ಬಾಪೂಜಿ ಬ್ಯಾಂಕ್‌ : ಲಾಭದ ಕಡೆ ಹೆಚ್ಚಿನ ಶಾಖೆಗಳು

ಬಾಪೂಜಿ ಬ್ಯಾಂಕ್‌ : ಲಾಭದ ಕಡೆ ಹೆಚ್ಚಿನ ಶಾಖೆಗಳು

8.75 ಕೋಟಿ ರೂ. ನಿವ್ವಳ ಲಾಭ  ಷೇರುದಾರರಿಗೆ ಶೇ.18  ಡಿವಿಡೆಂಡ್

ಬ್ಯಾಂಕಿನ 54ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಸ್ಸೆಸ್

ದಾವಣಗೆರೆ, ಸೆ.17- ಈ ವರ್ಷವೂ ಸಹ ಬಾಪೂಜಿ ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಸಾಗಿದ್ದು, ಸದಸ್ಯರ ಸಂಖ್ಯೆ, ಷೇರು ಬಂಡವಾಳ, ಆಪದ್ಧನ ನಿಧಿ, ಠೇವಣಿಗಳು ಹೆಚ್ಚಿದ್ದು, ನಿವ್ವಳ ಲಾಭವೂ ಕೂಡ ಹೆಚ್ಚಾಗಿದೆ. ಸದಸ್ಯರಿಗೆ ಶೇ. 18 ಲಾಭಾಂಶ ನೀಡಲು ನಿರ್ಧರಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷರೂ ಆದ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು. 

ನಗರದ ಬಾಪೂಜಿ ಕೋ-ಆಪರೇಟಿವ್ ಬ್ಯಾಂಕ್‌ನ 54ನೇ ವಾರ್ಷಿಕ ಸಾಮಾನ್ಯ ಸಭೆ ಇಂದು ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಜರುಗಿತು, ಸಭೆಯ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು. 

ಬ್ಯಾಂಕ್ ಒಟ್ಟಾರೆ 14.43 ಕೋಟಿ ಲಾಭ ಗಳಿಸಿದ್ದು, ಆದಾಯ ತೆರಿಗೆ, ಇತರೆ ಅವಕಾಶಗಳನ್ನು ಕಳೆದು 8.75 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದರು.

ನಗರದ ಇತರೆ ಸಹಕಾರಿ ಬ್ಯಾಂಕುಗಳು ತಮ್ಮ ಸದಸ್ಯರಿಗೆ ಶೇ. 12 ರಿಂದ 15 ಡಿವಿಡೆಂಡ್ ನೀಡುತ್ತಿವೆ. ಆದರೆ ನಾವು ಪ್ರತಿ ವರ್ಷವೂ ಶೇ. 18 ಡಿವಿಡೆಂಡ್ ನೀಡುತ್ತಿದ್ದು,  ಈ ಬಾರಿಯೂ ಸಹ ಶೇ. 18 ಡಿವಿಡೆಂಡ್  ನೀಡಲು ಬ್ಯಾಂಕಿನ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.  

ತಮ್ಮ ಬ್ಯಾಂಕ್ ಈ ಬಾರಿಯೂ `ಎ’ ಶ್ರೇಣಿಯಲ್ಲಿ ಮುಂದುವರೆದಿದ್ದು, ಬ್ಯಾಂಕ್‌ನ ಸದಸ್ಯರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವಲ್ಲಿ ಹೊಸ ಶಾಖೆಗಳನ್ನು ಆರಂಭಿಸಬೇಕಾಗಿದೆ. ನಮ್ಮಲ್ಲಿರುವ ಠೇವಣಿ ಹಣದ ಅರ್ಧದಷ್ಟು ಸಹ ಸಾಲವನ್ನು ನೀಡಲಾಗಿರುವುದಿಲ್ಲ. ಹಾಗಾಗಿ ಲಾಭದಾಯಕವಾಗುವ ಕಡೆ, ಶಾಖೆಗಳನ್ನು ಆರಂಭಿಸಿ ಹೆಚ್ಚಿನ ಲಾಭ ಗಳಿಸಿ, ಷೇರುದಾರರಿಗೆ ಶೇಕಡ 24 ರಷ್ಟು ಲಾಭಾಂಶ  ಕೊಡುವಲ್ಲಿ ಮುಂದಾಗಬೇಕಿದೆ ಎಂದು ಹೇಳಿದರು.

