ಪ್ರಕೃತಿಗೆ ವಿರುದ್ಧವಾಗಿ ಜೀವನ ನಡೆಸಿದಾಗ ರೋಗಗಳು ಹತ್ತಿರವಾಗುತ್ತವೆ

ಪ್ರಕೃತಿಗೆ ವಿರುದ್ಧವಾಗಿ ಜೀವನ ನಡೆಸಿದಾಗ ರೋಗಗಳು ಹತ್ತಿರವಾಗುತ್ತವೆ

`ಹಲೋ ಕನ್ನಡಿಗ’ ದಿಂದ `ನಿಸರ್ಗ ಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಪತ್ರಕರ್ತ  ಜಯರಾಮ್ ಹೆಗಡೆ  

ಸಿರಸಿ, ಅ.10- ಇಲ್ಲಿನ ಶ್ರೀ ಅನಂತ ರಾವ್ ಬೀಳಗಿ ಸ್ಮಾರಕ ನಿಸರ್ಗ ಆಸ್ಪತ್ರೆ ಹಾಗೂ ಹಲೋ ಕನ್ನಡಿಗ ವಾರ ಪತ್ರಿಕೆ (ದಾವಣಗೆರೆ) ಇವರ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಹಾಗೂ ನಿಸರ್ಗ ಆಸ್ಪತ್ರೆಯ  11ನೇ ವಾರ್ಷಿಕೋತ್ಸವ ಆಚರಿಸಲಾಯಿತು. 

ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಉತ್ತಮ ಸಿಬ್ಬಂದಿ ಪ್ರಶಸ್ತಿಗಳನ್ನು ವಿತರಣೆ ಮಾಡಲಾಯಿತು.              `ನಿಸರ್ಗ ಸಿರಿ’ ಪ್ರಶಸ್ತಿಯನ್ನು  ಶೋಭಾ ವಿ. ಲಮಾಣಿ ಹಾಗೂ ವಿನಯ್ ಪರಮೇಶ್ವರ ನಾಯಕ್ ಇವರಿಗೆ ನೀಡಿ ಸನ್ಮಾನಿಸಲಾಯಿತು. ಪ್ರಾಸ್ತಾವಿಕವಾಗಿ  ಮಾತನಾಡಿದ ನಿಸರ್ಗ ಟ್ರಸ್ಟ್ ಅಧ್ಯಕ್ಷ ಡಾ.ಪಿ.ಜಿತೇಶ್,  ಆಸ್ಪತ್ರೆಯ ಸಿಬ್ಬಂದಿಗಳ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

`ನಿಸರ್ಗ ಸಿರಿ’ ಪ್ರಶಸ್ತಿ ಸಂಸ್ಥಾಪಕರಾದ ಹಲೋ ಕನ್ನಡಿಗ ಪತ್ರಿಕೆ  ಸಂಪಾದಕ  ಸಿ.ವೇದಮೂರ್ತಿ  ಮಾತನಾಡಿ,  ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಇಬ್ಬರಿಗೆ ಪ್ರತಿವರ್ಷ  `ನಿಸರ್ಗ ಸಿರಿ’ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದರು.                                  

ಕಾರ್ಯಕ್ರಮವನ್ನು  ಉದ್ಘಾಟಿಸಿದ ಹಿರಿಯ ಪತ್ರಕರ್ತ  ಜಯರಾಮ್ ಹೆಗಡೆ  ಮಾತನಾಡಿ, ನಾವು ಪ್ರಕೃತಿಯೊಂದಿಗೆ ಹೊಂದಿಕೊಂಡು ಪ್ರಕೃತಿದತ್ತವಾದ ಜೀವನವನ್ನು ನಡೆಸಿದರೆ ನಮಗೆ ಯಾವುದೇ ರೋಗಗಳ ಭಯವಿರುವುದಿಲ್ಲ. ನಾವು ಪ್ರಕೃತಿಗೆ ವಿರುದ್ಧವಾಗಿ ಜೀವನ ಮಾಡಿದಾಗ ನಮಗೆ ರೋಗಗಳು ಬರುತ್ತವೆ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು  ಎಂದು ತಿಳಿಸಿದರು.    

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ  ಪತ್ರಕರ್ತರು, ನಿವೃತ್ತ ಶಿಕ್ಷಕರೂ ಆದ ರಾಜೀವ್ ಅಜ್ಜಿಬಾಳ ಮಾತನಾಡಿ, ನಮ್ಮ ಸುತ್ತಮುತ್ತ ಇರುವ ಗಿಡ, ಮರ, ಬಳ್ಳಿ, ಮಣ್ಣು, ಪ್ರಕೃತಿ ಎಲ್ಲದರಲ್ಲೂ ಸಮತೋಲನದಲ್ಲಿ ಕಾಯ್ದುಕೊಂಡು ಪರಿಸರವನ್ನು ರಕ್ಷಿಸಿ, ಪರಿಸರವನ್ನು ಸಮತೋಲನದಲ್ಲಿ ನಾವು ನೋಡಿಕೊಂಡು, ಪ್ರಕೃತಿಯೊಂದಿಗೆ ಜೀವನ ನಡೆಸಿದಾಗ ನಮಗೆ ತುಂಬಾ ಸಹಕಾರಿಯಾಗಲಿದೆ.  ಪರಿಸರವನ್ನು ನಾವು ರಕ್ಷಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಬಹಳ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.  ಹಾಗಾಗಿ ಎಲ್ಲರೂ ಕೂಡ ಪ್ರಕೃತಿಯನ್ನು ಸಂರಕ್ಷಿಸಬೇಕು ಎಂದು ಕಿವಿಮಾತು ಹೇಳಿದರು.                    

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಕೀಲ  ರಾಮಾ ಜೋಶಿ ಆಸ್ಪತ್ರೆ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ
ವ್ಯಕ್ತಪಡಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮ್ಯಾನೇಜಿಂಗ್ ಟ್ರಸ್ಟಿ ಬಿ.ಡಿ. ವಿಶ್ವಾಮಿತ್ರ ವಕೀಲರು ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಅನಂತ ರಾವ್ ಬೀಳಗಿ  ಮಾತನಾಡಿ, ನಮ್ಮ ಸನಾತನ ಧರ್ಮದಲ್ಲೇ ಎಲ್ಲವೂ ಅಡಗಿದೆ ಆ ಒಂದು ಧರ್ಮದ ಪ್ರಕಾರ ನಡೆದಲ್ಲಿ ನಮ್ಮ ಜೀವನ ಸುಖಮಯವಾಗಲಿದೆ ಎಂದು ನುಡಿದರು.  ನಿಸರ್ಗ ಆಸ್ಪತ್ರೆ  ವ್ಯವಸ್ಥಾಪಕ ಪ್ರಕಾಶ್ ಭಟ್  ಕಾರ್ಯಕ್ರಮ ನಿರೂಪಿಸಿದರು.   ಕಾರ್ಯದರ್ಶಿ ಡಾ. ಲಕ್ಷ್ಮಿ ಪಿ .ಎಸ್.  ವಂದಿಸಿದರು.

error: Content is protected !!