. ಈ ನೀರನ್ನು ಕುಡಿದು ಗ್ರಾಮದ ಕೆಲವರು ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ. ಇದಕ್ಕೆ ಕಾರಣ ಗ್ರಾಪಂ ಅಧಿಕಾರಿಗಳೇ ಕಾರಣ. ಈ ಬಗ್ಗೆ ಹಲವಾರು ಬಾರಿ ಗ್ರಾಪಂ ಅಧಿಕಾರಿಗಳು, ಸದಸ್ಯರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಶಾಸಕರಿಗೆ ದೂರಿದರು.
ನಂತರ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ವೇಳೆ ಚರಂಡಿಯಲ್ಲಿ ಹಾಕಿರುವ ಕುಡಿಯುವ ನೀರಿನ ಪೈಪ್‌ಲೈನ್ ಎತ್ತರ ಮಾಡಬೇಕು. ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ಶುದ್ಧೀಕರಿಸಿ ನೀರು ಪೂರೈಸಬೇಕು. ಚರಂಡಿಗಳನ್ನು ಸ್ವಚ್ಛತೆ ಮಾಡ ಬೇಕು. ಎಲ್ಲೆಂದರಲ್ಲಿ ಬಿದ್ದಿರುವ ಕಸ ತೆರವು ಗೊಳಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಶಾಸಕರು, ಮುಂದಿನ ದಿನಗಳಲ್ಲಿ ವಾಂತಿಭೇದಿ ಪ್ರಕರಣಗಳು ಮರುಕಳಿಸಿದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರಗಳಲ್ಲಿ ಸ್ಥಳೀಯ ಸಂಸ್ಥೆಗಳು ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಂಡು ನಗರ ಸ್ವಚ್ಛತೆ ಮಾಡಿಸುವಂತೆ ಗ್ರಾಮ ಪಂಚಾಯಿತಿಗಳಲ್ಲಿ ಪೌರ ಕಾರ್ಮಿಕರನ್ನು ನೇಮಿಸಿಕೊಂಡು ಗ್ರಾಮಗಳನ್ನು ಪ್ರತಿನಿತ್ಯ ಸ್ವಚ್ಛತೆ ಮಾಡಿದರೆ ಗ್ರಾಮದ ಜನರು ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗ ಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ತಾಪಂ ಇಒ ರಾಮಬೋವಿ, ಟಿಎಚ್‌ಒ ದೇವರಾಜ್ ಪಾಟೆಗ, ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ರವೀಂದ್ರ ನಾಯ್ಕ್, ಗ್ರಾಪಂ ಪಿಡಿಒ ವನಿತಾಬಾಯಿ, ಮತ್ತಿ ಗ್ರಾಪಂ ಅಧ್ಯಕ್ಷ ಸತೀಶ್, ಉಪಾಧ್ಯಕ್ಷ ಕಮಲಮ್ಮ, ಸದಸ್ಯ ಮಂಜುನಾಥ್, ಮುಖಂಡರಾದ ಶಿವಣ್ಣ, ಮುನೀರ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

error: Content is protected !!