ಸಣ್ಣ ಪುಟ್ಟ ಬ್ಯಾಂಕ್‌ಗಳು ಸಹ 15 ರಿಂದ 20 ಕೋಟಿ ಲಾಭ ಗಳಿಸುತ್ತಿವೆ. ಆದ್ದರಿಂದ ನಮ್ಮ ಬ್ಯಾಂಕ್ ಸಹ ಬರುವ ವರ್ಷ 15 ಕೋಟಿಗಿಂತ ಹೆಚ್ಚಿನ ಲಾಭ ಗಳಿಸುವ ಗುರಿ ಹೊಂದಬೇಕು ಎಂದು ಬ್ಯಾಂಕ್‌ನ ಸಿಬ್ಬಂದಿ ವರ್ಗದವರಿಗೆ ತಾಕೀತು ಮಾಡಿ ದರು. ಸರಿಯಾಗಿ ಕೆಲಸ ಮಾಡದ ಸಿಬ್ಬಂದಿ ವರ್ಗದವರ ಮೇಲೆ ಕೋಪಗೊಂಡ ಶಿವಶಂಕರಪ್ಪನವರು, ಅಂತವರನ್ನು ಅಮಾನತ್ತು ಮಾಡುವ, ಇಲ್ಲವೇ ಕೆಲಸದಿಂದ ತೆಗೆಯುವುದಾಗಿ ಎಚ್ಚರಿಸಿದರು.

ಬ್ಯಾಂಕಿನ ಹಿರಿಯ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ ಅವರು 2022-23 ನೇ ಸಾಲಿನ ವಾರ್ಷಿಕ ವರದಿ ಮಂಡಿಸಿ, ಮಹಾಸಭೆಯ ಒಪ್ಪಿಗೆ ಪಡೆದರು. ರಾಜ್ಯದ ಉನ್ನತ ಮಟ್ಟದ ಕೆಲವೇ ಸಹಕಾರಿ ಪಟ್ಟಣ ಬ್ಯಾಂಕುಗಳಲ್ಲಿ ನಮ್ಮ ಬ್ಯಾಂಕ್ ಉನ್ನತ  ಸ್ಥಾನವನ್ನು ಹೊಂದಿದೆ. ಇದನ್ನು ಬ್ಯಾಂಕಿನ ಸದಸ್ಯರು ಅಂಕಿ-ಅಂಶಗಳಿಂದ ತಿಳಿದುಕೊಳ್ಳಬಹುದು ಎಂದು ವಿವರಿಸಿದರು.

ಬ್ಯಾಂಕಿನ ಹಿರಿಯ ನಿರ್ದೇಶಕ ಎ.ಎಸ್. ವೀರಣ್ಣ ಮಾತನಾಡಿ, ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಉನ್ನತಿ ಸಾಧಿಸುತ್ತಿದ್ದು, 1970 ರಿಂದ ಇಲ್ಲಿಯವರೆಗೆ ಆರಂಭದಲ್ಲಿ ಶೇ. 6.25 ಲಾಭಾಂಶ ನೀಡಿದ್ದ ಬ್ಯಾಂಕು, ಈಗ ಶೇ. 18 ಲಾಭಾಂಶ ನೀಡುವಷ್ಟು  ಪ್ರಗತಿ ಸಾಧಿಸಿದೆ ಎಂದು ಹೇಳಿದರು. ಜಾಮೀನು ದಾರರಿಗೆ ಕಿವಿಮಾತು ಹೇಳಿದ ಅವರು, ಸಾಲಗಾರರಷ್ಟೇ ಜಾಮೀನುದಾರರು ಸಹ ಸಾಲದ ಹಣಕ್ಕೆ ಜವಾಬ್ದಾರರಾಗಿದ್ದು,  ಜಾಮೀನು ಸಹಿ ಹಾಕುವಾಗ ಸಾಲ ಪಡೆಯುವವನ ಆರ್ಥಿಕ ಪರಿಸ್ಥಿತಿ, ಉದ್ಧೇಶ ನೋಡಬೇಕು ಎಂದು ಹೇಳಿದರು.

