ದಾವಣಗೆರೆ, ಅ.1- ಜನರ ತಮ್ಮ ಜನ್ಮ ದಿನ, ಮದುವೆ, ವಾರ್ಷಿಕೋತ್ಸವದಂತಹ ಸಂದರ್ಭ ಗಳಲ್ಲಿ ರಕ್ತದಾನ ಮಾಡುವ ಮೂಲಕ ಸಮಾಜ ಮುಖಿ ಕಾರ್ಯ ನಿರ್ವಹಿಸಿ ಎಂದು ಹಿರಿಯ ಪತ್ರಕರ್ತ ಸಿದ್ದಯ್ಯ ಹಿರೇಮಠ ತಿಳಿಸಿದರು.
ನಗರದ ಅಮೃತಾನಂದಮಯಿ ಕಾಲೇಜಿನಲ್ಲಿ ಲೈಫ್ ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹದಿಂದ ಈಚೆಗೆ ಸ್ವಯಂ ಪ್ರೇರಿತ ರಕ್ತ ದಾನಿಗಳ ದಿನಾಚರಣೆ ಹಾಗೂ ಮಾತಾ ಅಮೃತಾ ನಂದಮಯಿಯವರ 70ನೇ ವರ್ಷದ ಜನ್ಮದಿನಾ ಚರಣೆ ಕಾರ್ಯಕ್ರಮದ ಅಂಗವಾಗಿ ನಡೆದ ರಕ್ತ ದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ-ಕಾಲೇಜುಗಳಲ್ಲಿ ರಕ್ತದಾನ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚೆಚ್ಚು ಮಾಡುವ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿ ಸುವ ಕೆಲಸಗಳು ನಡೆಯಲಿ ಎಂದು ಆಶಿಸಿದರು.
ಲೈಫ್ ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹದ ಉಪಾಧ್ಯಕ್ಷ ಪೃಥ್ವಿರಾಜ್ ಬಾದಾಮಿ ಮಾತನಾಡಿ, ನಮ್ಮ ಸಮೂಹ ಸಂಸ್ಥೆ ಹಲವಾರು ವರ್ಷಗಳಿಂದ ರಕ್ತದಾನ, ರಕ್ತದ ಗುಂಪು ತಪಾಸಣೆ ಸೇರಿದಂತೆ ಅನೇಕ ಆರೋಗ್ಯಕರ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ. ಆದ್ದರಿಂದ ಯುವ ಜನತೆ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಹೇಳಿದರು.
ಲೈಫ್ ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹದ ಕಾರ್ಯದರ್ಶಿ ಅನಿಲ್ ಬಾರೆಂಗಳ್ ಮಾತನಾಡಿ, ನಮ್ಮ ಸಂಸ್ಥೆ 1987ರಲ್ಲಿ ಕೇವಲ ಬೆರಳೆಣಿಕೆಯಷ್ಟು ಯುವಕರಿಂದ ಆರಂಭವಾದ ಈ ಸಂಸ್ಥೆ ಈಗ 3 ಸಾವಿರಕ್ಕೂ ಹೆಚ್ಚು ಜನರು ನಮ್ಮ ಸಂಸ್ಥೆಯಲ್ಲಿ ಸದಸ್ಯತ್ವ ಪಡೆದು ರಕ್ತದಾನ ಕಾರ್ಯದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ರಕ್ತದಾನ ಮಾಡುತ್ತಾ ಬಂದಿದ್ದಾರೆ. ಕಷ್ಟದಲ್ಲಿರುವವರಿಗೆ ರಕ್ತ ನೀಡುವುದರ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ರಕ್ತದಾನದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದೇವೆ ಎಂದರು.
ಬಾಪೂಜಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಜಗದೀಶ್ವರಿ ಮಕ್ಕಳಿಗೆ ರಕ್ತದಾನ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಅಮೃತಾನಂದಮಯಿ ಕಾಲೇಜಿನ ಪ್ರಾಚಾರ್ಯರಾದ ಪ್ರತಿಭಾ, ಉಪ ಪ್ರಾಚಾರ್ಯ ಪ್ರತೀಕ್, ಆಡಳಿತಾಧಿಕಾರಿ ನಂದೀಶ, ಲೈಫ್ ಲೈನ್ ಸಂಸ್ಥೆಯ ಗಾಯಕವಾಡ್ ಸಂತೋಷ್, ನಟರಾಜ, ಮಾಧವ ಪದಕಿ, ಗೋಪಾಲಕೃಷ್ಣ, ಮಾಧವಿ ಗೋಪಾಲಕೃಷ್ಣ, ರಾಜು ಭಂಡಾರಿ, ಡಾ.ಗೋವರ್ಧನ್, ಐಶ್ವರ್ಯ, ದೀನಮಣಿ, ದುರ್ಗಪ್ಪ ಮತ್ತಿತರರು ರಕ್ತದಾನ ಮಾಡಿದರು.