ಸರ್ಕಾರ ಕೂಡಲೇ ವಿದ್ಯುತ್ ಖರೀದಿಸಲಿ ಇಲ್ಲವೇ ಉತ್ಪಾದನೆಗೆ ಮುಂದಾಗಲಿ

ಸರ್ಕಾರ ಕೂಡಲೇ ವಿದ್ಯುತ್ ಖರೀದಿಸಲಿ ಇಲ್ಲವೇ ಉತ್ಪಾದನೆಗೆ ಮುಂದಾಗಲಿ

ರಾಜ್ಯದಲ್ಲಿ ತೀವ್ರವಾದ ಬರಗಾಲವಿದೆ. ರೈತರು ಮಳೆಯನ್ನು ನಂಬಿ ಬಿತ್ತನೆ ಮಾಡಿದ್ದರು. ಆದರೆ, ಮಳೆ ಕೈಕೊಟ್ಟಿದ್ದರಿಂದ ಬೆಳೆಗಳು ಸಂಪೂರ್ಣ ನಾಶವಾಗಿದೆ. ಉಳಿದ ಬೆಳೆಗಳಿಗೆ, ತೋಟಗಾರಿಕೆ ಬೆಳೆಗಳಿಗೆ ನೀರು ಪೂರೈಸಲು ಇದೀಗ ವಿದ್ಯುತ್ ಸಮಸ್ಯೆ ಎದುರಾಗಿದೆ.

– ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವರು

ಹೊನ್ನಾಳಿ, ಅ.9- ಸಮರ್ಪಕ ವಿದ್ಯುತ್ ಪೂರೈಕೆ ಮಾಡದಿದ್ದಲ್ಲಿ ರೈತರ ಪರವಾಗಿ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಅವರು ಪಟ್ಟಣದ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ತೀವ್ರವಾದ ವಿದ್ಯುತ್ ಸಮಸ್ಯೆ ಉಂಟಾಗಿದ್ದು, ರಾಜ್ಯ ಸರ್ಕಾರ ಕೂಡಲೇ ವಿದ್ಯುತ್ ಖರೀದಿ ಮಾಡಿ ಪೂರೈಸಬೇಕು. ಇಲ್ಲದಿದ್ದರೆ ವಿದ್ಯುತ್ ಉತ್ಪಾದನೆ ಮಾಡಿ, ಪೂರೈಸಲು ಶೀಘ್ರದಲ್ಲೇ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ತುಂಗಭದ್ರಾ ನದಿಯಿಂದ ಮತ್ತು ಬೋರ್‌ವೆಲ್‍ಗಳ ಮೂಲಕ ನೀರು ಪೂರೈಸಲು ಪಂಪ್‍ಸೆಟ್ ಮೊರೆ ಹೋಗುತ್ತಿರುವ ರೈತರಿಗೆ ವಿದ್ಯುತ್ ಸಮಸ್ಯೆ ಎದುರಾಗಿದೆ. ನಮ್ಮ ಸರ್ಕಾರವಿದ್ದಾಗ ಸತತವಾಗಿ 7 ಗಂಟೆಗಳ ಕಾಲ ರೈತರಿಗೆ ವಿದ್ಯುತ್ ಪೂರೈಸಲಾಗುತ್ತಿತ್ತು. ಆದರೆ, ಈಗ ಬಂದಿರುವ ಕಾಂಗ್ರೆಸ್ ಸರ್ಕಾರ ಬೆಳಿಗ್ಗೆ 2 ಗಂಟೆ ಮತ್ತು ಸಂಜೆ 2 ಗಂಟೆ ಒಟ್ಟು 4 ಗಂಟೆ ಮಾತ್ರ ವಿದ್ಯುತ್ ಪೂರೈಸುತ್ತಿದೆ. ಹೀಗಾದರೆ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳುವುದು ಹೇಗೆ ? ಎಂದು ಅವರು ಪ್ರಶ್ನಿಸಿದರು. ಇದರ ಬದಲು ನಿರಂತರ 7 ಗಂಟೆಗಳ ಕಾಲ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದ ಅವರು, ರೈತರು ಪ್ರತಿದಿನ ನನಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಹೋರಾಟ ಮಾಡಿ ಎಂದು ಕರೆಯುತ್ತಿದ್ದಾರೆ ಎಂದು ಹೇಳಿದರು. 

ಈ ಸಂಬಂಧ ಅಧಿಕಾರಿಗಳೊಂದಿಗೆ ನಾನು ಚರ್ಚೆ ಮಾಡಿದ್ದು, ಅವರು ನಾಲ್ಕು ದಿನ ಸಮಯ ಕೇಳಿದ್ದರು. ಇದೀಗ ಆ ಸಮಯ ಮುಗಿದಿದೆ. ಆದ್ದರಿಂದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಕೂಡಲೇ ವಿದ್ಯುತ್ ಪೂರೈಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡುವುದಾಗಿ ಹೇಳಿದರು. 

ಬರಗಾಲ ಘೋಷಣೆಯಾಗಿದೆ, ಬರ ಅಧ್ಯಯನ ತಂಡ ಜಿಲ್ಲೆಯ ಕೆಲ ತಾಲ್ಲೂಕುಗಳಿಗೆ ಭೇಟಿ ನೀಡಿದೆ. ಆದರೆ, ನಮ್ಮ ತಾಲ್ಲೂಕಿಗೆ ಭೇಟಿ ನೀಡಿಲ್ಲ. ಆದ್ದರಿಂದ ಆ ತಂಡ ನಮ್ಮ ತಾಲ್ಲೂಕಿಗೂ ಭೇಟಿ ನೀಡಿ ಬರ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು. 

ರಾಜ್ಯದಲ್ಲಿ ರೈತರ ಬದುಕು ಚಿಂತಾಜನಕವಾಗಿದೆ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಸರ್ಕಾರ ಕೂಡಲೇ ಬೆಳೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು. 

ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್, ಪುರಸಭಾ ಸದಸ್ಯರಾದ ಬಾಬು ಹೋಬಳದಾರ್, ಕೆ.ವಿ.ಶ್ರೀಧರ್, ಧರ್ಮಪ್ಪ, ಮುಖಂಡರಾದ ಮಂಜುನಾಥ್ ಇಂಚರ, ಮಹೇಶ್ ಹುಡೇದ್, ರಾಜು ಗೌಡ್ರು, ಪಾಲಾಕ್ಷಪ್ಪ, ಎ.ಕೆ.ನರಸಿಂಹಪ್ಪ, ಕುಬೇರ ರೆಡ್ಡಿ, ಬೆನಕಪ್ಪ, ಶಿಕಾರಿಪುರದ ಅಶ್ವಿನಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!