ಪರಸ್ಪರ ಗೌರವವನ್ನು ಕೊಡುವುದೇ ಅತಂತ್ಯ ಶ್ರೇಷ್ಠ ಧರ್ಮ

ಪರಸ್ಪರ ಗೌರವವನ್ನು ಕೊಡುವುದೇ ಅತಂತ್ಯ ಶ್ರೇಷ್ಠ ಧರ್ಮ

ಹರಿಹರ ಜಮಾಅತೆ ವತಿಯಿಂದ ಜರುಗಿದ ವಿಚಾರಗೋಷ್ಠಿಯಲ್ಲಿ ವಚನಾನಂದ ಸ್ವಾಮೀಜಿ, ಮುಹಮದ್ ಕುಂಞ

ಹರಿಹರ, ಅ.3- ನಾವು ಮತ್ತೊಬ್ಬರಿಗೆ ಪರಸ್ಪರ ಗೌರವವನ್ನು ಕೊಡುವುದೇ ಅತ್ಯಂತ ಶ್ರೇಷ್ಠವಾದ ಧರ್ಮವಾಗಿದೆ ಎಂದು ಪಂಚಮ ಸಾಲಿ ಗುರುಪೀಠಾಧ್ಯಕ್ಷರಾದ ಶ್ರೀ ವಚನಾನಂದ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು. 

ನಗರದ ಮರಿಯಾ ನಿವಾಸ ಸಭಾಂಗಣದಲ್ಲಿ ರಾಬಿತಾ ಎ ಮಿಲ್ಲತ್ ಕಮಿಟಿ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಇಂದು ನಡೆದ ಪ್ರವಾದಿ ಮುಹಮ್ಮದ್ ಸೀರತ್ ಅವರ ಅಭಿಯಾನದ ಪ್ರಯುಕ್ತ ನಡೆದ ವಿಚಾರಗೋಷ್ಠಿಯ  ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. 

ಮುಸ್ಲಿಂ ಸಮುದಾಯದವರು ತಾವು ದಿನನಿತ್ಯ ಮಾಡುವ ಪ್ರಾರ್ಥನೆಯನ್ನು ಶಿಸ್ತು, ಬದ್ದತೆಯಿಂದ ಮಾಡಿದಾಗ ಆರೋಗ್ಯವಂತ ಜೀವನವನ್ನು ನಡೆಸಬಹುದು. ಕಾರಣ, ಅದರಲ್ಲಿ ಸಾಕಷ್ಟು ಯೋಗಕ್ಕೆ ಸಂಬಂಧಿಸಿದ ಅಂಶಗಳು ಅಡಕವಾಗಿವೆ. ವ್ಯಕ್ತಿಯಲ್ಲಿ ಘನತೆ, ಸಮಾಜದಲ್ಲಿ ಸಮತೆ, ರಾಷ್ಟ್ರದಲ್ಲಿ ಭಾವೈಕ್ಯತೆಯ ಭಾವನೆಗಳ ಅವಶ್ಯಕತೆಯಿದೆ. ಎಲ್ಲಾ ವರ್ಗದವರು ನಾವೆಲ್ಲರೂ ಒಂದೇ ಎಂಬ ಭಾವನೆಗಳನ್ನು ಬೆಳೆಸಿಕೊಂಡು ಹೋದಾಗ ಸುಂದರವಾದ ಭಾರತ ನಿರ್ಮಾಣವಾಗುತ್ತದೆ ಎಂದು ಹೇಳಿದರು. 

ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ರಾಜ್ಯ ಕಾರ್ಯದರ್ಶಿ  ಮುಹಮ್ಮದ್ ಕುಂಇ್ ಮಾತನಾಡಿ,  ನನ್ನ ಧರ್ಮದವರು ಮತ್ತು ನನ್ನವರು ಎಂಬ ಕಾರಣಕ್ಕಾಗಿ ಒಬ್ಬ ವ್ಯಕ್ತಿ ಮಾಡುವ ಅನ್ಯಾಯವನ್ನು, ಅಧರ್ಮವನ್ನು ಹಾಗೂ ಅನೈತಿಕತೆಯನ್ನು ಬೆಂಬಲಿಸುವುದು ಧರ್ಮವಲ್ಲ ಎಂದು ಹೇಳಿದರು. ‌

