ಹರಿಹರ, ಸೆ. 27 – ವ್ಯಕ್ತಿತ್ವ ವಿಕಸನದ ಮೂಲ ಉದ್ದೇಶದೊಂದಿಗೆ ರಾಷ್ಟ್ರೀಯ ಸೇವಾ ಯೋಜನೆ ಪ್ರಾರಂಭಿಸಲಾಗಿದೆ ಎಂದು ಪ್ರಾಚಾರ್ಯ ಡಾ.ಗಂಗಾಧರಪ್ಪ ಹೇಳಿದರು.
ನಗರದ ಶ್ರೀಮತಿ ಗಿರಿಯಮ್ಮ ಆರ್.ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್. ಘಟಕಗಳು ಹಮ್ಮಿ ಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ 53ನೇ ದಿನಾಚರಣೆಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ದೆಸೆಯಿಂದಲೇ ದೇಶಭಕ್ತಿ, ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆಯ ಮೊದಲ ಘಟಕದ ಕಾರ್ಯಕ್ರಮ ಅಧಿ ಕಾರಿಗಳಾದ ಪ್ರೊ. ರೋಹಿಣಿ ಎಂ.ಶಿರ ಹಟ್ಟಿ ಮಾತನಾಡಿ, ರಾಷ್ಟ್ರದ ಅತಿದೊಡ್ಡ ಯುವ ಸಂಘಟನೆಯಾದ ಎನ್.ಎಸ್.ಎಸ್. ವಿಸ್ತಾರವಾಗಿ ಬೆಳೆದಿದೆ ಎಂದರು.
ಎನ್.ಎಸ್.ಎಸ್.ನ ಎರಡನೆಯ ಘಟಕದ ಕಾರ್ಯಕ್ರಮ ಅಧಿಕಾರಿ ಹೆಚ್.ಎಂ.ಗುರುಬಸವರಾಜಯ್ಯ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಕನಸಿನ ಕಲ್ಪನೆಯ ಕೂಸಾದ ರಾಮರಾಜ್ಯದ ಆಶಯದೊಂದಿಗೆ ಗಾಂಧೀಜಿಯವರ ಜನ್ಮ ದಿನೋತ್ಸವದ 100ನೇ ವರ್ಷದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯನ್ನು ಪ್ರಾರಂಭಿಸಲಾಯಿತು. ದೇಶದಲ್ಲಿ 35 ಲಕ್ಷ ವಿದ್ಯಾರ್ಥಿಗಳು ಎನ್.ಎಸ್.ಎಸ್. ಸ್ವಯಂ ಸೇವಕರಿದ್ದಾರೆ ಎಂದು ಹೇಳಿದರು.
ರಾಜ್ಯಶಾಸ್ತ್ರ ಉಪನ್ಯಾಸಕ ಹರೀಶ್ ಮಾತನಾಡಿ, ಒಬ್ಬ ವ್ಯಕ್ತಿಯಾಗಿ ಸಮಾಜಕ್ಕೆ ಯಾವ ರೀತಿಯ ಕೊಡುಗೆಯನ್ನು ಕೊಡಬೇಕು ಎಂಬುದನ್ನು ಎನ್.ಎಸ್.ಎಸ್. ಕಲಿಸುತ್ತದೆ ಎಂದರು. ಸಮಾಜಶಾಸ್ತ್ರ ಉಪನ್ಯಾಸಕ ಜಿ.ಪ್ರವೀಣ್ ಮಾತನಾಡಿ, ಪರಿಸರ ಕಾಳಜಿ ಹಾಗೂ ರಾಷ್ಟ್ರೀಯ ಭಾವೈಕ್ಯತೆಯನ್ನು ಎನ್.ಎಸ್.ಎಸ್. ನಮಗೆ ತಿಳಿಸುತ್ತದೆ ಎಂದರು. ಮಾಧುರಿ ಪಿ.ಹೆಚ್ ಹಾಗೂ ವೀಣಾ ಪ್ರಾರ್ಥಿಸಿದರು. ತೃಪ್ತಿ ಖಿರೋಜಿ ಸ್ವಾಗತಿಸಿದರು. ಖಾತುನ್ ಬಿ.ಹೆಚ್. ಲೋಹಾರ್ ಕಾರ್ಯಕ್ರಮ ನಿರ್ವಹಿಸಿದರು. ಅನುಷಾ ಸಿ.ಆರ್. ವಂದಿಸಿದರು.