ಜನಪದ ಕಲೆ ನಮ್ಮ ದೇಶದ ಹೆಮ್ಮೆ

ಜನಪದ ಕಲೆ ನಮ್ಮ ದೇಶದ ಹೆಮ್ಮೆ

ಬೆಳ್ಳೂಡಿ ಜನಪದ ಉತ್ಸವದಲ್ಲಿ ಶಾಸಕ ಬಿ.ಪಿ.ಹರೀಶ್ ಸಂತಸ

ಮಲೇಬೆನ್ನೂರು, ಅ. 14- ನಮ್ಮ ದೇಶದ ಸಂಸ್ಕೃತಿ, ಪರಂಪರೆಯನ್ನು ತೋರಿಸುವ ಜಾನಪದ ಕಲೆಯನ್ನು ಉಳಿಸಿ, ಬೆಳೆಸುವ ಮೂಲಕ ಮುಂದಿನ ಪೀಳಿಗೆಗೂ ಪರಿಚಯಿಸಬೇಕೆಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ಬೆಳ್ಳೂಡಿ ಗ್ರಾಮದಲ್ಲಿ ದಕ್ಷಿಣ ಮಧ್ಯಕ್ಷೇತ್ರ ಸಾಂಸ್ಕೃತಿಕ ಕೇಂದ್ರ (ನಾಗಪುರ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ದಾವಣಗೆರೆ), ಬೆಳ್ಳೂಡಿ ಗ್ರಾ.ಪಂ. ಹಾಗೂ ಜೈ ಹನುಮಾನ್ ಸಾಂಸ್ಕೃತಿಕ ಯುವಕ ಸಂಘ (ಬೆಳ್ಳೂಡಿ) ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಾನಪದ ಉತ್ಸವವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಹೊಂದಿರುವ ಜಾನಪದ ಕಲೆಯಿಂದಾಗಿ ಭಾರತ ಜಗತ್ತಿನ ಗಮನ ಸೆಳೆದಿದೆ. ಅಂತಹ ಜಾನಪದ ಕಲೆಯನ್ನು ಹಳ್ಳಿಗಳಿಂದಲೇ ಗಟ್ಟಿಗೊಳಿಸುವ ಕೆಲಸ ಮಾಡಬೇಕು. ಟಿವಿ, ಮೊಬೈಲ್‌ನಲ್ಲಿ ಮುಳುಗಿರುವ ನಾವೆಲ್ಲರೂ ಅದರಿಂದ ಹೊರ-ಬಂದು ಇಂತಹ ಉತ್ಸವಗಳನ್ನು ನೋಡುವ ಮೂಲಕ ಹೊರ ರಾಜ್ಯಗಳ ಕಲೆ, ಸಾಹಿತ್ಯ, ಸಂಸ್ಕೃತಿಯ ಪರಿಚಯ ಮಾಡಿಕೊಳ್ಳುಬೇಕು. ಅದಕ್ಕಾಗಿ ಈ ದಿನ ಬೆಳ್ಳೂಡಿಯಲ್ಲಿ ನಡೆದ ಈ ಉತ್ಸವವನ್ನು ಭಾನುವಾರ ಸಂಜೆ ಹನಗವಾಡಿಯಲ್ಲೂ ಹಮ್ಮಿಕೊಂಡಿದ್ದಾರೆ. ಮುಂದಿನ ವರ್ಷ ಹರಿಹರ ಕ್ಷೇತ್ರದ ಗಡಿಭಾಗಗಳಲ್ಲಿ ಈ ಉತ್ಸವ ಮಾಡೋಣ ಎಂದು ಹರೀಶ್ ಹೇಳಿದರು.
ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಗ್ರಾಮೀಣ ಸಂಸ್ಕೃತಿ ಇನ್ನೂ ಉಳಿದ್ದರೆ ಅದು ಜಾನಪದ ಕಲೆಯಿಂದಾಗಿ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಬೆಳ್ಳೂಡಿಯ ಡೊಳ್ಳಿನ ಕಲಾವಿದರು ಹೊರ ರಾಜ್ಯಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುವ ಮೂಲಕ ಕರ್ನಾಟಕಕ್ಕೆ ಕೀರ್ತಿ ತರುವ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉತ್ಸವದ ಅಧ್ಯಕ್ಷತೆ ವಹಿಸಿದ್ದ ಬೆಳ್ಳೂಡಿ ಗ್ರಾ.ಪ. ಅಧ್ಯಕ್ಷ ಬಿ. ಉಮೇಶ್, ದಕ್ಷಿಣ ಸಾಂಸ್ಕೃತಿಕ ಕೇಂದ್ರದ ಅಧಿಕಾರಿ ಗೋಪಾಲ್, ಗ್ರಾ.ಪಂ. ಮಾಜಿ ಸದಸ್ಯ ಎಂ.ಆರ್. ಮರುಳಸಿದ್ಧಯ್ಯ ಮಾತನಾಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಂ. ನರೇಂದ್ರ, ಪ್ರೌಢಶಾಲೆ ಅಧ್ಯಕ್ಷ ಜಿ. ಹನುಮಂತಗೌಡ್ರು, ಗ್ರಾ.ಪಂ.ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ, ಸದಸ್ಯರಾದ ಶ್ರೀಮತಿ ಗೀತಮ್ಮ, ವೀರೇಶ್, ಶಿವಪ್ಪ, ಸಿದ್ದೇಶಪ್ಪ, ಮಂಜಮ್ಮ, ಪಿಡಿಓ ಶಿವಪ್ಪ ಬಿರಾದಾರ್, ರಾಜನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ನಾಗೇನಹಳ್ಳಿ ಮಹಾಂತೇಶ್, ಗ್ರಾಮದ ರೇವಣಸಿದ್ಧಪ್ಪ, ಕೆಂಚಪ್ಪ, ಸುದೀಪ್ ಗೌಡ್ರು, ಸಂತೋಷ್, ಭಾನುವಳ್ಳಿ ಮಹೇಂದ್ರ, ಕಾರ್ಯಕ್ರಮದ ಮೇಲ್ವಿಚಾರಕರಾದ ಮಾಗಾನಹಳ್ಳಿ ಮಂಜುನಾಥ್, ಪುರಂದರ್ ಲೋಕಿಕೆರೆ, ಜೈ ಹನುಮಾನ್ ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಬಿ.ಎಂ. ರೇವಣಸಿದ್ಧಪ್ಪ, ಅಧ್ಯಕ್ಷ ಎ.ಎಂ.ಹನುಮಂತ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.
ಗ್ರಾ.ಪಂ ಮಾಜಿ ಸದಸ್ಯ ಕೃಷ್ಣಮೂರ್ತಿ ಸ್ವಾಗತಿಸಿದರು. ಉಪನ್ಯಾಸಕರಾದ ಶ್ರೀಮತಿ ಸುಮತಿ ಜಯಪ್ಪ ಕಾರ್ಯಕ್ರಮ ನಿರೂಪಿಸಿದರು.

error: Content is protected !!