ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿದ ದಾವಣಗೆರೆ – ಹರಿಹರ ತಾಲ್ಲೂಕಿನ ರೈತರ ನಿಯೋಗ
ಮಲೇಬೆನ್ನೂರು, ಅ.12- ಭದ್ರಾ ಬಲದಂಡೆ ನಾಲೆಯಲ್ಲಿ ಆನ್ ಅಂಡ್ ಆಫ್ ಮಾಡದೇ ಸತತವಾಗಿ ನೀರು ಹರಿಸುವಂತೆ ದಾವಣಗೆರೆ ಮತ್ತು ಹರಿಹರ ತಾಲ್ಲೂಕಿನ ರೈತರು ಗುರುವಾರ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಭದ್ರಾ ಕಾಡಾ ಅಧ್ಯಕ್ಷ ಮಧು ಬಂಗಾರಪ್ಪ ಅವರನ್ನು ಸೊರಬದಲ್ಲಿ ಭೇಟಿ ಮಾಡಿ, ಒತ್ತಾಯಿಸಿದ್ದಾರೆ.
ಭದ್ರಾ ಕಾಡಾ ಸಮಿತಿ ತೀರ್ಮಾನದಂತೆ ಅ.16 ರಿಂದ 25 ರವರೆಗೆ 10 ದಿವಸ ನಾಲೆಯಲ್ಲಿ ನೀರು ಬಂದ್ ಮಾಡುವುದರಿಂದ ಅಚ್ಚುಕಟ್ಟಿನಲ್ಲಿ ಭತ್ತ ನಾಟಿ ಮಾಡಿರುವ ರೈತರಿಗೆ ಬಹಳ ತೊಂದರೆ ಆಗಲಿದೆ. ಅಲ್ಲದೇ ಭತ್ತದ ಬೆಳೆ ಕಾಳು ಕಟ್ಟುವ ಹಂತದಲ್ಲಿರುವುದರಿಂದ ಈಗ ನೀರಿನ ಅವಶ್ಯಕತೆ ಇದೆ. ಹಾಗಾಗಿ ನಾಲೆ ನೀರು ಬಂದ್ ಮಾಡದೇ ಸತತವಾಗಿ ನೀರು ಹರಿಸಬೇಕೆಂದು ಮಧು ಬಂಗಾರಪ್ಪ ಅವರಿಗೆ ರೈತರು ತಿಳಿಸಿದರು.
ರೈತರ ಮನವಿಗೆ ಪೂರಕವಾಗಿ ಸ್ಪಂದಿಸಿದ ಮಧು ಬಂಗಾರಪ್ಪ ಅವರು, ಬೇಸಿಗೆ ಸಮಯದಲ್ಲಿ ಕುಡಿಯುವ ನೀರನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯವಾಗಿರು ವುದರಿಂದ ನಾಲೆಯಲ್ಲಿ ನೀರಿನ ಹರಿವು ಕಡಿಮೆ ಮಾಡಿ ಹರಿಸುವ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ.
ಶುಕ್ರವಾರ ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಜೊತೆ ಈ ಬಗ್ಗೆ ಚರ್ಚೆ ಮಾಡಿ, ನಿಮಗೂ ತೊಂದರೆ ಆಗದಂತೆ ತೀರ್ಮಾನ ಮಾಡುತ್ತೇವೆಂದು ರೈತರಿಗೆ ಭರವಸೆ ನೀಡಿದ್ದಾರೆ.
ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ.ದ್ಯಾವಪ್ಪ ರೆಡ್ಡಿ, ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಹೆಚ್.ಆರ್. ಲಿಂಗರಾಜ್, ದಾವಣಗೆರೆ ಎಪಿಎಂಸಿ ಮಾಜಿ ಅಧ್ಯಕ್ಷರಾದ ನಾಗೇಶ್ವರ ರಾವ್, ಗಣೇಶಪ್ಪ, ಹರಿಹರ ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ದಾವಣಗೆರೆ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಎಂ.ಮಂಜುನಾಥ್, ನಂದಿತಾವರೆ ಮುರುಗೇಂದ್ರಯ್ಯ, ಹೊಳೆಸಿರಿಗೆರೆ ತಿಪ್ಪೇರುದ್ರಪ್ಪ, ಕುಂದುವಾಡ ಹನುಮಂತಪ್ಪ, ಮಾಜಿ ಮೇಯರ್ ಗುರುನಾಥ್, ಕುಂದುವಾಡ ಪುನೀತ್, ಯಲವಟ್ಟಿಯ ಮಹೇಂದ್ರಪ್ಪ, ರಾಮಚಂದ್ರಪ್ಪ, ಶಾಂತವೀರಪ್ಪ, ಸಿರಿಗೆರೆ ಪ್ರಭು, ಕುಂದವಾಡ ಮಹೇಶ್ವರಪ್ಪ ಸೇರಿದಂತೆ ಇನ್ನೂ ಅನೇಕ ರೈತರು ನಿಯೋಗದಲ್ಲಿದ್ದರು.