ಪ್ರಗತಿಯಲ್ಲಿರುವ ಮುರುಘರಾಜೇಂದ್ರ ಬ್ಯಾಂಕಿಗೆ 2 ಶಾಖೆಗಳಿಗೆ ಅನುಮತಿ

ಪ್ರಗತಿಯಲ್ಲಿರುವ ಮುರುಘರಾಜೇಂದ್ರ ಬ್ಯಾಂಕಿಗೆ 2 ಶಾಖೆಗಳಿಗೆ ಅನುಮತಿ

ಶ್ರೀ ಮುರುಘರಾಜೇಂದ್ರ ಬ್ಯಾಂಕಿನ 49ನೇ ವರ್ಷದ ಸರ್ವ ಸದಸ್ಯರ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಎಂ. ಜಯಕುಮಾರ್

ದಾವಣಗೆರೆ, ಅ. 11 – ಪ್ರತಿಷ್ಠಿತ ಸಹಕಾರ ಬ್ಯಾಂಕುಗಳಲ್ಲೊಂದಾದ ಶ್ರೀ ಮುರುಘರಾಜೇಂದ್ರ ಕೋ-ಆಪರೇಟಿವ್‌ ಬ್ಯಾಂಕ್ ತನ್ನ ಸೇವೆಯನ್ನು ಗ್ರಾಹಕರ ಹತ್ತಿರ ಕೊಂಡೊಯ್ಯುವ ನಿಟ್ಟಿನಲ್ಲಿ ಎರಡು ಶಾಖೆಗಳನ್ನು ತೆರೆಯಲು ನಿರ್ಧರಿಸಿದೆ ಎಂದು ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಎಂ. ಜಯಕುಮಾರ್ ತಿಳಿಸಿದ್ದಾರೆ.

ನಗರದ ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಸಮುದಾಯ ಭವನದಲ್ಲಿ ಕಳೆದ ವಾರ ಏರ್ಪಾಡಾಗಿದ್ದ ಶ್ರೀ ಮುರುಘರಾಜೇಂದ್ರ ಕೋ-ಆಪರೇಟಿವ್ ಬ್ಯಾಂಕಿನ 2022-23ನೇ ಸಾಲಿನ 49ನೇ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎರಡು ಶಾಖೆಗಳನ್ನು ಆರಂಭಿಸಲು ಭಾರತೀಯ ರಿಸರ್ವ್‌ ಬ್ಯಾಂಕ್ ಅನುಮತಿ ನೀಡಿದ್ದು ಈ ಹಿನ್ನೆಲೆಯಲ್ಲಿ ಎಂಸಿಸಿ ಬಿ ಬ್ಲಾಕ್‌ನ ಮಾಮಾಸ್ ಜಾಯಿಂಟ್ ರಸ್ತೆಯಲ್ಲಿ ಮತ್ತು ಹಳೇ ಊರಿನ ಭಾಗದ ಕಾಯಿಪೇಟೆಯಲ್ಲಿ ಶಾಖೆಗಳನ್ನು ತೆರೆಯುವ ಸಂಬಂಧ ಸೂಕ್ತ ಸ್ಥಳ ಪರಿ ಶೀಲನೆ ಕಾರ್ಯ ನಡೆದಿದೆ ಎಂದು ಅವರು ಹೇಳಿದರು.

ತಮ್ಮ ಬ್ಯಾಂಕ್ ಆರ್ಥಿಕ ಪ್ರಗತಿಯೊಂದಿಗೆ ಬಲಿಷ್ಠವಾಗಿದ್ದು, ತನ್ನ ಸ್ಥಾಪನೆಯ 50ನೇ ವರ್ಷದ ಸುವರ್ಣ ಮಹೋತ್ಸವದತ್ತ ಸಾಗುತ್ತಿದೆ. ಸಾರ್ವಜನಿಕರ ಪ್ರೋತ್ಸಾಹದಿಂದ ಸದೃಢ ಬ್ಯಾಂಕ್ ಎಂಬ ಮೆಚ್ಚುಗೆ ಪಡೆದು ಮುನ್ನಡೆದಿದೆ ಎಂದು ಜಯಕುಮಾರ್ ಸಂತಸ   ವ್ಯಕ್ತಪಡಿಸಿದರು.

