ಹರಪನಹಳ್ಳಿ, ಅ.8- ಶಿಥಿಲಗೊಂಡಿರುವ ಶಾಲಾ ಕಟ್ಟಡ ತೆರವು ಮಾಡಿ, ನೂತನ ಕಟ್ಟಡ ನಿರ್ಮಾಣ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಹಾಗೂ ಸಿವಿಲ್ ನ್ಯಾಯಾಧೀಶರಾದ ಫಕ್ಕೀರವ್ವ ಕೆಳಗೇರಿ ಸೂಚಿಸಿದರು.
ತಾಲ್ಲೂಕಿನ ಬಂಡ್ರಿ, ಅರಸನಾಳು, ರಂಗಾಪುರ, ಬಿಕ್ಕಿಮಕಟ್ಟಿ, ಹಗರಿಶೀರನಹಳ್ಳಿ, ಹೊಸಕೋಟೆ, ಜಂಗಮ ತುಂಬಿಗೆರೆ ಸೇರಿದಂತೆ ವಿವಿಧ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಶನಿವಾರ ಮತ್ತು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಶಾಲೆಗಳಿಗೆ ತೆರಳಿ ಶಾಲೆಯ ಮಕ್ಕಳ ಹಾಜರಾತಿಯ ಬಗ್ಗೆ ಮತ್ತು ಶಾಲೆಗಳ ಶೌಚಾಲಯ, ಅಡುಗೆ ಕೊಠಡಿ, ಕುಡಿಯುವ ನೀರು, ಆಟದ ಮೈದಾನ ಹಾಗೂ ಇತರೆ ಮೂಲಭೂತ ಸೌಕರ್ಯಗಳು ಸೇರಿದಂತೆ, ಶಾಲೆಗಳ ವಿದ್ಯಾಭ್ಯಾಸದ ಕೊಠಡಿಗಳಿಗೆ ನ್ಯಾಯಾಧೀಶರು ಭೇಟಿ ನೀಡಿ, ಶಾಲೆಗಳಲ್ಲಿರುವ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದಾದರೂ ಸಮಸ್ಯೆ ಇದೆಯೇ? ಎಂದು ವಿದ್ಯಾರ್ಥಿಗಳಿಗೆ ಕೇಳಿದರು. ನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಗುಣಮಟ್ಟದ ಆಹಾರವನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಕೇತ್ರ ಶಿಕ್ಷಣಾಧಿಕಾರಿ ಬಸವರಾಜ್ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕೇತ್ರ ಶಿಕ್ಷಣಾಧಿಕಾರಿ ಬಸವರಾಜ್, ಶಿಕ್ಷಕರಾದ ಆರ್. ರಾಮಪ್ಪ, ಜಿ. ಹೊನ್ನತ್ತೆಪ್ಪ, ವಾಗೇಶ್, ಎಲ್.ಹೆಚ್. ಗಿರಿರಾಜ್, ತಾಲ್ಲೂಕು ಕಾನೂನು ಸೇವಾ ಸಮಿತಿಯ ಸಿಬ್ಬಂದಿಗಳಾದ ಕೊಟ್ರೇಶ್, ಬಸವರಾಜ್ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ಅಡುಗೆ ಸಹಾಯಕರು ಇದ್ದರು.