ದಾವಣಗೆರೆ, ಅ. 8- ವಿಶ್ವಮಟ್ಟದಲ್ಲಿ ‘ಯೋಗ’ ಕ್ಕೆ ಹೆಚ್ಚು ಮಹತ್ವ ಬಂದಿದೆ. ಭಾರತೀಯ ಯೋಗ ಪಟುಗಳು ತಮ್ಮ ಯೋಗ ಸಾಧನೆ ಮೂಲಕ ಹೆಸರು, ಕೀರ್ತಿಯನ್ನು ತಂದುಕೊಟ್ಟಿದ್ದಾರೆ ಎಂದು ಹರಿಹರ ನಗರಸಭೆ ಮಾಜಿ ಸದಸ್ಯ ಶಂಕರ್ ಖಟಾವ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಗರದ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಸಪ್ತರ್ಷಿ ಯೋಗಧಾರ ಸ್ಫೋರ್ಟ್ಸ್ ಅಕಾಡೆಮಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಇಂದು ಆಯೋಜಿಸಿದ್ದ ರಾಷ್ಟ್ರಮಟ್ಟದ ಮಹಿಳೆಯರ ಯೋಗಾಸನ ಚಾಂಪಿಯನ್ ಶಿಪ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯೋಗಕ್ಕೆ ಯಾವುದೇ ಜಾತಿ, ಮತಗಳ ಬೇಧವಿಲ್ಲ. ಯೋಗದಿಂದ ಭಾವೈಕ್ಯತೆ ಬೆಳೆಯುತ್ತದೆ. ಈ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳು ಸೇರಿದಂತೆ ರಾಜ್ಯದ 200 ಯೋಗಪಟುಗಳು ಭಾಗವಹಿಸಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಉತ್ತಮ ಸಾಧನೆ ಮಾಡುವ ಮೂಲಕ ಭವಿಷ್ಯ ಉಜ್ವಲವಾಗಲೆಂದು ಶುಭ ಹಾರೈಸಿದರು.
ಇನ್ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ಹಾಗೂ ನಿರ್ದೇಶಕ ಜಿ.ಬಿ. ವಿನಯ್ ಕುಮಾರ್ ಮಾತನಾಡಿ, ಮಕ್ಕಳು ಯೋಗಕ್ಕೆ ಪ್ರಾಮುಖ್ಯತೆ ನೀಡುತ್ತಿರುವಂತೆ ನಿಯತಕಾಲಿಕೆ ಓದುವುದು, ಕಥೆ-ಕಾದಂಬರಿ ಓದುವುದು, ಸಾಮಾನ್ಯ ಜ್ಞಾನ ಸೇರಿದಂತೆ, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.
ಜೀವನದಲ್ಲಿ ಎಂಥದೇ ಕ್ಲಿಷ್ಟಕರ ಸಮಸ್ಯೆಗಳು ಎದುರಾದರೂ ಅವುಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಯೋಗ ಪಟುಗಳಲ್ಲಿ ಯಾರಿಗಾದರೂ ಮುಂದೆ ಐಎಎಸ್, ಐಪಿಎಸ್, ಐಆರ್ಎಸ್, ಐಎಫ್ಎಸ್ ಮಾಡಬೇಕೆಂಬ ಗುರಿ ಹೊಂದಿದ್ದರೆ. ನಮ್ಮ ಸಂಸ್ಥೆಯಿಂದ ಸಹಾಯ, ಸಹಕಾರ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ಎಲ್. ರಾಯ್ಕರ್ ಮಾತನಾಡಿ, ಭಾರತೀಯ ಯೋಗ ಕಲೆ ಜಗತ್ತಿಗೇ ಮಾದರಿಯಾಗಿದೆ. ಭಾರತ ದೇಶ ವಿವಿಧ ಕ್ರೀಡೆಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದೆ. ಯೋಗದಲ್ಲೂ ಕೂಡ ಇನ್ನೂ ಎತ್ತರಕ್ಕೆ ಬೆಳೆಯಬೇಕಾಗಿದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ. ಮಂಜುನಾಥ ಮಾತನಾಡಿ, ಮಕ್ಕಳು ಮತ್ತು ಮಹಿಳೆಯರಲ್ಲಿ ಹುದುಗಿರುವ ಪ್ರತಿಭೆಯನ್ನು ಪ್ರದರ್ಶಿಸಲು ಈ ವೇದಿಕೆ ತುಂಬಾ ಸಹಕಾರಿಯಾಗಿದೆ. ವಿವಿಧ ಭಾಗಗಳಿಂದ ಆಗಮಿಸಿರುವ ಯೋಗ ಪಟುಗಳು ಉತ್ತಮ ಪ್ರದರ್ಶನ ನೀಡಿದ್ದಾರೆಂದರು.
ಯೋಗಾಸನ ಸ್ಪರ್ಧೆಯಲ್ಲಿ ಪಾಲ್ಗೊಂಡ ಯೋಗಪಟುಗಳು ಇನ್ನೂ ತಮ್ಮಲ್ಲಿರುವ ಪ್ರತಿಭೆಯನ್ನು ತೋರ್ಪಡಿಸುವ ಮೂಲಕ ಉನ್ನತ ಸಾಧನೆಗೈಯ್ಯುವಂತೆ ಸಲಹೆ ನೀಡಿದರು.
ಎಸ್ವೈಎಸ್ಎ ಉಪಾಧ್ಯಕ್ಷರೂ, ಪ್ರಾಧ್ಯಾಪಕರೂ ಆದ ವೀರಣ್ಣ ಬಿ. ಶೆಟ್ಟರ್, ಹರಿಹರ ವೈದ್ಯಾಧಿಕಾರಿ ಡಾ.ವಿಶ್ವನಾಥ್ ಕುಂದುಗೋಳಮಠ, ಕರ್ನಾಟಕ ಸ್ಟೇಟ್ ಅಮೆಚೂರು ಯೋಗ ಸ್ಫೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಜಿ.ಎನ್. ಕೃಷ್ಣಮೂರ್ತಿ ಅವರು ಯೋಗದ ಮಹತ್ವ, ಯೋಗ ಸಾಧನೆ ಕುರಿತು ಮಾತನಾಡಿದರು.
ಹರಿಹರ ನಗರಸಭೆ ಮಾಜಿ ಅಧ್ಯಕ್ಷ ಬಿ. ರೇವಣ ಸಿದ್ಧಪ್ಪ, ಸುನೀಲ್, ಡಾ. ಜೈಮುನಿ, ಡಾ. ಪರಶುರಾಮ್, ಡಾ. ಡಿ. ಫ್ರಾನ್ಸಿಸ್ ಕ್ಷೇವಿಯರ್ ಮತ್ತಿತರರು ಉಪಸ್ಥಿತರಿದ್ದರು.