ಉತ್ತಮ ಆರೋಗ್ಯವಂತರು ನಿಜವಾದ ಶ್ರೀಮಂತರು

ಉತ್ತಮ ಆರೋಗ್ಯವಂತರು ನಿಜವಾದ ಶ್ರೀಮಂತರು

ಜಗಳೂರು, ಸೆ. 13- ಕಾರು, ಬಂಗಲೆ, ಆಸ್ತಿ, ಐಶ್ವರ್ಯ ಇರುವವರು ಮಾತ್ರ ಶ್ರೀಮಂತ ರಲ್ಲ. ಉತ್ತಮ ಆರೋಗ್ಯ ಹೊಂದಿರುವವರೇ ಇಂದು ನಿಜವಾದ ಶ್ರೀಮಂತರು ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.

 ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಬುಧವಾರ ಭಾರತ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭವ ಅಭಿಯಾನ ಎಂಬ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಣ್ಣಿಗೆ ಕಾಣುವ ದೇವರು ಎಂದು ರೋಗಿಗಳು ನಂಬಿಕೆ ಇಟ್ಟಿರುವುದು ವೈದ್ಯರಿಗೆ ಮಾತ್ರ. ಅಲ್ಲದೆ ಸಾವಿನಿಂದ ಅಮೃತದೆಡೆಗೆ ಕೊಂಡೊಯ್ಯುವುದು ಆರೋಗ್ಯ ಸೇವೆ ನೀಡುವ ಸಿಬ್ಬಂದಿಗಳಿಂದ ಮಾತ್ರ ಸಾಧ್ಯ ಎಂದರು.

ಸರ್ಕಾರದಿಂದ ಆಯುಷ್ಮಾನುಭವ ಎಂಬ ಆರೋಗ್ಯ ಸೇವೆ ನೀಡುತ್ತಿದ್ದು, ಈ ಯೋಜನೆ ಅಗತ್ಯವಾದವರಿಗೆ ತಲುಪಿಸುವ ಕಾರ್ಯ ಯಶಸ್ವಿಯಾಗಿಸಿ ಎಂದು ಆರೋಗ್ಯ ಇಲಾಖೆಯವರಿಗೆ ಸೂಚಿಸಿದರು.

ಅರ್ಥ ರೇಖೆ ಎಷ್ಟಿದ್ದರೆನು.? ಆರೋಗ್ಯ ರೇಖೆ ಇಲ್ಲದ ಮೇಲೆ ಎಂಬ ವಾಕ್ಯದಂತೆ ಹಣ ಕಳೆದುಕೊಂಡರೆ ಇನ್ನೊಂದು ರೂಪದಲ್ಲಿ ದುಡಿಯ ಬಹುದು, ಗಳಿಸಬಹುದು ಆದರೆ ಆರೋಗ್ಯ ಕಳೆದುಕೊಂಡರೆ ಮತ್ತೆ ಗಳಿಸಲಾಗದು ಎಂದರು.

ರೋಗಿಯು ಗುಣಮುಖವಾಗಬೇಕಾದರೆ ವೈದ್ಯರ ನಗು ಮುಖದಲ್ಲಿ ಇರಬೇಕು. ತಾಯಿ ಬಿಟ್ಟರೆ ರೋಗಿಯನ್ನು ವೈದ್ಯ ಮಾತ್ರ ತಾಯಿಯಂತೆ ಆರೈಕೆ ಮಾಡುತ್ತಾನೆ. ಅಲ್ಲದೆ ಅತಂರಂಗದಲ್ಲಿ ಮಿಡಿಯುವ ಹೃದಯ ವೈದ್ಯರಿಗಿದೆ ಎಂದು ಹೇಳಿದರು.

ಅಪಘಾತ ಸಂದರ್ಭದಲ್ಲಿ ಹಾಗೂ ಅನೀರಿಕ್ಷಿತವಾಗಿ ಸಾವಿನ ನಂತರ ಪೋಸ್ಟ್ ಮಾರ್ಟಮ್ ಮಾಡಿಸುವವರಿಗೆ ಅನುಕೂಲವಾಗುವುದಕ್ಕೆ ಒಂದು ವಾಹನ ಹಾಗೂ ಮುಕ್ತಿ ವಾಹನವನ್ನು ಸ್ವಂತ ಹಣದಲ್ಲಿ ಶೀಘ್ರವೇ ಆಸ್ಪತ್ರೆಗೆ ನೀಡಲಾಗುವುದು ಎಂದು ಶಾಸಕರು ಭರವಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರಭಾರಿ ತಾಲ್ಲೂಕು ಆರೋಗ್ಯಾಧಿಕಾರಿ ಉಮೇಶ್,  ವೈದ್ಯಾಧಿಕಾರಿ ಷಣ್ಮುಖಪ್ಪ, ಪ್ರಕೃತಿ ಯೋಗ ಚಿಕಿತ್ಸಾ
ಕೇಂದ್ರದ ವೈದ್ಯರಾದ ಡಾ.ಶ್ವೇತಾ, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಮಹೇಶ್ವರಪ್ಪ. ಸರ್ಕಾರಿ ನೌಕರರ ಸಂಘದ ಖಜಾಂಚಿ ಸಿ.ಬಿ. ನಾಗರಾಜ್ ಸೇರಿದಂತೆ, ಆಶಾ ಕಾರ್ಯಕರ್ತೆಯರು, ಶುಶ್ರೂಷಕರು, ಆಸ್ಪತ್ರೆ ಸಿಬ್ಬಂದಿಗಳಿದ್ದರು.

error: Content is protected !!