ಬರಗಾಲದಲ್ಲೂ ಸುಂಕದಕಟ್ಟೆ ದೇವಸ್ಥಾನದ ಹುಂಡಿಯಲ್ಲಿ 49,57,745 ಹಣ ಸಂಗ್ರಹ

ಬರಗಾಲದಲ್ಲೂ ಸುಂಕದಕಟ್ಟೆ ದೇವಸ್ಥಾನದ ಹುಂಡಿಯಲ್ಲಿ 49,57,745 ಹಣ ಸಂಗ್ರಹ

ಹೊನ್ನಾಳಿ, ಅ.6-  123 ವರ್ಷಗಳ ಇತಿಹಾಸದಲ್ಲಿ ಸತತವಾಗಿ 50 ದಿನಗಳ ಕಾಲ ಮಳೆಯಾಗದೇ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳೂ ಸೇರಿದಂತೆ ಬಹುತೇಕ ಕರ್ನಾಟಕ ರಾಜ್ಯವೇ ಬರಗಾಲದ ಭೀಕರತೆ ಎದುರಿಸುತ್ತಿದ್ದರೂ, ದೇವರ ಮೇಲಿನ ಭಕ್ತಿಗೆ ಬರ ಬಂದಿಲ್ಲ ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ದ್ವಿತೀಯ ಧರ್ಮಸ್ಥಳವೆಂದೇ ಖ್ಯಾತಿಯಾಗಿರುವ `ಎ’ ಶ್ರೇಣಿಯ ಮುಜರಾಯಿ ಇಲಾಖೆಗೊಳಪಟ್ಟಿರುವ ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥ ಸ್ವಾಮಿ ಮತ್ತು ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಅಧಿಕ ಹಣ ಸಂಗ್ರಹವಾಗಿದೆ.

 7 ತಿಂಗಳ ಅವಧಿಯಲ್ಲಿ 49,57,745 ರೂ.ಗಳು ಭಕ್ತಾದಿಗಳಿಂದ ಕಾಣಿಕೆ ರೂಪದಲ್ಲಿ  ಸಂಗ್ರಹವಾಗಿದೆ ಎಂದು ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಮಾಹಿತಿ ನೀಡಿದ್ದಾರೆ.

ತಾಲ್ಲೂಕು ಆಡಳಿತ, ದೇವಸ್ಥಾನದ ಆಡಳಿತ ಮಂಡಳಿ, ಗ್ರಾಮಸ್ಥರು ಮತ್ತು ಕೆನರಾ ಬ್ಯಾಂಕ್‍ನ ಸಿಬ್ಬಂದಿಗಳೂ ಸೇರಿದಂತೆ ಒಟ್ಟು 38 ಜನ ಸಿಬ್ಬಂದಿಗಳು  ಇಂದು ಹಣ ಎಣಿಕೆ ಮಾಡಿ, ಹುಂಡಿಯಲ್ಲಿ ಸಂಗ್ರಹವಾದ 49,57,745  ಹಣವನ್ನು ಕೆನರಾ ಬ್ಯಾಂಕ್‍ನಲ್ಲಿ ಜಮಾ ಮಾಡಲಾಗಿದೆ ಎಂದು ತಹಶೀಲ್ದಾರ್ ಪಟ್ಟರಾಜೇಗೌಡ ತಿಳಿಸಿದರು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಕೆ. ನರಸಿಂಹಮೂರ್ತಿ ಮತ್ತು  ಪ್ರಧಾನ  ಅರ್ಚಕ ರಾಜು ಸ್ವಾಮಿ ಮಾತನಾಡಿ, ಈ ದೇವಸ್ಥಾನಕ್ಕೆ ರಾಜ್ಯದ ನಾನಾ ಕಡೆಗಳಿಂದ ಭಕ್ತಾದಿಗಳು ಆಗಮಿಸಿ, ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತುಕೊಂಡು ತಮ್ಮ ಹರಕೆ ತೀರಿದ ಬಳಿಕ ತಮ್ಮ ಶಕ್ತ್ಯಾನುಸಾರವಾಗಿ ಹಣದ ರೂಪದಲ್ಲಿ ಕಾಣಿಕೆ ಸಲ್ಲಿಸುವ ವಾಡಿಕೆಯಿದೆೆ. ಕಳೆದ ಮಾರ್ಚ್ ತಿಂಗಳ ಹಿಂದೆ ಹಣ ಎಣಿಕೆ ಮಾಡಿದಾಗ ಸುಮಾರು 42 ಲಕ್ಷ ಹಣ ಹುಂಡಿಯಲ್ಲಿ ಸಂಗ್ರಹವಾಗಿದ್ದು, ಮಳೆ ಬಾರದೇ ಬರಗಾಲವಿದ್ದರೂ ಮಾರ್ಚ್ ತಿಂಗಳಿಂದ ಇಲ್ಲಿಯವರೆಗೆ 49,57,745 ರೂ.ಹಣ ಸಂಗ್ರಹವಾಗಿರುವುದು ಭಕ್ತರ ಭಕ್ತಿಗೆ ಮಾತ್ರ ಬರವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ವಿವರಿಸಿದರು.