ಇಂದು ಸಮಾಜದಲ್ಲಿ ನನ್ನವ ಮತ್ತು ನನ್ನವರು ಎಂಬುದು ಬಹಳಷ್ಟು ಮಾರಕವಾಗಿ ಬೆಳೆಯುತ್ತಾ ಸಾಗಿದೆ. ಇದು ಹೋಗಿ ನಾವೆಲ್ಲರೂ ಒಂದೇ ಎಂಬ ಸಂದೇಶಗಳನ್ನು ಗಟ್ಟಿಯಾಗಿ ಹೇಳಿಕೊಡುವ ಅಗತ್ಯವಿದೆ. ಒಬ್ಬ ಮನುಷ್ಯನ ಬಗ್ಗೆ ಒಳ್ಳೆಯ ಭಾವನೆಗಳನ್ನು ಇಟ್ಟುಕೊಳ್ಳುವುದು ಅತ್ಯಂತ ಶ್ರೇಷ್ಠ ಆರಾಧನೆಯಾಗಿದೆ. ಈ ಜಗತ್ತಿನಲ್ಲಿ ಅನೇಕ ದಾರ್ಶನಿಕರು, ಸಂತರು, ಪ್ರವಾದಿ ಮುಹಮ್ಮದ್‌ರು ಋಷಿ ಮುನಿಗಳು, ಬಂದಿದ್ದಾರೆ. ಆದರೆ ಅವರು ಯಾರೂ ನಮ್ಮನ್ನು ಪೂಜಿಸಿ ಎಂದು ಜಗತ್ತಿಗೆ ಬಂದವರಲ್ಲ, ಅವರು ನಮ್ಮನು ಅನುಸರಿಸಿ ಎಂದು ಹೇಳಿದರು. ಆದರೆ, ದುರದೃಷ್ಟ ಎಂದರೆ ನಾವುಗಳು ಅವರನ್ನು ಅನುಸರಿಸದೆ, ಪೂಜಿಸುತ್ತಿದ್ದೇವೆ. ಬಸವಣ್ಣನವರು ಮತ್ತು ಸ್ವಾಮಿ ವಿವೇಕಾನಂದರು ಸೀಮಿತ ಸಮಾಜದ ವ್ಯಕ್ತಿಗಳಲ್ಲ, ಸಮಸ್ತ ಮಾನವ ಕುಲದ ಆಸ್ತಿಯಾಗಿದ್ದಾರೆ. ಮಹಾನ್ ಪುರುಷರನ್ನು ವಿಭಜನೆ ಮಾಡಿ ಅವರು ನಮ್ಮವರು ಇವರು ನಮ್ಮವರು ಎಂದು ವಿಭಜನೆ ಮಾಡುತ್ತಾ ಅಷ್ಟೇ ಅಲ್ಲದೇ ದೇವರನ್ನು ವಿಭಜಿಸುತ್ತಿದ್ದೇವೆ. ಇದರ ಪರಿಣಾಮವನ್ನು ಅನುಭವಿಸುತ್ತಿದ್ದೇವೆ. ಹೊರಗಿನಿಂದ ನಾವೆಲ್ಲರೂ ಚೆನ್ನಾಗಿ, ಸಂತೋಷದಿಂದ ಇದ್ದರೂ ಒಳಗೆ ಅಶಾಂತಿ, ಅಸಹಕಾರ, ಹಗೆತನ, ದ್ವೇಷ, ಒತ್ತಡ ಹೀಗೆ ನೂರಾರು ಮಾನಸಿಕ ರೋಗಿಗಳಾಗಿದ್ದೇವೆ. ಇಂತಹ ಸಮಾಜಕ್ಕೆ ಬೆಳಕು ನೀಡಬೇಕಾದರೆ ಮಹಾನ್ ಪುರುಷರು, ದಾರ್ಶನಿಕರು, ಋಷಿ ಮುನಿಗಳು ಪ್ರವಾದಿಯವರು ಕೊಟ್ಟಿರುವ ಸಂದೇಶಗಳನ್ನು ಸರಿಯಾದ ರೀತಿಯಲ್ಲಿ ಬೋಧಿಸಿದಾಗ ಮಾತ್ರ ಮನುಷ್ಯ ನೆಮ್ಮದಿ ಜೀವನ ನಡೆಸುವುದಕ್ಕೆ ಮತ್ತು ಆರೋಗ್ಯಪೂರ್ಣ ಸಮಾಜವನ್ನು ಕಟ್ಟಲು ಸಾಧ್ಯವಿದೆ ಎಂದರು.

