ಮೂಲ ಶಿಕ್ಷಣ ಪ್ರತಿಪಾದಿಸಿದ ಮೊದಲ ಶಿಕ್ಷಣ ತಜ್ಞ ಗಾಂಧೀಜಿ

ಮೂಲ ಶಿಕ್ಷಣ ಪ್ರತಿಪಾದಿಸಿದ ಮೊದಲ ಶಿಕ್ಷಣ ತಜ್ಞ ಗಾಂಧೀಜಿ

ಈಶ್ವರಮ್ಮ ಶಾಲೆಯ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಕೆ.ಎಸ್. ಪ್ರಭುಕುಮಾರ್

ದಾವಣಗೆರೆ, ಅ. 11 – ಸ್ವಾತಂತ್ರ್ಯ ಭಾರತದಲ್ಲಿ ಮೂಲ ಶಿಕ್ಷಣ ಪ್ರತಿಪಾದಿಸಿದ ಮೊದಲ ಶಿಕ್ಷಣ ತಜ್ಞ ಮಹಾತ್ಮ ಗಾಂಧೀಜಿ ಎಂದು ಈಶ್ವರಮ್ಮ ಶಾಲೆಯ ಪ್ರಾಂಶುಪಾಲ ಕೆ.ಎಸ್. ಪ್ರಭುಕುಮಾರ್ ಹೇಳಿದರು.

ನಗರದ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶ ಕಂಡ ಮಹಾನ್ ವ್ಯಕ್ತಿಗಳಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿಯವರು ಪ್ರಮುಖರು ಎಂದು ತಿಳಿಸಿದರು.

ಗಾಂಧೀಜಿ ಭಾರತೀಯ ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿದ್ದ ರಾಜಕೀಯ ನಾಯಕ. ಸತ್ಯಾಗ್ರಹ ಮತ್ತು ಅಹಿಂಸೆ ಎಂಬ ಎರಡು ಆಯುಧಗಳಿಂದ ಬ್ರಿಟಿಷ್ ಸಾರ್ವಭೌಮತ್ವವನ್ನು ಮಣಿಸಿದರು. ಗಾಂಧಿ ತತ್ವಗಳು ಮತ್ತು ಅವರ ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದರು.

ಸ್ವಾತಂತ್ರ್ಯ ಭಾರತದಲ್ಲಿ ಮೂಲ ಶಿಕ್ಷಣವನ್ನು ಜಾರಿಗೆ ತಂದು ಪ್ರತಿಪಾದಿಸಿದ ಸ್ವಾವಲಂಬಿ ಭಾರತ ವನ್ನು ಕಟ್ಟಲು ಮೂಲ ಶಿಕ್ಷಣ ಅವಶ್ಯಕ ಎಂದು ತಿಳಿಸಿ ದವರು ಗಾಂಧೀಜಿಯವರು ಎಂದು ತಿಳಿಸಿದರು.

ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರಲ್ಲಿ ಅನೇಕ ಆದರ್ಶಗಳ ಸಾಮ್ಯತೆ ಇದೆ. ಗಾಂಧಿ ತತ್ವಗಳನ್ನು ಪಾಲಿಸುತ್ತಾ, ಸ್ವಾತಂತ್ರ್ಯ ಭಾರತದ ಎರಡನೇ ಪ್ರಧಾನಿಯಾಗಿ ಪ್ರಾಮಾಣಿಕತೆ, ಸರಳತೆ ಮತ್ತು ಸ್ವಾಭಿಮಾನಗಳೇ ಮೈದಳೆದಂತೆ ಇದ್ದವರು ಶಾಸ್ತ್ರೀಜಿಯವರು. ಗಾಂಧೀಜಿಯವರ ಅಹಿಂಸಾತ್ಮಕ ತತ್ವಗಳಲ್ಲಿ ನಂಬಿಕೆ ಇಟ್ಟು,  ಸ್ವಾತಂತ್ರ್ಯಕ್ಕೆ ಹೋರಾಡಿದ ಧೀಮಂತ ಸೇನಾನಿ ಶಾಸ್ತ್ರೀಜಿಯವರು. ದೈಹಿಕವಾಗಿ ವಾಮನನಂತಿದ್ದರೂ ನಿರ್ಧಾರ ತೆಗೆದುಕೊಳ್ಳುವಲ್ಲಿ ಶಾಸ್ತ್ರೀಜಿಯವರು ತ್ರಿವಿಕ್ರಮನಾಗಿದ್ದರು ಎಂದರು.

ಪ್ರೌಢಶಾಲಾ ಶಿಕ್ಷಕಿ ಆಶಾ ಗಾಂಧೀಜಿಯವರ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ಗಾಂಧಿ ಭಜನೆಗಳ ಹಾಡುಗಳನ್ನು ಹಾಡಿದರು. ಶಾಲೆಯ ಹಿರಿಯ ಶಿಕ್ಷಕಿ ಸಬೀನಾಬಾನು ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಶಿಕ್ಷಕಿ ಅಪೂರ್ವ ನಿರೂಪಿಸಿದರು. ರೇಖಾ ಸ್ವಾಗತಿಸಿದರು. ಶಿಕ್ಷಕಿ ಜ್ಯೋತಿ ವಂದಿಸಿದರು.

error: Content is protected !!