ಕ್ರೀಡೆಯಲ್ಲಿ ಪಾಲ್ಗೊಳ್ಳಿ, ಕ್ರಿಯಾಶೀಲರಾಗಿರಿ

ಕ್ರೀಡೆಯಲ್ಲಿ ಪಾಲ್ಗೊಳ್ಳಿ, ಕ್ರಿಯಾಶೀಲರಾಗಿರಿ

ಹಿರಿಯ ನಾಗರಿಕರಿಗೆ ನ್ಯಾ. ಮಹಾವೀರ ಮ.ಕರೆಣ್ಣನವರ ಕರೆ

ದಾವಣಗೆರೆ, ಸೆ.25- ಹಿರಿಯ ನಾಗರಿಕರು ವಯಸ್ಸಾಗಿದೆ ಎಂದು ಮುಜುಗರ ಪಡದೇ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಕ್ರಿಯಾಶೀಲರಾಗಿರ ಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಮ. ಕರೆಣ್ಣವರ ಕರೆ ನೀಡಿದರು.

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಭಾನುವಾರ ನಗರದ ಎಂಸಿಸಿ `ಬಿ’ ಬ್ಲಾಕ್‌ನಲ್ಲಿರುವ ಬಾಪೂಜಿ ಶಾಲೆ ಆವರಣದಲ್ಲಿ  ಹಿರಿಯ ನಾಗರಿಕರಿಗೆ ಹಮ್ಮಿಕೊಂಡಿದ್ದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಿರಿಯ ನಾಗರಿಕರ ಜೀವನಾನುಭವದಿಂದ ಸಮಾಜಕ್ಕೆ ಹಲವು ಪ್ರಯೋಜನಗಳು ಆಗಲಿವೆ. ಸಮಾಜಕ್ಕೆ ಹಿರಿಯ ನಾಗರಿಕರ ಮಾರ್ಗದರ್ಶನ ಅತ್ಯಗತ್ಯವಾಗಿದ್ದು, ಹಿರಿಯರು ಆರೋಗ್ಯದಿಂದ ಇದ್ದು ದೀರ್ಘಾಯುಷ್ಯ ಹೊಂದಿದರೆ ಅವರ ಅನುಭವದಿಂದ ಕುಟುಂಬ, ಸಮಾಜ ಹಾಗೂ ಸರ್ಕಾರಕ್ಕೆ ಅನುಕೂಲವಾಗಲಿದೆ ಎಂದರು.

ಹಿರಿಯ ನಾಗರಿಕರ ಬಗ್ಗೆ ಕಾಳಜಿ ವಹಿಸುವ ಉದ್ದೇಶದಿಂದ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 60 ವರ್ಷ ಮೇಲ್ಪಟ್ಟ ಎಷ್ಟು ಮಂದಿ ಹಿರಿಯ ನಾಗರಿಕರಿದ್ದಾರೆ ಎಂದು ಠಾಣೆ ಪೊಲೀಸ್ ಸಿಬ್ಬಂದಿ ಪಟ್ಟಿ ಮಾಡಬೇಕು. ಆಗಿಂದಾಗ್ಗೆ ಅವರ ಮನೆಗಳಿಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಬೇಕು. ನಿಯಮಿತವಾಗಿ ಹಿರಿಯ ನಾಗರಿಕರ ಸಭೆ ನಡೆಸಬೇಕು ಎಂಬ ಜವಾಬ್ದಾರಿ ನೀಡಲಾಗಿದೆ. ಇದರೊಂದಿಗೆ ಕಾನೂನು ಸಲಹಾ ಸಮಿತಿಯಿಂದ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಹಿರಿಯ ನಾಗರಿಕರಿಗೆ ಉಚಿತವಾಗಿ ಕಾನೂನು ಸಲಹೆ ನೀಡಲಾಗುತ್ತದೆ ಎಂದು ನ್ಯಾ. ಕರೆಣ್ಣವರ ತಿಳಿಸಿದರು.

ಜಿಲ್ಲಾ ಹಿರಿಯ ನಾಗರಿಕರ ಸಂಘದ ಗೌರವ ಕಾರ್ಯದರ್ಶಿ ಎಸ್. ಗುರುಮೂರ್ತಿ ಮಾತನಾಡಿ,  ಹಿರಿಯ ನಾಗರಿಕರು ಇಂದು ಕೌಟುಂಬಿಕವಾಗಿ ಹಲವು ಸಮಸ್ಯೆ ಎದುರಿಸುತ್ತಿದ್ದೇವೆ. ಆದರೆ, ಮನೆಯಲ್ಲಿ ಮಗ, ಸೊಸೆ, ಮೊಮ್ಮಕ್ಕಳ ಜತೆ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಅನಿವಾರ್ಯವಾಗಿದೆ ಎಂದರು.

ನಾವು ನಮ್ಮ ಮಕ್ಕಳು, ಮೊಮ್ಮಕ್ಕಳ ಜನ್ಮ ದಿನವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಅದರಂತೆ, ಹಿರಿಯ ನಾಗರಿಕರ ದಿನವನ್ನು ನಮ್ಮ ಮಕ್ಕಳು, ಮೊಮ್ಮಕ್ಕಳೇ ಆಚರಿಸಬೇಕು. ಆದರೆ, ಆ ಕೆಲಸ ಆಗದ ಕಾರಣ ನಮ್ಮ ದಿನವನ್ನು ನಾವೇ ಆಚರಿಸಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ವಿಷಾದಿಸಿದರು. ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಕೆ.ಕೆ. ಪ್ರಕಾಶ್, ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಜಿ. ಭರತ್‌ರಾಜ್ ಇತರರಿದ್ದರು.

error: Content is protected !!