ಹೊನ್ನಾಳಿ ತಾಲ್ಲೂಕಿನ ಹುಣಸಘಟ್ಟದಲ್ಲಿನ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ. ಶಾಂತನಗೌಡ
ಹೊನ್ನಾಳಿ, ಸೆ. 27- ಸರ್ಕಾರದ ಸೌಲಭ್ಯಗಳನ್ನು ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೂ ತಲುಪಿಸುವ ನಿಟ್ಟಿನಲ್ಲಿ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ತಿಳಿಸಿದರು.
ತಾಲ್ಲೂಕಿನ ಹುಣಸಘಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳಲ್ಲಿ ಮೊದಲನೆಯ ಸ್ತ್ರೀ ಶಕ್ತಿ ಯೋಜನೆಯ ಪ್ರಯೋಜನವನ್ನು ಇದುವರೆಗೂ 2 ಕೋಟಿ ಮಹಿಳೆಯರು ಪಡೆದುಕೊಂಡಿದ್ದಾರೆ. ಗೃಹ ಜ್ಯೋತಿ ಯೋಜನೆಯಡಿ ನೋಂದಣಿಯಾದವರೆಲ್ಲ ರಿಗೂ ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ. ಅಕ್ಕಿ ಉಳಿದಂತೆ ಹಣವನ್ನು ಅವರವರ ಖಾತೆಗೆ ಜಮಾ ಮಾಡಲಾಗುತ್ತಿದೆ.
ಗೃಹ ಲಕ್ಷ್ಮಿ ಯೋಜನೆಯಡಿಯಲ್ಲೂ ಆಯಾ ಕುಟುಂಬದ ಯಜಮಾನಿಗೆ ತಲಾ 2000 ಹಣ ಜಮೆಯಾಗುತ್ತಿದೆ. ಗೃಹ ಲಕ್ಷ್ಮಿ ಯೋಜನೆಯಡಿ ಯಾರಿಗೆ ಇನ್ನೂ ಹಣ ಸಂದಾಯವಾಗಿಲ್ಲ ಅವರ ಪಟ್ಟಿಯನ್ನೂ ಸಂಗ್ರಹಿಸಿ ಅವರ ಖಾತೆಗಳಿಗೆ ಹಣ ಬಾರದಿರುವ ಕಾರಣ ಪತ್ತೆ ಹಚ್ಚಿ ಶೀಘ್ರದಲ್ಲೇ ಅವರ ಖಾತೆಗಳಿಗೂ ಹಣ ಸಂದಾಯ ಮಾಡುವ ವ್ಯವಸ್ಥೆ ಮಾಡಲಾಗುವುದು ಯಾರೂ ಈ ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದು ಭರವಸೆ ನೀಡಿದರು.
ಹಳ್ಳಿಗಳಲ್ಲಿನ ಸಾಕಷ್ಟು ಸಮಸ್ಯೆಗಳಿಗೆ ಅಧಿಕಾರಿಗಳು ಸಿಗುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದ್ದು, ರೈತ ಸಮುದಾಯ ಮೊದಲೇ ಬರಗಾಲದ ಛಾಯೆಯಿಂದ ನಲುಗಿ ಹೋಗಿದ್ದು, ಅಧಿಕಾರಿಗಳು ಯಾವುದೇ ಕಾರಣ ಹೇಳದೇ ಅವರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚಿಸಿದರು.
ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಮಾತನಾಡಿ, ಜನಸಾಮಾನ್ಯರ ಕೆಲಸಗಳನ್ನು ಅವರ ಮನೆ ಬಾಗಿಲಿಗೇ ತಲುಪಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಯಶಸ್ವಿಗೆ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದರು.
ತಹಶೀಲ್ದಾರ್ ಪಟ್ಟರಾಜೇಗೌಡ ಅವರು ಮಾತನಾಡಿ, ಜನತಾ ದರ್ಶನ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟಂತೆ ಒಟ್ಟು 95 ಅರ್ಜಿಗಳು ಬಂದಿದ್ದು, ಅವುಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಜರುಗಿಸಲಾಗುವುದು ಎಂದು ತಿಳಿಸಿದರು. ಸಿಡಿಪಿಒ ಇಲಾಖೆಯ ವತಿಯಿಂದ ಪೋಷಣ್ ಅಭಿಯಾನದಡಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಸಿಡಿಪಿಒ ಮಹಾಂತಸ್ವಾಮಿ ಪೂಜಾರ್ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯ್ತಿ ಇಒ ಎಚ್.ವಿ.ರಾಘವೇಂದ್ರ, ಸಮಾಜ ಕಲ್ಯಾಣಾಧಿಕಾರಿ ಎಚ್.ಎಲ್.ಉಮಾ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರತಿಮಾ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ರೇಖಾ, ಬಿಇಒ ಎಸ್.ಸಿ. ನಂಜರಾಜ್, ಅರಣ್ಯಾಧಿಕಾರಿ ಷಣ್ಮುಖ, ಉಪತಹಶೀಲ್ದಾರ್ ಚಂದ್ರಪ್ಪ, ಯುಟಿಪಿ ಎಇಇ ಕೆ.ಎನ್. ಮಂಜುನಾಥ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಂಜಿನಿಯರ್ ಸೋಮ್ಲಾನಾಯ್ಕ್, ಜಿ.ಪಂ. ಎಂಜಿನಿಯರ್ ಮೋತಿಲಾಲ್, ಜಿ.ಪಂ. ಮಾಜಿ ಅಧ್ಯಕ್ಷೆ ಶೀಲಾ ಗದ್ದಿಗೇಶ್, ಪಿಡಿಒ ಪರಮೇಶ್, ಎಸ್ಡಿಎಂಸಿ ತಾಲ್ಲೂಕು ಅಧ್ಯಕ್ಷ ಶಿವಲಿಂಗಪ್ಪ, ಗ್ರಾಪಂ ಅಧ್ಯಕ್ಷೆ ಶೃತಿ ವೀರೇಶ್, ಉಪಾಧ್ಯಕ್ಷೆ ರಹಮತ್ ಬೀ ಮತ್ತು ಗ್ರಾಪಂ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.