2023ನೇ ಮಾರ್ಚ್ ಅಂತ್ಯಕ್ಕೆ 1.34 ಕೋಟಿ ರೂ. ಷೇರು ಬಂಡವಾಳ ಹೊಂದಿದೆ. 1.43 ಕೋಟಿ ರೂ. ಕಾಯ್ದಿಟ್ಟ ನಿಧಿ 67 ಲಕ್ಷ ರೂ. ಇತರೆ ನಿಧಿಗಳಾಗಿದ್ದು, 32.59 ಕೋಟಿ ರೂ. ಠೇವಣಿ ಸಂಗ್ರಹಿಸಿದೆ. ಸದಸ್ಯರ ಅಗತ್ಯಗನುಗುಣವಾಗಿ 18 ಕೋಟಿ ರೂ. ಸಾಲ-ಸೌಲಭ್ಯ ಒದಗಿಸಲಾಗಿದ್ದು, 37 ಕೋಟಿ ರೂ. ದುಡಿಯುವ ಬಂಡವಾಳವಾಗಿರುತ್ತದೆ. 37 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಷೇರುದಾರರಿಗೆ ಶೇ. 12ರಂತೆ ಲಾಭಾಂಶ ನೀಡಲು ಬ್ಯಾಂಕಿನ ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿದೆ ಎಂದು ಷೇರುದಾರರ ಚಪ್ಪಾಳೆಗಳ ಮಧ್ಯೆ ಜಯಕುಮಾರ್ ಘೋಷಿಸಿದರು.

ಬ್ಯಾಂಕಿನ ಉಪಾಧ್ಯಕ್ಷ ಎಸ್. ಓಂಕಾರಪ್ಪ ಮಾತನಾಡಿ, ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರ ಹಿತಾಸಕ್ತಿ, ಸಿಬ್ಬಂದಿ ವರ್ಗದವರ ಶ್ರಮ, ಷೇರುದಾರರು ಮತ್ತು ಠೇವಣಿದಾರರ ಸದಾ ಪ್ರೋತ್ಸಾಹ, ಹಿತೈಷಿಗಳು ಮತ್ತು ಸಾರ್ವಜನಿಕರ ಹಾರೈಕೆಯಿಂದಾಗಿ ತಮ್ಮ ಬ್ಯಾಂಕ್ ಪ್ರಗತಿಯನ್ನು ಕಾಯ್ದುಕೊಂಡು ಮುನ್ನಡೆದಿದೆ ಎಂದು ತಿಳಿಸಿ, ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. 

ಬ್ಯಾಂಕಿನ ನಿರ್ದೇಶಕ ಮಹೇಶ್ ಜಿ. ಶೇಂಡಗಿ ಅವರು ಆಯ-ವ್ಯಯ ಮಂಡಿಸಿದರು.

ಮಾಜಿ ಶಾಸಕರೂ ಆಗಿರುವ ಬ್ಯಾಂಕಿನ ನಿರ್ದೇಶಕ ಎಸ್.ವಿ. ರಾಮಚಂದ್ರಪ್ಪ, ನಿರ್ದೇಶಕರುಗಳಾದ ಕೆ.ಆರ್. ಪರಮೇಶ್ವರಪ್ಪ, ಕೆ.ಜಿ. ಚನ್ನಬಸಪ್ಪ, ಎಂ.ಎಸ್. ಶಿವಯೋಗಿ, ಎನ್. ನೀಲಗಿರಿ, ಕೆ.ಎಸ್. ಸತೀಶ್, ಶ್ರೀಮತಿ ಜಿ.ಬಿ. ಮಂಗಳ ಬೂಸ್ನೂರು, ಸೋಗಿ ಎಸ್. ಶಮಂತ್, ವಿಶೇಷ ಆಹ್ವಾನಿತರಾದ ಕಣಕುಪ್ಪಿ ಮುರುಗೇಶಪ್ಪ ಅವರುಗಳು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಗಪ್ಪ ಮಲ್ಲಪ್ಪ ತೋಟದ್ ಅವರ ಪ್ರಾರ್ಥನೆ ನಂತರ ನಿರ್ದೇಶಕ ಹೆಚ್.ವಿ. ಮಂಜುನಾಥಸ್ವಾಮಿ ಸ್ವಾಗತಿಸಿದರು. ನಿರ್ದೇಶಕರಾದ ಶ್ರೀಮತಿ ಜ್ಯೋತಿ ಆರ್. ಜಂಬಗಿ ವಂದಿಸಿದರು.

ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್ ಅವರು ಸಭೆಯಲ್ಲಿ ಪಾಲ್ಗೊಂಡು ಬ್ಯಾಂಕಿನ ಅಧ್ಯಕ್ಷ ಎಂ. ಜಯಕುಮಾರ್ ಮತ್ತು ಉಪಾಧ್ಯಕ್ಷ ಎಸ್. ಓಂಕಾರಪ್ಪ ಅವರುಗಳನ್ನು ಶಾಲು ಹೊದಿಸಿ, ಸನ್ಮಾನಿಸುವುದರ ಮೂಲಕ ಮುರುಘರಾಜೇಂದ್ರ ಬ್ಯಾಂಕ್ ಅನ್ನು ಇನ್ನೂ ಹೆಚ್ಚಿನ ಪ್ರಗತಿಯತ್ತ ಕೊಂಡೊಯ್ಯುವಂತೆ ಹಾರೈಸಿದರು.

ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಎಸ್.ಪಿ. ವೀರಭದ್ರಪ್ಪ, ಪ್ರಭಾರ ವ್ಯವಸ್ಥಾಪಕ ಎಂ.ಎಸ್. ಅರುಣ ಮತ್ತು ಬ್ಯಾಂಕಿನ ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

error: Content is protected !!