2000 ನೋಟು ಚಲಾವಣೆಗೆ ಕೊನೆ ದಿನ: ಹುಂಡಿ ಹಣ ಎಣಿಕೆ ಸಂದರ್ಭದಲ್ಲಿ 2000 ಮುಖ ಬೆಲೆಯ 7 ನೋಟುಗಳು ಸಿಕ್ಕಿವೆ. 2000 ಮುಖ ಬೆಲೆಯ ನೋಟುಗಳನ್ನು ಚಲಾವಣೆ ಯಿಂದ ಹಿಂಪಡೆಯಲು ಆರ್.ಬಿ.ಐ. ಬ್ಯಾಂಕ್‍ಗ ಳಿಗೆ ನೀಡಿದ್ದ ಗಡುವನ್ನು ಸೆ.30ರ ಶನಿವಾರ ಕೊನೆಯ ದಿನವಾಗಿದ್ದು, ಮತ್ತೆ ಈ ಅವಧಿಯನ್ನು ಅಕ್ಟೋಬರ್ 7 ರ ವರೆಗೆ ವಿಸ್ತರಿಸಲಾಗಿತ್ತು.

ಇದೇ ಸಂದರ್ಭದಲ್ಲಿ ನೂತನ ತಹಶೀಲ್ದಾರ್ ಪಟ್ಟರಾಜೇಗೌಡ ಅವರನ್ನು ದೇವಸ್ಥಾನದ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಹುಂಡಿ ಹಣ ಎಣಿಕೆ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕರಾದ ಜಯಪ್ರಕಾಶ್, ಗುರುಪ್ರಸಾದ್, ರಮೇಶ್, ಗ್ರಾಮ ಆಡಳಿತಾಧಿಕಾರಿಗಳಾದ ಅಶೋಕ್, ಭರ್ಮಪ್ಪ, ಮುನೇಶ್, ಬಸವರಾಜ್, ದೊಡ್ಡೇಶ್, ಕೆನರಾ ಬ್ಯಾಂಕ್‌ ಕ್ಯಾಷಿಯರ್ ರಾಮಣ್ಣ, ದೇವಸ್ಥಾನದ ಸಮಿತಿಯ ಸದಸ್ಯರಾದ ಕರಿಯಪ್ಪ, ಎಸ್.ಎನ್. ಪ್ರಸನ್ನ, ಎಸ್.ಎಚ್. ನರಸಪ್ಪ, ಚಂದ್ರಮ್ಮ, ಗೌರಮ್ಮ, ಎ.ಕೆ.ಅಣ್ಣಪ್ಪ, ಎಚ್.ಆರ್.ರಾಕೇಶ್, ಗ್ರಾ.ಪಂ. ಸದಸ್ಯ ಡಿ.ಬಿ. ಶ್ರೀನಾಥ್, ಗ್ರಾಮಸ್ಥರಾದ ರುದ್ರೇಶ್, ಎಸ್.ಜಿ.ಮಂಜಪ್ಪ, ನರಸಿಂಹಪ್ಪ ಕೆನರಾ ಬ್ಯಾಂಕ್ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. 

error: Content is protected !!