ದಾವಣಗೆರೆ, ಸೆ. 26- ಭದ್ರಾ ಬಲದಂಡೆ ನಾಲೆಯಲ್ಲಿ ಆನ್ ಅಂಡ್ ಆಫ್ ಮಾಡದೆ ಸತತವಾಗಿ ಒಟ್ಟು 100 ದಿವಸ ನೀರು ಹರಿಸುವಂತೆ ಭದ್ರಾ ಯೋಜನಾ ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಳದ ಅಧ್ಯಕ್ಷ ವೈ. ದ್ಯಾವಪ್ಪರೆಡ್ಡಿ ಮತ್ತು ಮಲೇಬೆನ್ನೂರಿನ ರೈತ ಮುಖಂಡ ಮುದೇಗೌಡ್ರ ತಿಪ್ಪೇಶ್ ಒತ್ತಾಯಿಸಿದ್ದಾರೆ.
ಮುಂದೆ ಭತ್ತದ ಬೆಳೆ ಕಾಳು ಕಟ್ಟುವ ಹಂತ ಇರುವುದರಿಂದ ನಾಲೆಯಲ್ಲಿ ಮತ್ತೆ 10 ದಿನ ನೀರು ನಿಲ್ಲಿಸಿದರೆ ರೈತರಿಗೆ ಬಹಳ ತೊಂದರೆ ಆಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಏತನ್ಮಧ್ಯೆ ಯಲವಟ್ಟಿಯ ಡಿ.ಹೆಚ್. ಚನ್ನಬಸಪ್ಪ, ಡಿ. ಹೆಚ್. ಮಹೇಂದ್ರಪ್ಪ, ಹೆಚ್. ಶಾಂತವೀರಪ್ಪ, ಕೆ. ಚನ್ನಬಸಪ್ಪ, ಎಂ. ಸಿದ್ದೇಶ್, ಹೊಳೆಸಿರಿಗೆರೆಯ ಎಂ. ಪ್ರಭು ಮತ್ತಿತರೆ ರೈತರು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ಭದ್ರಾ ಬಲದಂಡೆ ನಾಲೆಯಲ್ಲಿ ಇನ್ಮುಂದೆ ಆಫ್ – ಆನ್ ಪದ್ಧತಿ ಮಾಡದೇ ಸತತವಾಗಿ ನೀರು ಹರಿಸುವಂತೆ ಮನವಿ ಮಾಡಿದ್ದಾರೆ. ರೈತರ ಮನವಿಗೆ ಸ್ಪಂದಿಸಿದ ಮಲ್ಲಿಕಾರ್ಜುನ್ ಅವರು ಈ ಬಗ್ಗೆ ಮುಂದೆ ನಡೆಯುವ ಭದ್ರಾ ಐಸಿಸಿ ಸಭೆಯಲ್ಲಿ ನಾವೆಲ್ಲರೂ ಸೇರಿ ಒತ್ತಾಯಿಸುತ್ತೇವೆ ಎಂದು ಭರವಸೆ ನೀಡಿದರು.