ಬ್ಯಾಂಕಿನ ಮತ್ತೋರ್ವ ಹಿರಿಯ ನಿರ್ದೇಶಕ ಡಾ. ಬಿ.ಎಸ್. ರೆಡ್ಡಿ ಮಾತನಾಡಿ, ಬಾಪೂಜಿ ಬ್ಯಾಂಕ್ ಆರ್‌ಬಿಐ ಮಾರ್ಗದರ್ಶನದಂತೆ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದೆ. ಎಲ್ಲಾ ವರ್ಗದವರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೇ,  ಶೀಘ್ರವಾಗಿ ಸಾಲವನ್ನು ಮಂಜೂರು ಮಾಡಲಾಗುತ್ತಿದೆ ಎಂದು ಹೇಳಿದರು.

ಬ್ಯಾಂಕಿನ ಉಪಾಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್, ಆಡಳಿತ ಮಂಡಳಿ ನಿರ್ದೇಶಕರಾದ ಡಾ. ಷಂಶಾದ್ ಬೇಗಂ, ಡಾ.ಹೆಚ್. ಶಿವಪ್ಪ, ಡಾ. ಬಿ.ಪೂರ್ಣಿಮಾ, ಡಾ. ಕೆ. ಹನುಮಂತಪ್ಪ, ಡಾ.ಎ.ಅರುಣ್ ಕುಮಾರ್, ಡಾ.ಸಿ. ವೈ. ಸುದರ್ಶನ್, ಡಾ.ಎಂ.ಎಂ. ಲಿಂಗರಾಜ್, ಕೆ. ಬೊಮ್ಮಣ್ಣ, ಕೆ.ಎಸ್. ವೀರೇಶ್, ವ್ಯವಸ್ಥಾಪನಾ ಮಂಡಳಿ  ಸದಸ್ಯರಾದ ಜೆ. ಅನಿತಾ ಕುಮಾರಿ ಮತ್ತು ಪ್ರಧಾನ ವ್ಯವಸ್ಥಾಪಕ ಎಂ. ಬಸವರಾಜ್‌ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ವಯೋ ನಿವೃತ್ತಿ ಹೊಂದಿದ ಜಿ.ವಿ.ಶಿವಶಂಕರ್, ಡಿ.ಜಿ. ರವಿಶಂಕರ್ ಮತ್ತು ಎಸ್. ಬಿ. ಪ್ರಕಾಶ್ ಅವರುಗಳನ್ನು  ಸನ್ಮಾನಿಸಲಾಯಿತು.

ವಚನಾಮೃತ ಬಳಗ ಪ್ರಾರ್ಥನೆ ಗೀತೆ ಹಾಡಿತು. ನಿರ್ದೇಶಕರಾದ ಶಶಿಕಲಾ ಕೃಷ್ಣಮೂರ್ತಿ ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿ ನಿರ್ದೇಶಕ ಜಿ.ಎಸ್. ಯತೀಶ್ ವಂದಿಸಿದರು. ಬ್ಯಾಂಕಿನ ಅಧಿಕಾರಿಗಳಾದ ಎಂ.ಬಿ. ಕೊಟ್ರೇಶ್ ಮತ್ತು ಹೆಚ್.ಸಿ. ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.

ಬ್ಯಾಂಕಿನ ಹಿರಿಯ ಸಲಹೆಗಾರರಾದ ಡಿ.ವಿ.ರವೀಂದ್ರ, ಎಸ್. ಕಲ್ಲಪ್ಪ, ಜಿ.ವಿ. ಶಿವಶಂಕರ್, ಶಾಖಾ ವ್ಯವಸ್ಥಾಪಕರಾದ ಬಿ.ಜಿ. ಬಸವರಾಜಪ್ಪ, ಶೋಭಾ ಪಾಟೀಲ್, ಕೆ.ಎಂ. ಲಿಂಗೇಶ್, ಎಂ.ಎಸ್. ಪ್ರಸನ್ನ, ಡಿ.ಎಚ್. ಕಲಾ, ಎಚ್‌.ಜಿ.ಜಗದೀಶ್, ಟಿ. ರೇವಣಪ್ಪ, ಎಸ್. ಚಂದ್ರಶೇಖರ್, ಎಸ್. ರಮೇಶ್ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

error: Content is protected !!