ಭ್ರಷ್ಟಾಚಾರ ನಿರ್ಮೂಲನಾ ಜಾಗೃತಿ ಅಭಿಯಾನ

ಭ್ರಷ್ಟಾಚಾರ ನಿರ್ಮೂಲನಾ ಜಾಗೃತಿ ಅಭಿಯಾನ

ಯುವ ಸಮುದಾಯವು ಭ್ರಷ್ಟಾಚಾರದ ವಿರುದ್ಧ ಜಾಗೃತವಾಗಬೇಕು.  

– ಕೌಲಾಪುರೆ ಎಂ. ಎಸ್. ಅಧೀಕ್ಷಕರು, ಜಿಲ್ಲಾ ಲೋಕಾಯುಕ್ತ

ದಾವಣಗೆರೆ, ಅ. 9 – ಯುವ ಸಮುದಾಯವು ಭ್ರಷ್ಟಾಚಾರದ ವಿರುದ್ಧ ಜಾಗೃತವಾಗಬೇಕು, ಭ್ರಷ್ಟಾ ಚಾರವನ್ನು ತಡೆಗಟ್ಟಲು ಲೋಕಾಯುಕ್ತದೊಂದಿಗೆ ಕೈಜೋಡಿಸಬೇಕು ಎಂದು ದಾವಣಗೆರೆ ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ಕೌಲಾಪುರೆ ಎಂ. ಎಸ್. ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ  ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕರ್ನಾಟಕ ಲೋಕಾಯುಕ್ತದ ವತಿಯಿಂದ ಇಂದು ಇಲ್ಲಿ `ನಡೆದ ಭ್ರಷ್ಟಾಚಾರ ನಿರ್ಮೂಲನಾ ಜಾಗೃತಿ ಅಭಿಯಾನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭ್ರಷ್ಟಾಚಾರದ ಪಿಡುಗಿನಿಂದಾಗಿ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ.   ಪ್ರಜಾಪ್ರಭುತ್ವದಲ್ಲಿ ಆಡಳಿತವು ಪಾರದರ್ಶಕವಾಗಿರಬೇಕಾದರೆ ಲಂಚ ರುಸುವತ್ತು, ಆಮಿಷಗಳಿಲ್ಲದೆ ನಡೆಯಬೇಕು. ಸಾಮಾನ್ಯ ಜನರಿಗೆ ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸಗಳು ಅಲೆದಾಟಗಳಿಲ್ಲದಂತೆ ಆಗುತ್ತವೆ ಎಂಬ ಭರವಸೆ ಹುಟ್ಟಬೇಕು, ಅದು ಸಾಧ್ಯವಾಗಬೇಕಾದರೆ ಯುವ ಸಮುದಾಯವು ಎಲ್ಲಿಯೇ ಆಗಲೀ ಭ್ರಷ್ಟಾಚಾರದ ಕುರುಹುಗಳು ಕಂಡರೆ ಲೋಕಾಯುಕ್ತಕ್ಕೆ ದೂರು ಕೊಟ್ಟು ಭ್ರಷ್ಟರನ್ನು ಶಿಕ್ಷಿಸಲು ಸಹಕರಿಸಬೇಕು ಎಂದರು.

ಜಿಲ್ಲೆಯ ಲೋಕಾಯುಕ್ತ ಸಬ್ ಇನ್‌ಸ್ಪೆಕ್ಟರ್ ಪ್ರಭು ಸೂರಿನ ಅವರು ಪಿಪಿಟಿ ಮೂಲಕ ಲೋಕಾಯುಕ್ತದ ಇತಿಹಾಸ, ರಚನೆಯ ಉದ್ದೇಶ ಮತ್ತು ಲೋಕಾಯುಕ್ತದ ವಿವಿಧ ಕಾಯಿದೆಗಳ ಕುರಿತು ವಿವರಿಸಿ ಯುವಕರು ಧೈರ್ಯವಾಗಿ ಭ್ರಷ್ಟಾಚಾರದ ವಿರುದ್ಧದ ಜಾಗೃತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ದಾದಾಪೀರ್ ನವಿಲೇಹಾಳ್ ಮಾತನಾಡಿ, ನಮ್ಮ ದೇಶದ ಜಾತಿ, ಭ್ರಷ್ಟಾಚಾರ ಮತ್ತು ಅಪರಾಧ ಒಂದಕ್ಕೊಂದು ಸಂಬಂಧ ಹೊಂದಿವೆ. ಈ ಮೂರನ್ನೂ ಸಮಾನವಾಗಿ ವಿರೋಧಿಸುವ ಮೂಲಕ ಆರೋಗ್ಯವಂತ ಸಮಾಜವನ್ನು ನಿರ್ಮಿಸುವ ಲೋಕಾಯುಕ್ತದ ಪ್ರಯತ್ನದಲ್ಲಿ ನಾವೆಲ್ಲರೂ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಾಪಕರು, ಮ್ಯಾನೇಜರ್ ಗೀತಾದೇವಿ, ಜಿಲ್ಲಾ ಲೋಕಾಯುಕ್ತದ ಅಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು.

ಅಧ್ಯಾಪಕರಾದ ಮಂಜುನಾಥ್ ಸ್ವಾಗತಿಸಿದರು, ರಾಜಮೋಹನ್ ವಂದಿಸಿದರು. ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!