ಹರಿಹರದ ಕಾರ್ಯಕ್ರಮದಲ್ಲಿ ಸಂಸದ ಸಿದ್ದೇಶ್ವರ
ಹರಿಹರ, ಸೆ. 26 – ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ವಿಚಾರಗಳಿಂದ ಪ್ರಪಂಚದ ಗಮನವೆಲ್ಲ ಭಾರತದತ್ತ ಸೆಳೆದಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ನಗರದ ಗುರುಭವನದ ಸಭಾಂಗಣದಲ್ಲಿ ಕೇಂದ್ರ ಸಂವಹನ ಇಲಾಖೆ (ಶಿವಮೊಗ್ಗ), ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (ಹರಿಹರ), ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆ (ದಾವಣಗೆರೆ) ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಪೋಷಣ ಮಾಸ, ಛಾಯಾಚಿತ್ರ ಪ್ರದರ್ಶನ ಹಾಗೂ ಕೇಂದ್ರ ಸರ್ಕಾರದ 9 ವರ್ಷಗಳ ಸಾಧನೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಪ್ರಪಂಚದ 5ನೇ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಬೆಳೆದಿದೆ. ದೇಶದ ಬೆನ್ನುಲುಬಾಗಿರುವ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ, ಕೃಷಿ ಯೋಜನೆ, ಕಾಶ್ಮೀರ ವಿಧಿ 375 ರದ್ಧತಿ, ತ್ರಿವಳಿ ತಲಾಕ್ ರದ್ದು, ಅಯೋಧ್ಯೆ ರಾಮ ಮಂದಿರ ನಿರ್ಮಾಣ, ನೂತನ ಸಂಸತ್ ಭವನ ಹೀಗೆ ಹಲವಾರು ಯೋಜನೆಗಳ ಮೂಲಕ ಭಾರತದ ಸರ್ವತೋಮುಖ ಬೆಳವಣಿಗೆಯಾಗುತ್ತಿದೆ ಎಂದವರು ಹೇಳಿದರು.
ಮಹಿಳೆಯರಿಗೆ ಶಾಸನ ಸಭೆಗಳಲ್ಲಿ ಶೇ. 33ರಷ್ಟು ಮೀಸಲಾತಿ, ಬಿಪಿಎಲ್ ಕಾರ್ಡ್‌ದಾರರಿಗೆ ಆಯುಷ್ಮಾನ್ ಯೋಜನೆಯಲ್ಲಿ ಉಚಿತ 5 ಲಕ್ಷದವರೆಗೆ ವ್ಯೆದ್ಯಕೀಯ ಸೇವೆ, ಜಲಜೀವನ್, ಸ್ವ-ನಿಧಿ ಯೋಜನೆ ಹೀಗೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಕೆಲವು ವರ್ಷಗಳಲ್ಲಿ ಪ್ರಪಂಚದಲ್ಲಿಯೇ ಭಾರತ ದೊಡ್ಡಣ್ಣ ಎನಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಸಂಸದರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಕೇಂದ್ರ ಸರ್ಕಾರ ಬೇಟಿ ಪಡಾವೋ, ಬೇಟಿ ಬಚಾವೋ, ಮಾತೃವಂದನ ಮುಂತಾದ ಯೋಜನೆಗಳಿಂದ ಮಹಿಳೆಯರಿಗೆ ನೆರವಾಗುತ್ತಿದೆ ಎಂದರು.
ಈ ವೇಳೆ ಗರ್ಭಿಣಿಯರು ಹೇಗಿರಬೇಕು ಮತ್ತು ಬಾಣಂತಿಯರು ಮಕ್ಕಳ ಹಾರೈಕೆ ಹೇಗೆ ಮಾಡಬೇಕೆಂಬ ಬಗ್ಗೆ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ನಿಂಬಕ್ಕ ಚಂದಪೂರ್, ಸದಸ್ಯೆ ಅಶ್ವಿನಿ ಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಹನುಮಂತಪ್ಪ, ಕೇಂದ್ರ ಸಂವಹನ ಇಲಾಖೆ ಅಧಿಕಾರಿ ಅಕ್ಷತಾ ಸಿ. ಹೆಚ್., ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ. ಪೂರ್ಣಿಮಾ, ಲಕ್ಷ್ಮೀ ಕಾಂತ್ ಶಿವಮೊಗ್ಗ, ಮೇಲ್ವಿಚಾರಕರಾದ ಮಂಜುಳಾ, ಶೈಲಾ ಮೈದುರು, ಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.