ಕಟೌಟ್ ಕಟ್ಟುವುದು, ಮೆರವಣಿಗೆ ಮಾಡುವುದು, ಗಲಾಟೆ ಮಾಡುವುದು ಧರ್ಮವಾಗಿ ಮಾರ್ಪಟ್ಟಿದೆ. ಧರ್ಮ ಎಂದರೆ ಮನಸ್ಸನ್ನು ಸಂಸ್ಕರಿಸಿ, ಅಂತರಂಗವನ್ನು ಸ್ವಚ್ಛಗೊಳಿಸಿ ಮನುಷ್ಯತ್ವವನ್ನು ಉದ್ದೀಪನಗೊಳಿಸುವುದಾಗಿದೆ. ಆಗಾಗಿ ಧರ್ಮದ ಆಚರಣೆ ಬಗ್ಗೆ ತಿಳಿಸುವ ಕೆಲಸವಾಗಬೇಕಾಗಿದೆ. ಇಂದು ಸಮಾಜದಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಮದ್ಯಪಾನ ಹೆಚ್ಚಾಗಿ ಶೇ. 80 ರಷ್ಟು ಕಲಹಗಳು ನಡೆಯುವುದಕ್ಕೆ ದಾರಿಯಾಗಿದೆ. ಇದರಿಂದ ಮನುಷ್ಯ ತನ್ನ ನೆಮ್ಮದಿ ಜೊತೆಗೆ ಆರ್ಥಿಕವಾಗಿ, ನೈತಿಕವಾಗಿ, ಶಾರೀರಕವಾಗಿ ನಾಶವಾಗು ತ್ತಿದ್ದು, ಅದನ್ನು ಸರಿ ದಾರಿಗೆ ತರುವ ಕೆಲಸವಾಗಬೇಕಾದರೆ ದಾರ್ಶನಿಕರ ಪ್ರವಾದಿ ಮುಹಮ್ಮದ್ ರವರ ಸಂದೇಶಗಳಿಂದ ಮಾತ್ರ ಸಾಧ್ಯವಿದೆ ಎಂದು ಹೇಳಿದರು. 

ಈ ವೇಳೆ ಶಾಸಕ ಬಿ.ಪಿ. ಹರೀಶ್, ಆರೋಗ್ಯ ಮಾತೆ ಚರ್ಚ್   ಫಾದರ್ ಜಾರ್ಜ್ ಕೆ.ವಿ., ಮಾಜಿ ಶಾಸಕ ಎಸ್. ರಾಮಪ್ಪ, ಕಾಂಗ್ರೆಸ್ ಪಕ್ಷದ ಮುಖಂಡ ನಂದಿಗಾವಿ ಶ್ರೀನಿವಾಸ್, ಡಾ, ನಬಿಸಾಬ್  ಮಾತನಾಡಿದರು.

ಈ ವೇಳೆ `ನನ್ನ ಅರಿವಿನ ಪ್ರವಾದಿ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. 

ಈ ಸಂದರ್ಭದಲ್ಲಿ ಎಂ. ನಾಗೇಂದ್ರಪ್ಪ, ಟಿ.ಜೆ. ಮುರುಗೇಶಪ್ಪ, ಪ್ರೊ ಎಸ್. ಎ. ಭಿಕ್ಷಾವರ್ತಿಮಠ್ , ಅಬ್ದುಲ್ ಲತೀಫ್, ಕೆ.ಕೆ. ಖುದ್ದೂಸ್, ಹೆಚ್.ಕೆ. ಕೊಟ್ರಪ್ಪ, ಎ.ರಿಯಾಜ್ ಆಹ್ಮದ್, ಮಹಮ್ಮದ್ ಫೈರೋಜ್, ರೆಹಮಾನ್ ಸಾಬ್, ಅತಾವುಲ್ಲಾ, ಎಂ. ಎಂ. ಪಾರೂಕ್, ಬಾಲರಾಜ್, ಪಿ.ಜೆ. ಮಹಾಂತೇಶ್, ಮನಸೂರ ಮದ್ದಿ, ಮುಜಾಮಿಲ್ಲ್ ಬಿಲ್ಲು, ಆಸೀಫ್ ಜುನೇದಿ, ಹಬೀಬ್ ಉಲ್ಲಾ, ಶಮೀರ್ ಅಲಾಂ, ಅಂಗಡಿ ಮಲ್ಲಿಕಾರ್ಜುನ, ಬಾಬಣ್ಣ, ಅಶ್ಪಾಕ್ ಆಹ್ಮದ್, ಡಾ ನಜೀಬ್ ಉಲ್ಲಾ  ಇತರರು ಹಾಜರಿದ್ದರು.

error: Content is protected !!