ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಆಶಯ
ದಾವಣಗೆರೆ, ಅ. 3- ಗಾಂಧೀಜಿ ಎನ್ನುವ ಹೆಸರೇ ಒಂದು ಬೆಳಕು. ಆ ಬೆಳಕು ಇಂದಿಗೂ ಮನುಕುಲವನ್ನು ಆದರ್ಶಪ್ರಾಯವಾಗಿ ಬೆಳಗುತ್ತಿದೆ. ಅವರ ಜೀವನ ಮತ್ತು ನೀಡಿದ ಸಂದೇಶಗಳನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ ಮತ್ತು ಅಪ್ಪಿಕೊಂಡಿದೆ. ಅವರ ಸಂದೇಶಗಳನ್ನು ಅನುಸರಿಸುವುದೇ ನಾವು ಅವರಿಗೆ ನೀಡುವ ಬಹುದೊಡ್ಡ ಗೌರವವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿನ್ನೆ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 154 ನೇ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ 119 ನೇ ಜಯಂತಿ ಆಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಹಿಂಸೆ, ಸರಳತೆ, ಸ್ವಚ್ಚತೆ, ಆದರ್ಶಮ ಯವಾದ ಜೀವನ, ಪ್ರಾಮಾಣಿಕತೆ, ಸತ್ಯದ ಪ್ರತಿಪಾದನೆ ಗಾಂಧೀಜಿಯವರ ಜೀವನದ ಉಸಿರಾಗಿದ್ದವು. ಹಾಗೆಯೇ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಸಹ ತಮ್ಮ ಪ್ರಾಮಾಣಿಕ, ಪರಿಶ್ರಮ, ಸ್ವಚ್ಛ ಆಡಳಿತದ ಮೂಲಕ ನಮ್ಮ ದೇಶವನ್ನು ಮುನ್ನಡೆಸಿದ್ದರು. ಅತ್ಯಂತ ಕಡು ಬಡತನದಲ್ಲಿ ಜನಿಸಿದ್ದರೂ ತಮ್ಮ ಛಲ, ಕಠಿಣ ಪರಿಶ್ರಮದ ಮೂಲಕ ದೇಶದ ಅತ್ಯುನ್ನತ ಹುದ್ದೆ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಿದರು.
ಅವರ ಆಡಳಿತಾವಧಿಯ ಸಂದರ್ಭದಲ್ಲಿ ದೇಶ ಹಸಿವು, ಬಡತನ, ಯುದ್ಧ ಮೊದಲಾದ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿತ್ತು. ಅದನ್ನೆಲ್ಲ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ ಕೀರ್ತಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರಿಗೆ ಸಲ್ಲುತ್ತದೆ ಎಂದು ವಾಮದೇವಪ್ಪ ಬಣ್ಣಿಸಿದರು.
ಯುವ ಕವಿ ಬಿ.ಎಂ.ಪ್ರವೀಣ್ ಬಿಳಸನೂರು ಮಹಾತ್ಮ ಗಾಂಧಿಯವರ ಬಗ್ಗೆ ಹಾಗೂ ವಿನೂತನ ಮಹಿಳಾ ಸಮಾಜದ ಸಹ ಕಾರ್ಯದರ್ಶಿ ಲತಾ ಸತೀಶ್ ಅವರು ಲಾಲ್ ಬಹದ್ದೂರ್ ಶಾಸ್ತ್ರಿಯವರ ಬಗ್ಗೆ ಉಪನ್ಯಾಸ ನೀಡಿದರು.
ಹಿರಿಯ ವೈದ್ಯ ಡಾ. ಜಿ.ಶಿವಲಿಂಗಪ್ಪ, ಜಿಲ್ಲಾ ಲಯನ್ಸ್ ಮಾಜಿ ರಾಜ್ಯಪಾಲ ಹೆಚ್.ಎನ್.ಶಿವಕುಮಾರ್, ವಿದ್ಯಾನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಹೆಚ್.ದೇವರಾಜ, ವಿನೂತನ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಚಂದ್ರಿಕಾ ಮಂಜುನಾಥ್ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ವಿನೂತನ ಮಹಿಳಾ ಸಮಾಜದ ಸದಸ್ಯೆಯರು ಸರ್ವ ಧರ್ಮ ಪ್ರಾರ್ಥನೆ ಮಾಡಿದರು.
ಸಮಾರಂಭದಲ್ಲಿ ಹಿರಿಯ ಸಾಹಿತಿ ಬಾ.ಮ. ಬಸವರಾಜಯ್ಯ, ಹಿರಿಯ ಕಲಾವಿದ ಎ. ಮಹಾಲಿಂಗಪ್ಪ, ಕಾರವಾರದ ಯಕ್ಷಗಾನ ಕಲಾವಿದರಾದ ಸುಮಂಗಲಾ ಹೆಗಡೆ, ಮಾಗನೂರು ಬಸಪ್ಪ ಪದವಿಪೂರ್ವ ಕಾಲೇಜಿನ ನಿರ್ದೇಶಕ ಕುಮಾರ್, ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರಾದ ಎನ್.ಎಸ್. ಸತ್ಯಭಾಮ ಮಂಜುನಾಥ್, ಭೈರವೇಶ್ವರ, ಕೊರಟಗೆರೆ ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ ವಂದಿಸಿದರು.