ಸಾಮಾನ್ಯರಿಂದ ಅಸಾಮಾನ್ಯ ಕೆಲಸವೇ ಇಸ್ರೋ ಹೆಮ್ಮೆ

ಸಾಮಾನ್ಯರಿಂದ ಅಸಾಮಾನ್ಯ ಕೆಲಸವೇ ಇಸ್ರೋ ಹೆಮ್ಮೆ

ಇಸ್ರೋದಲ್ಲಿನ ಶೇ.70ರಷ್ಟು ಜನರು ಗ್ರಾಮೀಣರು, ಸಾಮಾನ್ಯ ಹಿನ್ನೆಲೆಯವರು : ರಾಮನಗೌಡ ನಾಡಗೌಡ

ದಾವಣಗೆರೆ, ಅ. 7  – ಕಠಿಣ ಪರಿಶ್ರಮ, ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ, ತಂಡವಾಗಿ ಕಾರ್ಯನಿರ್ವಹಣೆ ಹಾಗೂ ಸ್ವಂತ ಶಕ್ತಿಯ ಮೇಲೆ ನಂಬಿಕೆ ಇರಿಸಿರುವುದು ಭಾರತೀಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಯಶಸ್ಸಿಗೆ ನೆರವಾಗಿವೆ ಎಂದು ಇಸ್ರೋದ ಯು.ಆರ್. ರಾವ್ ಉಪಗ್ರಹ ಕೇಂದ್ರದ ಇಂಟಿಗ್ರೇಷನ್ ಅಂಡ್ ಚೆಕೌಟ್ ಏರಿಯಾ ಉಪ ನಿರ್ದೇಶಕ ರಾಮನಗೌಡ ವಿ. ನಾಡಗೌಡ ಅಭಿಪ್ರಾಯ ಪಟ್ಟಿದ್ದಾರೆ.

ನಗರದ ಬಿ.ಐ.ಇ.ಟಿ. ಕಾಲೇಜಿನಲ್ಲಿ ಬೆಂಗಳೂರಿನ ಇಸ್ರೋ ಯು.ಆರ್. ಉಪಗ್ರಹ ಕೇಂದ್ರದ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ವಿಶ್ವ ಬಾಹ್ಯಾಕಾಶ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

ಬಾಹ್ಯಾಕಾಶ ನೌಕೆಯ ಪಿತಾಮಹ ಎಂದೇ ಹೆಸರಾಗಿರುವ ಪ್ರೊ. ಯು.ಆರ್. ರಾವ್ ಅವರ ನೇತೃತ್ವದಲ್ಲಿ 1972ರಲ್ಲಿ ಕೇವಲ ಮೂರು ವರ್ಷಗಳಲ್ಲಿ ದೇಶದ ಮೊದಲ ಉಪಗ್ರಹವಾದ ಆರ್ಯಭಟ ರೂಪಿಸಲಾಗಿತ್ತು. ಅವರ ತಂಡದಲ್ಲಿದ್ದ ಎಲ್ಲರೂ ಸಾಮಾನ್ಯ ಹಿನ್ನೆಲೆಯವರೇ ಆಗಿದ್ದರು ಎಂದರು.

ಈಗಲೂ ಇಸ್ರೋದಲ್ಲಿನ ಶೇ.70ರಷ್ಟು ಜನರು ಹಳ್ಳಿ ಗಾಡು ಹಾಗೂ ಸಾಧಾರಣ ಕುಟುಂಬಗಳ ಹಿನ್ನೆಲೆಯಿಂದ ಬಂದವರು. ಸಾಮಾನ್ಯರಿಂದ ಅಸಾಮಾನ್ಯ ಕಾರ್ಯಗಳನ್ನು ಮಾಡಿಸುವುದೇ ಇಸ್ರೋ ಹೆಮ್ಮೆ ಎಂದವರು ಹೇಳಿದರು.

