ಆರೋಗ್ಯದತ್ತ ಇರಲಿ ವಿದ್ಯಾರ್ಥಿಗಳ ಚಿತ್ತ

ಆರೋಗ್ಯದತ್ತ ಇರಲಿ ವಿದ್ಯಾರ್ಥಿಗಳ ಚಿತ್ತ

ದವನ-ನೂತನ ಕಾಲೇಜಿನ ಕಾರ್ಯಕ್ರಮದಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ, ಸೆ. 26 – ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕಾದ ಅಗತ್ಯವಿದೆ. ಇಂದಿನ ಒತ್ತಡ ಮತ್ತು ಅತಿಯಾದ ಮೊಬೈಲ್ ಬಳಕೆಯಿಂದ ಅನೇಕರು ಅನಾರೋಗ್ಯಕ್ಕೆ ತುತ್ತಾಗು ತ್ತಿದ್ದಾರೆ. ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳುವಂತೆ ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯರೂ, ಎಸ್‌.ಎಸ್. ಕೇರ್ ಟ್ರಸ್ಟ್‌ನ ಆಜೀವ ಟ್ರಸ್ಟಿಯೂ ಆಗಿರುವ ಡಾ.ಪ್ರಭಾ ಮಲ್ಲಿಕಾರ್ಜುನ್ ಕಿವಿಮಾತು ಹೇಳಿದರು.

ನಗರದ ಬಾಪೂಜಿ ಸಮುದಾಯ ಭವನದಲ್ಲಿ ದವನ-ನೂತನ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಶೈಕ್ಷಣಿಕ ವರ್ಷದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ  ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎಸ್.ಎಸ್. ಕೇರ್ ಟ್ರಸ್ಟ್ `ಪ್ರತಿಜ್ಞಾ’ ರಕ್ತದಾನ ಜಾಗೃತಿ ಕಾರ್ಯಕ್ರಮದ ಮೂಲಕ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿ ಯುವ ಜನರಿಗೆ ರಕ್ತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುತ್ತಾ ಬಂದಿದೆ. ಅಪೌಷ್ಟಿಕತೆಯಿಂದ ನರಳುತ್ತಿರುವ ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ಇತರರಿಗೆ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ರಕ್ತದಾನದ ಅಗತ್ಯತೆ, ಪ್ರಯೋಜನಗಳು, ರಕ್ತದಾನದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ, ನೈಜ ಸಂಗತಿಗಳನ್ನು ತಿಳಿಸುವ ಉದ್ದೇಶವನ್ನು ಹೊಂದಲಾಗಿದೆ. ಯುವಕರಿಗೆ ಶಿಕ್ಷಣದ ಜೊತೆಗೆ ಆಜೀವ ರಕ್ತದಾನಿಗಳಾಗಲು ಪ್ರೇರೇಪಿಸಲಾಗುವುದು ಎಂದು ತಿಳಿಸಿದರು.

ಅಮೂಲ್ಯವಾದ ಒಂದು ಯೂನಿಟ್ ರಕ್ತದಿಂದ ನಾಲ್ಕು ಜೀವಗಳನ್ನು ಉಳಿಸಬಹುದು. ಯುವಜನರು ಸ್ವಯಂಪ್ರೇರಣೆಯಿಂದ ರಕ್ತದಾನಕ್ಕೆ ಮುಂದಾಗಬೇಕು. ವಿದ್ಯಾರ್ಥಿಗಳು ಸತತ ಪರಿಶ್ರಮ, ಪೋಷಕರ ಪ್ರೋತ್ಸಾಹ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿದೆ. ವಿದ್ಯಾಭ್ಯಾಸದ ಜೊತೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಹಿತ ನುಡಿದರು.

ದವನ – ನೂತನ ಕಾಲೇಜಿನ ಕಾರ್ಯದರ್ಶಿ ವೀರೇಶ್ ಪಟೇಲ್ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದ್ದು, ದಾವಣಗೆರೆ ವಿವಿಯಲ್ಲಿ ಅತಿ ಹೆಚ್ಚು
ರಾಂಕ್ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ನೂತನ ಎಜುಕೇಶನ್ ಅಸೋಸಿಯೇಷನ್ ಅಧ್ಯಕ್ಷ ಎನ್. ಪರಶುರಾಮನಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

 ದವನ್ ಕಾಲೇಜಿನ ಸಹ ಕಾರ್ಯದರ್ಶಿ ಜಿ.ಎಸ್. ಅಂಜು ರಾಂಕ್ ವಿಜೇತ  ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು. ನಿರ್ದೇಶಕ ಹರ್ಷರಾಜ್ ಎ. ಗುಜ್ಜರ್, ಖಜಾಂಚಿ ವಾಣಿ ಮಠಪತಿ, ಉಪ ಪ್ರಾಂಶುಪಾಲರಾದ ಎನ್. ಅನಿತಾ , ಪ್ರೊ. ಕೆ.ಕೊಟ್ರಪ್ಪ ಹಾಗೂ ಬಂಗಾರದ ಪದಕಕ್ಕೆ ಪಾತ್ರರಾದ ಹನ್ನೊಂದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಆರ್.ವೈ. ಶಿಲ್ಪಾ ಸ್ವಾಗತಿಸಿದರು. ಬಿ.ಕೆ. ಕರೀಷ್ಮಾ, ಎಸ್. ನಯನ ನಿರೂಪಿಸಿದರು. ಸಿರಾಜ್‌ ಉನ್ನೀಸಾ ವಂದಿಸಿದರು. ಎಂ. ಗೌರಿ ಮತ್ತು ತಂಡದವರು ಭರತ ನಾಟ್ಯ ಪ್ರದರ್ಶಿಸಿದರು.

error: Content is protected !!