ಹೊನ್ನಾಳಿ ಕಾರ್ಯಕ್ರಮದಲ್ಲಿ ವಡ್ನಾಳ್ ಶ್ರೀ ವಿಶ್ವಕರ್ಮ ಮಹಾಸಂಸ್ಥಾನ ಸಾವಿತ್ರಿ ಪೀಠದ ಅಷ್ಟೋತ್ತರ ಶತಶ್ರೀ ಶಂಕರಾತ್ಮನಾಂದ ಸರಸ್ವತಿ ಸ್ವಾಮೀಜಿ ಕರೆ
ಹೊನ್ನಾಳಿ, ಸೆ. 29- ವಿಶ್ವಕರ್ಮ ಸಮಾಜದವರು ಜೀವನ ನಿರ್ವಹಣೆಗೆ ಪಂಚ ಕೆಲಸಗಳಲ್ಲಿ ತೊಡಗಿದವರಾಗಿದ್ದು, ತಾವೆಲ್ಲಾ ಒಂದೇ ಎಂಬ ವಿಶಾಲ ಭಾವನೆ ಹೊಂದಿ ಸದೃಢ ಸಂಘಟನೆಗೆ ಮುಂದಾಗಬೇಕಿದೆ ಎಂದು ಚನ್ನಗಿರಿ ತಾಲ್ಲೂಕು ವಡ್ನಾಳ್ ಶ್ರೀ ವಿಶ್ವಕರ್ಮ ಮಹಾಸಂಸ್ಥಾನ ಸಾವಿತ್ರಿ ಪೀಠದ ಅಷ್ಟೋತ್ತರ ಶತಶ್ರೀ ಶಂಕರಾತ್ಮನಾಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳ ವಿಶ್ವಕರ್ಮ ಸಮಾಜದ ವತಿಯಿಂದ ವಿಶ್ವಕರ್ಮ ಸಮುದಾಯ ಭವನದಲ್ಲಿ ಇಂದು ಆಯೋಜಿಸಿದ್ದ ವಿಶ್ವಕರ್ಮ ಮಹಾಸಂಸ್ಥಾನ ಶ್ರೀಗಳವರ 6 ನೇ ವರ್ಷದ ಚಾತುರ್ಮಾಸ ಸಿಮೋಲ್ಲಂಘನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ವಿಶ್ವಕರ್ಮ ಜಯಂತಿಯನ್ನು ಆರಂಭದಲ್ಲಿ ಸರ್ಕಾರಿ ಕಚೇರಿ, ಸ್ಥಳೀಯ ಸಂಸ್ಥೆಗಳು, ಇದೀಗ ಶಾಲಾ-ಕಾಲೇಜುಗಳಲ್ಲಿ ಆಚರಿಸಲು ವಿಸ್ತರಿಸಿದೆ. ಶಾಲೆಯಲ್ಲಿ ವಿಶ್ವಕರ್ಮ ಗುರುವಿನ ಭಾವಚಿತ್ರ ಇಲ್ಲವಾದಲ್ಲಿ ಅಲ್ಲಿನ ಸಮಾಜದವರೇ ಒಂದು ಫೋಟೋ ಕೊಡುವಂತೆ ಸಲಹೆ ನೀಡಿ, ಆದಿ-ಅಂತ್ಯ ಹಾಗೂ ಹುಟ್ಟು ಸಾವಿಲ್ಲದ ವಿಶ್ವಕರ್ಮ ಗುರುಗಳು ಯಜ್ಞದಲ್ಲಿ ಅವಿರ್ಭವಿಸಿದವರಾಗಿದ್ದು, ಜಯಂತಿ ಆಚರಣೆ ಬಗ್ಗೆ ಚರ್ಚೆ ಹಾಗೂ ಜಿಜ್ಞಾಸೆಯಲ್ಲಿದ್ದು ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಠದ ಹಿರಿಯ ಶ್ರೀಗಳಾದ ಶ್ರೀ ಚಂದ್ರಶೇಖರ ಸ್ವಾಮೀಜಿ ಶ್ರೀಮಠದಿಂದ ವಿಶ್ವಕರ್ಮ ಸಮಾಜಕ್ಕೆ ಸಮುದಾಯ ಭವನದ ನಿವೇಶನ ವನ್ನು ನೀಡಿದ್ದು, ಸಮಾಜವು ಇದನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಂಡಿದೆ. ಅದರಂತೆ ವಿಶ್ವಕರ್ಮ ಸ್ವಾಮೀಜಿಗಳು ಚಾತುರ್ಮಾಸದ ಸಿಮೋಲ್ಲಂಘನ ಮುಕ್ತಾಯದ ಶ್ರೇಷ್ಠ ಹಾಗೂ ಶಕ್ತಿಯುತವಾದ ಸಮಯದ ದಿನವನ್ನು ಹೊನ್ನಾಳಿಗೆ ಕೊಟ್ಟಿದ್ದಾರೆ. ಇದರ ಸಾಫಲ್ಯ ಹಾಗೂ ಸಾರ್ಥಕತೆ ಸಮಾಜದ ಬಂಧುಗಳು ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಡಿ.ಜಿ. ಶಾಂತನಗೌಡ, ಸಮುದಾಯ ಭವನಕ್ಕೆ ಅವಕಾಶವಿದ್ದಲ್ಲಿ ಹೆಚ್ಚಿನ ಹಣವನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ರಾಜಕಾರಣಿಗಳಿಗೆ ಖುರ್ಚಿ ಹಾಗೂ ಸ್ಥಾನಮಾನ ಶಾಶ್ವತವಲ್ಲದಿದ್ದರೂ, ಗುರುಗಳು ಹಾಗೂ ಪೀಠಕ್ಕೆ ಸ್ಥಾನಮಾನಗಳು ಶಾಶ್ವತ ಎಂದು ರಾಜಕಾರಣಿಗಳು ಹಾಗೂ ನಾಡಿನ ಸ್ವಾಮೀಜಿಗಳ ಬಗ್ಗೆ ಇರುವ ಸಾರ್ವಜನಿಕರ ಅಭಿಪ್ರಾಯವನ್ನು ಮಾರ್ಮಿಕವಾಗಿ ಹಂಚಿಕೊಂಡರು.
ವಿಶ್ವಕರ್ಮ ಗುರುಗಳ ಬಗ್ಗೆ ಶಿವಮೊಗ್ಗದ ಭಾಗ್ಯಲಕ್ಷ್ಮಿ ಅವರು ವಿಶೇಷ ಉಪನ್ಯಾಸ ನೀಡಿದರು. ಎ. ಪಾಲಾಕ್ಷಚಾರ್ ಅಧ್ಯಕ್ಷತೆ ವಹಿಸಿದ್ದರು.
ವಡ್ನಾಳ್ ಮಠದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಟಿ. ಮಹೇಂದ್ರಚಾರ್, ಶಿವಮೊಗ್ಗದ ವಿಶ್ವ ಬ್ರಾಹ್ಮಣದ ಜಿಲ್ಲಾ ಖಜಾಂಚಿ ಕೆ.ಬಿ. ಮಂಜಪ್ಪಚಾರ್, ಉದ್ಯಮಿ ಜೆ.ಎಲ್. ವಿಶ್ವೇಶ್ವಾಚಾರ್, ದಾವಣಗೆರೆ ಎ.ಜಿ. ರವಿ ಮಾತನಾಡಿದರು.
ಸಮಾಜದ ಸಹ ಕಾರ್ಯದರ್ಶಿ ಬೆನಕಪ್ಪಾಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ. ರುದ್ರಪ್ಪ ಸ್ವಾಗತಿಸಿದರು ಶಾರದ ಕಾರ್ಯಕ್ರಮ ನಿರೂಪಿಸಿದರು.