ಇಸ್ರೋದ ಅಧ್ಯಕ್ಷರೂ ಸೇರಿದಂತೆ ಉನ್ನತ ಸ್ಥಾನದಲ್ಲಿ ರುವವರು ಸರಳವಾಗಿ ಎಲ್ಲರ ಜೊತೆ ಬೆರೆಯುತ್ತಾರೆ. ಹೀಗಾಗಿಯೇ ಇಸ್ರೋದಲ್ಲಿ ನಾಯಕತ್ವ ಇದೆಯೇ ಹೊರತು, ಪಾಳೆಗಾರಿಕೆ ಇಲ್ಲ ಎಂದು ನಾಡಗೌಡ ತಿಳಿಸಿದರು.

ಬೆಂಗಳೂರಿನ ಎನ್.ಐ.ಎಸ್.ಎ.ಆರ್. ಯೋಜನಾ ನಿರ್ದೇಶಕ ಸಿ.ವಿ. ಶ್ರೀಕಾಂತ್ ಮಾತನಾಡಿ, ಇಸ್ರೋ ಹಾಗೂ ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಜೊತೆಗೂಡಿ ವಿಶ್ವದ ಅತಿ ದೊಡ್ಡ ಭೂ ಪರಿವೀಕ್ಷಣಾ ಉಪಗ್ರಹ ರೂಪಿಸುತ್ತಿವೆ. ಇದರ ಒಟ್ಟು ವೆಚ್ಚ 11 ಸಾವಿರ ಕೋಟಿ ರೂ. ಎಂದು ಹೇಳಿದರು.

ಈ ಯೋಜನೆಯ ಶೇ.65ರಷ್ಟು ಕೆಲಸಕ್ಕೆ ಇಸ್ರೋ ಸಾವಿರ ಕೋಟಿ ರೂ. ಮಾತ್ರ ಖರ್ಚು ಮಾಡುತ್ತಿದೆ. ನಾಸಾ ಕೇವಲ ಶೇ.35ರಷ್ಟು ಕೆಲಸಕ್ಕೆ 10 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ. ಇಸ್ರೋ ಕಡಿಮೆ ವೆಚ್ಚದ ಪರಿಹಾರ ಹುಡುಕುವುದಕ್ಕೆ ಇದು ಉದಾಹರಣೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಇಸ್ರೋದ ವಿಶ್ವ ಬಾಹ್ಯಾಕಾಶ ಸಪ್ತಾಹ ಯೋಜನೆ ಅಧ್ಯಕ್ಷ ಡಾ. ರಾಘವೇಂದ್ರ ಬಿ. ಕುಲಕರ್ಣಿ, ಬಾಹ್ಯಾಕಾಶ ತಂತ್ರಜ್ಞಾನದ ಲಾಭಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಸಲು ವಿಶ್ವದಾದ್ಯಂತ ಸಪ್ತಾಹ ಆಚರಿಸಲಾಗುತ್ತಿದೆ ಎಂದರು.

ವೇದಿಕೆಯ ಮೇಲೆ  ಡಿ.ಡಿ.ಪಿ.ಐ. ಜಿ. ಕೊಟ್ರೇಶ್, ಬಿಐಇಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಬಿಐಇಟಿ ಪ್ರಾಂಶುಪಾಲ ಹೆಚ್.ಬಿ. ಅರವಿಂದ್ ಉಪಸ್ಥಿತರಿದ್ದರು.

ದಿವ್ಯ ಹಿರೇಮಠ್ ಪ್ರಾರ್ಥಿಸಿದರು. ಸಿ.ಆರ್. ನಿರ್ಮಲ ಸ್ವಾಗತಿಸಿದರು. ಐಶ್ವರ್ಯ ಹಾಗೂ ಸೃಜನ್ ನಿರೂಪಿಸಿದರೆ, ಕೆ.ಎಂ. ನರೇಶ್ ಪಟೇಲ್ ವಂದನಾರ್ಪಣೆ ನೆರವೇರಿಸಿದರು.

error: Content is protected !!